ಬೆಂಗಳೂರು: ‘ದೇಶದ ಜಾತ್ಯತೀತ, ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆಯಾಗುತ್ತಿದ್ದು, ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ನವನಿರ್ಮಾಣ ವೇದಿಕೆ ಸೋಮವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 96ನೇ ಜನ್ಮದಿನದ ಕಾರ್ಯಕ್ರಮದಲ್ಲಿ ‘ಭಾರತ–75: ಮುಂದಿನ ಸವಾಲುಗಳು’ ಕುರಿತು ಮಾತನಾಡಿದ ಅವರು, ‘ಸ್ವಾತಂತ್ರ್ಯದ 75 ವರ್ಷಗಳ ನಂತರ ಭಾರತ ಪ್ರಗತಿ ಸಾಧಿಸುತ್ತಿದೆಯೇ ಅಥವಾ ಹಿನ್ನಡೆಯ ದಾರಿಯಲ್ಲಿ ಸಾಗುತ್ತಿದೆಯೇ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನುಡಿದರು.
‘ಸರ್ಕಾರದ ನಿಲುವುಗಳಿಗೆ ವಿರೋಧ ವ್ಯಕ್ತಪಡಿಸಿದರೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ.ಭಯ ಮತ್ತು ಹಿಂಸಾಚಾರದ ಸನ್ನಿವೇಶದಲ್ಲಿ ಯಾವುದೇ ರಾಜಕೀಯ ವ್ಯವಸ್ಥೆಗೆ ಉಳಿಗಾಲವಿಲ್ಲ’ ಎಂದರು.
‘ಭಾರತವು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಹಾಗೂ ವೈವಿಧ್ಯ ಹೊಂದಿರುವ ರಾಷ್ಟ್ರ. ಆದರೆ, ಈ ರಾಷ್ಟ್ರಕ್ಕೆ ಧಾರ್ಮಿಕ ಸ್ಪರ್ಶ ನೀಡುವ ಹುನ್ನಾರ ನಡೆಯುತ್ತಿದೆ. ಇಸ್ಲಾಮಿಕ್ ರಿಪಬ್ಲಿಕ್ ರೀತಿಯಲ್ಲಿ ಹಿಂದೂ ರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ. ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಗಿರುವುದರಿಂದ ಭಾರತ ಏಕೆ ಹಿಂದೂ ರಾಷ್ಟ್ರವಾಗಬಾರದು ಎನ್ನುವ ವಾದ ಮಂಡಿಸುವವರಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಿದ್ಧಾಂತಗಳನ್ನು ರಕ್ಷಿಸಬೇಕು’ಎಂದು ಹೇಳಿದರು.
‘ಚುನಾವಣೆಯಲ್ಲಿ ಯಾವುದೇ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆದರೂ ಬಿಜೆಪಿಯೇ ಸರ್ಕಾರ ರಚಿಸುತ್ತದೆ. ಹಣವೇ ಮುಖ್ಯವಾದರೆ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಸಂಸತ್‌ನಲ್ಲೂ ಯಾವುದೇ ಚರ್ಚೆಗಳು ಇಲ್ಲದೆಯೇ ಮಸೂದೆಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ಆಕ್ಷೇಪ ವ್ಯಕ್ತಪಡಿಸಿತ್ತು’ ಎಂದರು.
‘ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ರಾಜಕೀಯ ಪಕ್ಷದ ಅಂಗ ಸಂಸ್ಥೆಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ‘ರಾಮಕೃಷ್ಣ ಹೆಗಡೆ ಅವರು ನಿಜವಾದ ಪ್ರಜಾಪ್ರಭುತ್ವವಾದಿಯಾಗಿದ್ದರು. ಸಂವಿಧಾನದ ಬಗ್ಗೆ ಗೌರವ ಹೊಂದಿದ್ದರು. ಹೆಗಡೆ ಅವರು ಹಲವಾರು ಪ್ರತಿಭಾವಂತರನ್ನು ಗುರುತಿಸಿ ಬೆಳೆಸಿದರು. ನನ್ನನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು’ ಎಂದು ಸ್ಮರಿಸಿದರು.
‘ಪ್ರಜಾವಾಣಿಯಲ್ಲಿನ ವಾಣಿಯನ್ನು ನಿತ್ಯವೂ ಓದುತ್ತಿದ್ದ ಹೆಗಡೆ ಅವರು ಸಂಬಂಧಪಟ್ಟ ಸಚಿವರಿಗೆ ತಕ್ಷಣವೇ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.
‘ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಮಂಡಳ ಪಂಚಾಯತ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಹತ್ವದ ನಿರ್ಧಾರವನ್ನು ರಾಮಕೃಷ್ಣ ಹೆಗಡೆ ಕೈಗೊಂಡಿದ್ದರು. ಇದು ದಿಟ್ಟ ನಿರ್ಧಾರವಾಗಿತ್ತು’ ಎಂದು ನೆನಪಿಸಿದರು.
‘ಬುದ್ಧಿವಂತರು ಮತ್ತು ಜನಪ್ರಿಯ ಹಾಗೂ ಮುತ್ಸದ್ಧಿ ರಾಜಕಾರಣಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಪ್ರಧಾನಿಯಾಗಬೇಕಾಗಿತ್ತು’ ಎಂದರು.
‘ಸಂವಿಧಾನ ಕೆಟ್ಟವರ ಕೈಯಲ್ಲಿದೆ’
‘ಸಂವಿಧಾನ ಇಂದು ಕೆಟ್ಟವರ ಕೈಯಲ್ಲಿದೆ. ಪ್ರಜಾಪ್ರಭುತ್ವ ಮತ್ತ ಸಂವಿಧಾನ ಆಶಯಗಳಿಗೆ ಅಪಾಯ ಸೃಷ್ಟಿಯಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಸಂವಿಧಾನ ಒಳ್ಳೆಯವರ ಕೈಯಲ್ಲಿದ್ದರೆ ಜನರಿಗೂ ಒಳ್ಳೆಯದಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯದಿದ್ದರೆ ಯಾರೂ ಉಳಿಯುವುದಿಲ್ಲ.ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವದ ಸೌಧವನ್ನೇ ನಾಶ ಮಾಡುವ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಹೀಗಾಗಿ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.