ADVERTISEMENT

ಸಿನಿಮಾ ಹಾಡುಗಳು ನಿತ್ಯ ಬದುಕಿನ ‘ಬಿಜಿಎಂ...’: ಜಯಂತ್ ಕಾಯ್ಕಿಣಿ

‘ಬೆಳ್ಳಿತೆರೆ: ಕವಿತೆ ಹಾಡಾದಾಗ’ ಗೋಷ್ಠಿಯಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 14:50 IST
Last Updated 9 ಆಗಸ್ಟ್ 2024, 14:50 IST
<div class="paragraphs"><p>ಜಯಂತ್ ಕಾಯ್ಕಿಣಿ</p></div>

ಜಯಂತ್ ಕಾಯ್ಕಿಣಿ

   

ಬೆಂಗಳೂರು: ಸಿನಿಮಾ ಗೀತೆಗಳು ಮತ್ತು ಸಿನಿಮಾಗೆ ಅಳವಡಿಸುವ ಕವಿತೆಗಳಿಗೆ ಅವುಗಳದ್ದೇ ಆದ ಆಯಾಮಗಳಿದ್ದು, ಇವೆರಡನ್ನೂ ಪ್ರತ್ಯೇಕವಾಗಿಯೇ ನೋಡಬೇಕು...‌

ಬುಕ್‌ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಶುಕ್ರವಾರ ನಡೆದ ‘ಬೆಳ್ಳಿತೆರೆ: ಕವಿತೆ ಹಾಡಾದಾಗ’ ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು.

ADVERTISEMENT

ಚರ್ಚೆಗೆ ಚಾಲನೆ ನೀಡಿದ ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ, ‘ಸಿನಿಮಾ ಗೀತೆ ಮತ್ತು ಸಾಹಿತ್ಯ ಎರಡೂ ಸಿನಿಮಾದ ಅವಿಭಾಜ್ಯ ಅಂಗ. ಕವಿಗಳು ಬರೆದ ಗೀತೆಗಳನ್ನು ಬಳಸಿಕೊಳ್ಳುತ್ತಾ ಸಿನಿಮಾ ತನ್ನ ಶ್ರೀಮಂತಿಕೆಯನ್ನು ವಿಸ್ತರಿಸಿಕೊಂಡಿದೆ’ ಎಂದರು.

ಲೇಖಕ ಎನ್.ಎಸ್‌. ಶ್ರೀಧರ್‌ ಮೂರ್ತಿ, ‘ಸಿನಿಮಾ ಮತ್ತು ಸಾಹಿತ್ಯ ನೂರು ವರ್ಷಗಳಿಂದ ನಿರಂತರವಾಗಿ ಜೊತೆಯಾಗಿ ಸಾಗುತ್ತಿವೆ. ಶಿವರಾಮ ಕಾರಂತ, ದ.ರಾ. ಬೇಂದ್ರೆ, ಅನಕೃ, ತರಾಸು, ನಾಡಿಗೇರ ಕೃಷ್ಣರಾಯರು ಸಿನಿಮಾ ಸಾಹಿತ್ಯ ಬರೆದಿದ್ದರು. ನವ್ಯ ಸಾಹಿತ್ಯದಲ್ಲಿ ಲಂಕೇಶ, ಕಂಬಾರ, ಕಾರ್ನಾಡರು ಕೂಡ ಸಿನಿಮಾಗಳಿಗೆ ಸಾಹಿತ್ಯ ರಚಿಸಿದ್ದರು. ಬರಗೂರು ರಾಮಚಂದ್ರಪ್ಪ ಆ ಪರಂಪರೆಯನ್ನು ಮುಂದುವರಿಸಿದ್ದಾರೆ’ ಎಂದರು.

ಸಿನಿಮಾ ಗೀತೆ ಮತ್ತು ಕವಿತೆ ಕುರಿತು ಮಾತನಾಡಿದ ಸಾಹಿತಿ ಜಯಂತ ಕಾಯ್ಕಿಣಿ, ‘ಸಿನಿಮಾ ಹಾಡುಗಳು ನಮ್ಮ ಜೀವನದ ಹಿನ್ನೆಲೆ ಸಂಗೀತ(ಬಿಜಿಎಂ) ಇದ್ದಂತೆ. ಕವಿತೆಯಲ್ಲಿ ಜಗತ್ತಿನ ಸುಖ, ದುಃಖ, ತತ್ವ, ಜ್ಞಾನ, ಸಂಘರ್ಷ ಎಲ್ಲವೂ ಇರುತ್ತವೆ. ಸಿನಿಮಾ ಗೀತೆಗೆ ಈ ಯಾವುದೂ ಅಗತ್ಯವಿಲ್ಲ. ಅದು ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ರಚನೆಯಾಗಿರುತ್ತದೆ. ಹಾಗಾಗಿ, ಸಿನಿಮಾ ಗೀತೆಯನ್ನು ಬೇರೆ ದೃಷ್ಟಿಕೋನದಲ್ಲೇ ನೋಡಬೇಕು’ ಎಂದು ಪ್ರತಿಪಾದಿಸಿದರು.

ಚರ್ಚೆ, ಕವಿತೆ ಸಿನಿಮಾದ ಹಾಡಾದಾಗ ಆಗುವಂತಹ ಅರ್ಥ ವ್ಯತ್ಯಾಸದತ್ತ ಹೊರಳಿತು. ‘ದ.ರಾ ಬೇಂದ್ರೆಯವರ ‘ಮೂಡಲ ಮನೆಯ..’ ಕವಿತೆ, ಅರವಿಂದರ ಜ್ಞಾನದ ಬೆಳಕಿನ ವಿವರ ನೀಡುತ್ತದೆ. ಕವಿತೆಯಲ್ಲಿ ‘ಇದು ಬೆಳಗಲ್ಲವೋ ಅಣ್ಣ’ ಎಂಬ ಸಾಲಿದೆ. ಆದರೆ, ಸಿನಿಮಾಕ್ಕೆ ಅಳವಡಿಸಿರುವ ಗೀತ ಸಾಹಿತ್ಯದಲ್ಲಿ ಆ ಸಾಲೂ ಇಲ್ಲ, ಗೀತೆಯೂ ಸನ್ನಿವೇಶಕ್ಕೆ ಹೊಂದುವುದಿಲ್ಲ. ಹೀಗೆ ಕವಿತೆಯ ಜೀವಂತಿಕೆಯ ಸಾಲನ್ನು ತೆಗೆಯುವುದು ಕವಿತೆಗೆ ಮಾಡಿದ ಅನ್ಯಾಯ’ ಎಂದು ಶ್ರೀಧರಮೂರ್ತಿ ಹೇಳಿದರು.

ಗಾಯಕಿ ನಾಗಚಂದ್ರಿಕಾ ಭಟ್, ‘ಇಂದು ಎನೆಗೆ ಗೋವಿಂದ‘, ‘ದೀಪವು ನಿನ್ನದೇ ಗಾಳಿಯು ನಿನ್ನದೇ..‘ ಸೇರಿದಂತೆ ಹಲವು ಕವಿಗೀತೆಗಳನ್ನು ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.