ADVERTISEMENT

ಬೆಂಗಳೂರು: ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಆಲದಮರ ಫೌಂಡೇಷನ್ ಸಹಯೋಗದಲ್ಲಿ ಸರ್ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ವ್ಯವಸ್ಥೆ

ವರುಣ ಹೆಗಡೆ
Published 18 ಅಕ್ಟೋಬರ್ 2024, 23:51 IST
Last Updated 18 ಅಕ್ಟೋಬರ್ 2024, 23:51 IST
ಚಿಕಿತ್ಸೆಗೆ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೇಂದ್ರ
ಚಿಕಿತ್ಸೆಗೆ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೇಂದ್ರ   

ಬೆಂಗಳೂರು: ಮಾನಸಿಕವಾಗಿ ಅಸ್ವಸ್ಥರಾಗಿರುವ ರಸ್ತೆಬದಿಯ ನಿರ್ಗತಿಕರಿಗೆ ಇಲ್ಲಿನ ಸರ್‌ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೈಕೆ ಮತ್ತು ಚಿಕಿತ್ಸೆ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲಿಗೆ ಹೀಗೆ ನಿರ್ಗತಿಕರನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಆಲದಮರ ಫೌಂಡೇಷನ್‌ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ಕೇಂದ್ರ ಸಿದ್ಧಪಡಿಸಲಾಗಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಚಿಕಿತ್ಸೆ ಒದಗಿಸಲಿದ್ದು, ಫೌಂಡೇಷನ್‌ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದಂತೆ ನಿರ್ಗತಿಕ ಮಾನಸಿಕ ಅಸ್ವಸ್ಥರನ್ನು ಫೌಂಡೇಷನ್‌ ಪ್ರತಿನಿಧಿಗಳೇ ಗುರುತಿಸಿ, ಚಿಕಿತ್ಸೆಗೆ ಕರೆತರುವರು. ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ಈ ಕೆಂದ್ರದಲ್ಲಿ ಸದ್ಯ 19 ಮಂದಿ ಮಾನಸಿಕ ಅಸ್ವಸ್ಥ ನಿರ್ಗತಿಕರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ.

ADVERTISEMENT

ಆಸ್ಪತ್ರೆಯ ಹಾಲಿ ಕಟ್ಟಡದಲ್ಲಿಯೇ ಈ ಕೇಂದ್ರವನ್ನು ಸಿದ್ಧ‍ಪಡಿಸಲಾಗಿದ್ದು, ಮನೋವೈದ್ಯಕೀಯ ಚಿಕಿತ್ಸೆಯ ಜತೆಗೆ ಸಾಮಾಜಿಕ ಬೆಂಬಲವನ್ನೂ ಮಾನಸಿಕ ರೋಗಿಗಳಿಗೆ ಒದಗಿಸಲಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ಔಷಧ, ಆಹಾರ ಸೇರಿ ಎಲ್ಲವನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಅವರ ನೆರವಿಗೆ ಸಿಬ್ಬಂದಿಯನ್ನೂ ಫೌಂಡೇಷನ್‌ ವತಿಯಿಂದ ನಿಯೋಜಿಸಲಾಗುತ್ತದೆ. ಈ ಮೂಲಕ ಬೀದಿ ಬದಿಯ ಮಾನಸಿಕ ಅಸ್ವಸ್ಥ ನಿರ್ಗತಿಕರು ಹೊಸ ಬದುಕು ಕಂಡುಕೊಳ್ಳಲು ನೆರವು ನೀಡಲಾಗುತ್ತಿದೆ. 

ಸಮಗ್ರ ಚಿಕಿತ್ಸೆ:

ಕೇಂದ್ರಕ್ಕೆ ದಾಖಲಾದವರಿಗೆ ಮನೋವೈದ್ಯಕೀಯ ಚಿಕಿತ್ಸೆಗೆ ಫೌಂಡೇಷನ್‌ ಕಡೆಯಿಂದಲೇ ಮನೋವೈದ್ಯರನ್ನು ನಿಯೋಜಿಸಲಾಗಿದೆ. ಅವರೇ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಒದಗಿಸಲಿದ್ದಾರೆ.

