ADVERTISEMENT

ಶಾಲಾ ವಿದ್ಯಾರ್ಥಿಗಳಿಗೆ ‘ಉದ್ಯಮಶೀಲತೆ’ ಕಾರ್ಯಾಗಾರ

ಸೃಜನ ಶೀಲ ಕಲಿಕೆ, ಉದ್ಯಮಶೀಲ ಗುಣ ರೂಪಿಸುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:15 IST
Last Updated 4 ಏಪ್ರಿಲ್ 2024, 16:15 IST
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು   

ಬೊಮ್ಮನಹಳ್ಳಿ: ಶಾಲಾ ಮಕ್ಕಳು ಮತ್ತು ಶಿಕ್ಷಕರಲ್ಲಿ ಉದ್ಯಮಶೀಲತೆ, ನಾವೀನ್ಯತೆ ಮತ್ತು ವಿನ್ಯಾಸ ಚಿಂತನೆಯನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಎರಡು ದಿನಗಳ 'ಉದ್ಯಮಶೀಲತಾ ಕಾರ್ಯಾಗಾರ ಬನ್ನೇರುಘಟ್ಟ ರಸ್ತೆ ಎಎಂಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಆರಂಭವಾಯಿತು.

ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯಾಗಾರದಲ್ಲಿ ಸಹಭಾಗಿಯಾಗಿವೆ.

ವೇಗವಾಗಿ ವಿಕಾಸಗೊಳ್ಳುತ್ತಿರುವ ತಂತ್ರಜ್ಞಾನ ಯುಗದಲ್ಲಿ ಅದಕ್ಕೆ ಪೂರಕವಾದ ಕಲಿಕಾ ವಿಧಾನವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ರೂಪಿಸುವ ಅಗತ್ಯವಿದೆ. ಇದನ್ನು ಮನಗಂಡು ಶಾಲಾ ಹಂತದಲ್ಲೇ ಸೃಜನಶೀಲ ಕಲಿಕೆ ಅಳವಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

ADVERTISEMENT

ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ  ವಿಮರ್ಶಾತ್ಮಕ ಚಿಂತನೆ ಬೆಳೆಸುವುದು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಬೆಳೆಸುವುದು ಸೇರಿದಂತೆ, ಉದ್ಯಮಶೀಲತೆಯ ಗುಣವನ್ನು ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

‘ದೇಶದಾದ್ಯಂತ 300 ಕ್ಕೂ ಹೆಚ್ಚು ಶಾಲೆಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ವಿಷಯ ತಜ್ಞರ ಜತೆ ಮಾತುಕತೆ, ಸಂವಾದ, ಉಪನ್ಯಾಸ, ವಿಚಾರ ಗೋಷ್ಠಿಗಳು ಪ್ರತ್ಯೇಕವಾಗಿ ನಡೆಯಲಿವೆ. ‘ಇಂತಹ ಕಾರ್ಯಾಗಾರಗಳು ದೇಶದಾದ್ಯಂತ ವಿವಿಧ ಭಾಗಗಳಲ್ಲಿ ನಡೆಯಲಿದ್ದು ಸುಮಾರು ಮೂರು ಕೋಟಿ ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಲಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಕುಮಾರ್ ಹೇಳಿದರು.

‘ಇಂತಹ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ನನಗೂ ಉದ್ಯಮಿಯಾಗುವ ಕನಸಿದೆ. ಇದಕ್ಕೆ ಪೂರಕವಾಗಿ ಈ ಕಾರ್ಯಾಗಾರ ಸಹಕಾರಿ ಆಗುತ್ತದೆಂದು ಭಾವಿಸಿದ್ದೇನೆ’ ಎಂದು ವಿಜಯನಗರದ ಬಿ.ಎನ್.ಪಿ.ಎಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಹೇಮಂತ್ ಪ್ರತಿಕ್ರಿಯಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಟಯೋಟಾ ಕಿರ್ಲೋಸ್ಕರ್ ಪ್ರೈ.ಲಿಮಿಟೆಡ್‌ನ ವ್ಯವಸ್ಥಾಪಕ ಹೆಚ್.ಎಸ್.ಮಂಜುನಾಥ್ ‘ಜಗತ್ತು ತಂತ್ರಜ್ಞಾನದ ನಾಗಾಲೋಟದಲ್ಲಿರುವಾಗ ದೇಶವೂ ಅದರೊಟ್ಟಿಗೆ ಅದೇ ವೇಗದಲ್ಲಿ ಹೆಜ್ಜೆ ಹಾಕಬೇಕು. ಅದಕ್ಕಾಗಿ ಅತ್ಯುತ್ತಮ ತಂತ್ರಜ್ಞರನ್ನು ಹೊರತರಲು ನಮ್ಮ ಶಾಲಾ ಕಾಲೇಜುಗಳು ಮಹತ್ವದ ಪಾತ್ರ ವಹಿಸಬೇಕು. ಪ್ರಾಯೋಗಿಕವಾದ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಬದಲಾವಣೆ ತರುವುದು ಜರೂರಿದೆ’ ಎಂದರು.

ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರದೀಪ್ ಢಾಗೆ, ಉಪ ಪ್ರಾಂಶುಪಾಲ ಡಾ.ಜಿ.ಶಿವಕುಮಾರ್, ಎಎಂಸಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಮೋಹನ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.