ADVERTISEMENT

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಎಸ್‌ಐಟಿ ರದ್ದು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:20 IST
Last Updated 18 ಡಿಸೆಂಬರ್ 2023, 23:20 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019–20ರಿಂದ 2022–23ನೇ ಸಾಲಿನಲ್ಲಿ ನಡೆದಿದ್ದ ಕಾಮಗಾರಿಗಳ ಅಕ್ರಮ ತನಿಖೆಗೆ ರಚಿಸಿದ್ದ ವಿಶೇಷ ತನಿಖಾ ಸಮಿತಿಗಳನ್ನು (ಎಸ್‌ಐಟಿ) ಸರ್ಕಾರ ರದ್ದುಪಡಿಸಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ವಿಚಾರಣಾ ಆಯೋಗವು ತನಿಖೆಯನ್ನು ಮುಂದುವರಿಸುತ್ತದೆ ಎಂದು ಡಿ.15ರ ಆದೇಶದಲ್ಲಿ ತಿಳಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಒಎಫ್‌ಸಿ ಕೇಬಲ್‌ ಅಳವಡಿಕೆ, ಬೃಹತ್‌ ನೀರುಗಾಲುವೆ, ಕೇಂದ್ರ– ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರು, ಸ್ವಾಧೀನಾನುಭವ ಪತ್ರ, ಕೆರೆಗಳ ಅಭಿವೃದ್ಧಿ, ಸ್ಮಾರ್ಟ್‌ ಸಿಟಿ ಯೋಜನೆ, ವಾರ್ಡ್‌ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ದೂರು ಪ್ರಕರಣಗಳ ತನಿಖಾ ವರದಿಯನ್ನು ಶಿಫಾರಸ್ಸಿನೊಂದಿಗೆ 30 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನಾಲ್ಕು ತಜ್ಞರ ತನಿಖಾ ಸಮಿತಿಗಳನ್ನು 2023ರ ಆ.5ರಂದು ರಚಿಸಲಾಗಿತ್ತು.

ADVERTISEMENT

ಹೈಕೋರ್ಟ್‌ ವಿಶೇಷ ತನಿಖಾ ಸಮಿತಿಗಳ ತನಿಖೆಗೆ ತಡೆಯಾಜ್ಞೆ ನೀಡಿದೆ. ನಾಗಮೋಹನ್‌ ದಾಸ್‌ ಅವರ ವಿಚಾರಣಾ ಆಯೋಗಕ್ಕೆ ವಹಿಸಲಾಗಿರುವ ವಸ್ತುವಿಷಯಗಳ ಬಹುಪಾಲು ಅಂಶಗಳಲ್ಲಿ ಸಾಮ್ಯತೆ ಇರುವುದರಿಂದ, ಒಂದೇ ಸಂಸ್ಥೆಯಿಂದ ತನಿಖೆ ಕೈಗೊಳ್ಳುವುದು ಸೂಕ್ತ ಎಂದು ತೀರ್ಮಾನಿಸಲಾಗಿದೆ.

ತನಿಖಾ ಸಮಿತಿಗಳು ತಮ್ಮ ಸುಪರ್ದಿಯಲ್ಲಿರುವ ಎಲ್ಲ ಕಡತ, ದಾಖಲೆ, ಮಾಹಿತಿಗಳನ್ನು ನಾಗಮೋಹನ್‌ ದಾಸ್‌ ಅವರ ವಿಚಾರಣಾ ಆಯೋಗಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆದು ಬಿಬಿಎಂಪಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.