ADVERTISEMENT

ಬೆಂಗಳೂರು | ಸೈಬರ್ ವಂಚಕರಿಗೆ ಸಿಮ್‌ ಪೂರೈಕೆ: ಆರೋಪಿ ಬಂಧನ

ವಿಮಾನ ನಿಲ್ದಾಣದ ಮೂಲಕ ಪಾರ್ಸೆಲ್ - ತೈವಾನ್, ಕಾಂಬೋಡಿಯಾಗೆ ಪೂರೈಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:59 IST
Last Updated 19 ಮೇ 2024, 15:59 IST
   

ಬೆಂಗಳೂರು: ಜನರ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಸಿಮ್‌ ಕಾರ್ಡ್‌ಗಳನ್ನು ಖರೀದಿಸಿ ಸೈಬರ್ ವಂಚಕರಿಗೆ ಪೂರೈಕೆ ಮಾಡುತ್ತಿದ್ದ ಆರೋಪಿ ನಾರಾ ಶ್ರೀನಿವಾಸ್ ರಾವ್ (55) ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ನಾರಾ ಶ್ರೀನಿವಾಸ್ ರಾವ್, ವಿಮಾನದ ಮೂಲಕ ಸಿಮ್‌ ಕಾರ್ಡ್‌ಗಳನ್ನು ಬೇರೆ ದೇಶಕ್ಕೆ ಪೂರೈಸುತ್ತಿದ್ದ. ಇದನ್ನು ಪತ್ತೆ ಮಾಡಿದ್ದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಠಾಣೆಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.

‘ಹಲವು ಜನರ ಆಧಾರ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಆರೋಪಿ ಸಂಗ್ರಹಿಸಿದ್ದ. ಮೊಬೈಲ್ ಸೇವಾ ಕಂಪನಿಯ ಕೆಲ ಪ್ರತಿನಿಧಿಗಳ ಸಹಾಯದಿಂದ ಹೊಸ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿದ್ದ. ಅದೇ ಸಿಮ್‌ ಕಾರ್ಡ್‌ಗಳನ್ನು ಕೊರಿಯರ್ ಮೂಲಕ ತೈವಾನ್ ಮತ್ತು ಕಾಂಬೋಡಿಯಾ ದೇಶಗಳಿಗೆ ಕಳುಹಿಸುತ್ತಿದ್ದ’ ಎಂದರು.

ADVERTISEMENT

ಜೀನ್ಸ್ ಪ್ಯಾಂಟ್‌ನಲ್ಲಿ ಸಿಮ್‌ ಕಾರ್ಡ್: ‘ಚೆನ್ನೈನ ವ್ಯಕ್ತಿಯೊಬ್ಬರು ನಿರ್ವಹಣೆ ಮಾಡುತ್ತಿರುವ ಕೊರಿಯರ್ ಏಜೆನ್ಸಿಯೊಂದರ ಮೂಲಕ ಆರೋಪಿ, ಸಿಮ್‌ಕಾರ್ಡ್‌ಗಳನ್ನು ಪಾರ್ಸೆಲ್ ಕಳುಹಿಸಿದ್ದ. ಜೀನ್ಸ್ ಪ್ಯಾಂಟ್‌ನೊಳಗೆ 24 ಸಿಮ್‌ಕಾರ್ಡ್‌ಗಳನ್ನು ಬಚ್ಚಿಟ್ಟಿದ್ದ’ ಎಂದು ಪೊಲೀಸರು ಹೇಳಿದರು.

‘ವಿಮಾನ ನಿಲ್ದಾಣದ ಕಾರ್ಗೊ ವಿಭಾಗಕ್ಕೆ ಬಂದಿದ್ದ ಪಾರ್ಸೆಲ್ ಪರಿಶೀಲನೆ ನಡೆಸಿದಾಗ, ಸಿಮ್‌ಕಾರ್ಡ್‌ಗಳು ಪತ್ತೆಯಾದವು. ಪಾರ್ಸೆಲ್ ಬುಕ್ಕಿಂಗ್ ಮಾಡಿದ್ದ ವಿಳಾಸ ಆಧರಿಸಿ ನಾರಾ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ. ಇವರು ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ ಮಾಹಿತಿ ಲಭ್ಯವಾಗಿದೆ’ ಎಂದರು.

‘ಆರೋಪಿ ಶ್ರೀನಿವಾಸ್ ಕಳುಹಿಸುತ್ತಿದ್ದ ಸಿಮ್‌ಕಾರ್ಡ್‌ಗಳು, ತೈವಾನ್ ಹಾಗೂ ಕಾಂಬೋಡಿಯಾದಲ್ಲಿರುವ ಸೈಬರ್ ವಂಚಕರ ಕೈ ಸೇರುತ್ತಿದ್ದವು. ಅದೇ ಸಿಮ್‌ಕಾರ್ಡ್‌ ಬಳಸಿಕೊಂಡು ವಂಚಕರು, ಜನರಿಗೆ ಕರೆ ಮಾಡುತ್ತಿದ್ದರು. ಅರೆಕಾಲಿಕ ಕೆಲಸ ಹಾಗೂ ಇತರೆ ಆಮಿಷವೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಬಳಿ 100ಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳು ಸಿಕ್ಕಿವೆ. ಆರೋಪಿಗೆ ಜನರ ದಾಖಲೆಗಳು ಎಲ್ಲಿ ಸಿಕ್ಕಿದ್ದವು ? ದಾಖಲೆಗಳನ್ನು ಖರೀದಿ ಮಾಡಿದ್ದರಾ ? ಎಂಬಿತ್ಯಾದಿ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.