ಅಸ್ವಸ್ಥರಿಗೆ ಮಾನಸಿಕ ಸಮಸ್ಯೆಗಳ ಜತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಆಸ್ಪತ್ರೆಯ ವೈದ್ಯರೇ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಔಷಧ ಹಾಗೂ ಆಹಾರವನ್ನು ಆಸ್ಪತ್ರೆ ಕಡೆಯಿಂದಲೇ ನೀಡಲಾಗುತ್ತದೆ.

‘ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ಗತಿಕ ಮಾನಸಿಕ ಅಸ್ವಸ್ಥರ ಚಿಕಿತ್ಸೆಗೆ ಕೇಂದ್ರ ಪ್ರಾರಂಭಿಸಲಾಗಿದೆ. ದಾಖಲಾತಿಯಿಂದ ಚೇತರಿಕೆ ಅವಧಿಯವರೆಗಿನ ಎಲ್ಲ ಚಿಕಿತ್ಸೆ ಹಾಗೂ ಆರೈಕೆ ಉಚಿತವಾಗಿ ಇರಲಿದೆ. ಕೌಟುಂಬಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಮನೆಯಿಂದ ಹೊರದೂಡಲ್ಪಟ್ಟು, ಮಾನಸಿಕ ಅಸ್ವಸ್ಥರಾದವರಿಗೆ ಹೊಸ ಜೀವನ ರೂಪಿಸಿಕೊಳ್ಳಲು ಈ ಕೇಂದ್ರ ಸಹಕಾರಿಯಾಗಲಿದೆ’ ಎಂದು ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಕೆ.ಎಸ್. ತಿಳಿಸಿದರು.

ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಈ ಕೇಂದ್ರ ಆಶಾಕಿರಣ ಆಗಲಿದ್ದು ಸಮಗ್ರ ಮನೋವೈದ್ಯಕೀಯ ಆರೈಕೆಯ ಜತೆಗೆ ಸಾಮಾಜಿಕ ಬೆಂಬಲವನ್ನೂ ಒದಗಿಸಲಾಗುತ್ತದೆ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಚೇತರಿಕೆ ಬಳಿಕ ಆಶ್ರಯ ವ್ಯವಸ್ಥೆ

ಬಸ್‌ ನಿಲ್ದಾಣ ಪಾದಚಾರಿ ಮಾರ್ಗಗಳು ಸೇರಿ ವಿವಿಧೆಡೆಯಲ್ಲಿರುವ ಮಾನಸಿಕ ಅಸ್ವಸ್ಥ ನಿರ್ಗತಿಕರನ್ನು ಗುರುತಿಸುವ ಆಲದ ಮರ ಫೌಂಡೇಷನ್‌ನ ಸದಸ್ಯರು ಅವರಿಗೆ ಆಸ್ಪತ್ರೆಯಲ್ಲಿನ ಕೇಂದ್ರದಲ್ಲಿ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಲಿದ್ದಾರೆ. ಕೇಂದ್ರದಲ್ಲಿ ಚಿಕಿತ್ಸೆ ಪಡೆದವರಿಗೆ ಚೇತರಿಕೆಯ ಬಳಿಕ ಅವರ ಕೌಟುಂಬಿಕೆ ಹಿನ್ನೆಲೆ ವಿಚಾರಿಸಿ ಅವರಿಗೆ ಸೂರು ಇಲ್ಲದಿದ್ದರೆ ನಿರಾಶ್ರಿತ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಮಾಡುತ್ತಾರೆ.  ಕೇಂದ್ರಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಮುಂದೆ ಫೌಂಡೇಷನ್ ಸಹಯೋಗದಲ್ಲಿ ಈ ಯೋಜನೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.