ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಎಲ್ಲ ಖಾತೆಗಳ ವಹಿವಾಟು ಸ್ಥಗಿತಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದಾಗಿ ಗೊತ್ತಾಗಿದೆ.
ಹಾಸನ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ದೇಶ ತೊರೆದಿರುವ ಪ್ರಜ್ವಲ್, ಜರ್ಮನಿಗೆ ತೆರಳಿದ್ದರೆಂಬ ಮಾಹಿತಿ ಇತ್ತು. ಇದೀಗ, ಅವರು ಲಂಡನ್‌ನಲ್ಲಿರುವ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ.
‘ರಾಜ್ಯಕ್ಕೆ ವಾಪಸು ಬರಲು ಪ್ರಜ್ವಲ್ ಎರಡು ಬಾರಿ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಆದರೆ, ಬಂಧನದ ಭೀತಿಯಿಂದಾಗಿ ಅವರು ಟಿಕೆಟ್ ರದ್ದುಪಡಿಸಿದ್ದರು. ಪ್ರಜ್ವಲ್ ವಿರುದ್ಧ ಈಗಾಗಲೇ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್‌ಪೋಲ್ ಅಧಿಕಾರಿಗಳು ಪ್ರಜ್ವಲ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದೇ ಮಾಹಿತಿ ಆಧರಿಸಿ ತನಿಖೆಯೂ ಮುಂದುವರಿದಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
‘ಪ್ರಜ್ವಲ್ ತಮ್ಮ ಬ್ಯಾಂಕ್ ಖಾತೆಗಳಿಂದ ವಹಿವಾಟು ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದರೆ, ಹಣಕ್ಕಾಗಿ ಅವರು ಆಪ್ತರನ್ನು ಸಂಪರ್ಕಿಸುವ ಸಾಧ್ಯತೆ ಇರುತ್ತದೆ. ಆಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಗಬಹುದು ಎಂಬ ನಿರೀಕ್ಷೆ ಇದೆ. ಪ್ರಜ್ವಲ್‌ಗೆ ಸಂಬಂಧಪಟ್ಟ ಎಲ್ಲ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.