ಬೆಂಗಳೂರು: ಬೆಂಕಿ ಅವಘಡ ಹಾಗೂ ರಸ್ತೆ ಅಪಘಾತಪ್ರಕರಣಗಳಲ್ಲಿ ಗಾಯಾಳುಗಳಿಗೆ ಚರ್ಮ ಕಸಿ ಚಿಕಿತ್ಸೆ ಒದಗಿಸಲು ಅವಶ್ಯವಿರುವಷ್ಟುಚರ್ಮ ಲಭಿಸುತ್ತಿಲ್ಲ. ಶೇ 80ರಷ್ಟು ಗಾಯಾಳುಗಳು ಈ ಕಾರಣದಿಂದಲೇ ಚರ್ಮ ಕಸಿ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.
ವ್ಯಕ್ತಿ ಮೃತಪಟ್ಟಾಗ ಕುಟುಂಬಸ್ಥರು ಅಂಗಾಂಗದ ಮಾದರಿಯಲ್ಲಿಯೇ ಚರ್ಮವನ್ನು ಕೂಡ ದಾನ ಮಾಡಬಹುದು. ಆದರೆ, ಮೂಢನಂಬಿಕೆ ಹಾಗೂ ತಪ್ಪು ಕಲ್ಪನೆಯಿಂದಾಗಿ ಚರ್ಮದ ಬೇಡಿಕೆ ಮತ್ತು ಪೂರೈಕೆ ನಡುವೆ ಅಜಗಜಾಂತರವಿದೆ. 2016ರಲ್ಲಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಆರಂಭಿಸಿದ್ದ ರಾಜ್ಯದ ಮೊದಲ ‘ಸ್ಕಿನ್ ಬ್ಯಾಂಕ್’ ಈವರೆಗೆ 99 ಮೃತ ದಾನಿಗಳಿಂದಚರ್ಮ ಸಂಗ್ರಹಿಸಿ, ಇತರ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ನೀಡಿದೆ. ಆದರೆ,ಸದ್ಯ 6 ಸಾವಿರ ಚದರ ಸೆಂ.ಮೀ. ಚರ್ಮ ಮಾತ್ರ ಲಭ್ಯವಿದೆ. ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಮಾಡುವುದು ಸ್ಕಿನ್ ಬ್ಯಾಂಕ್‌ಗೆ ಸವಾಲಾಗಿದೆ.
‘ಸುಟ್ಟ ಗಾಯ, ರಸ್ತೆ ಅಪಘಾತ ಸೇರಿದಂತೆ ವಿವಿಧ ಸಂದರ್ಭದಲ್ಲಿ ಶೇ 50ಕ್ಕೂ ಅಧಿಕ ಚರ್ಮ ಹಾನಿಯಾದವರು ಚೇತರಿಸಿಕೊಳ್ಳಲು ಚರ್ಮದ ಕಸಿ ಅತ್ಯಗತ್ಯ. ವ್ಯಕ್ತಿ ಮೃತಪಟ್ಟ 6ರಿಂದ 8ಗಂಟೆಯೊಳಗೆ ಚರ್ಮವನ್ನು ಪಡೆದುಕೊಳ್ಳಬೇಕು. ಬೆಂಗಳೂರಿನಂತಹ ಮಹಾನಗರದಲ್ಲಿ ಸಂಚಾರ ಸಮಸ್ಯೆ ಹೆಚ್ಚು. ಹಾಗಾಗಿ ಮೃತ ವ್ಯಕ್ತಿ ಇರುವ ಸ್ಥಳವನ್ನು ಈ ಸೀಮಿತ ಅವಧಿಯೊಳಗೆ ತಲುಪಿ, ಚರ್ಮ ಪಡೆಯುವುದು ಸವಾಲಾಗಿದೆ. ಬಹುತೇಕ ಪ್ರಕರಣಗಳಲ್ಲಿಮೃತರ ಕುಟುಂಬದ ಸದಸ್ಯರು ಕೂಡ ವಿಷಯ ತಿಳಿಸಲು ವಿಳಂಬ ಮಾಡುತ್ತಾರೆ. ಈ ಕಾರಣದಿಂದಾಗಿ ಚರ್ಮ ಸಂಗ್ರಹಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ಸ್ಕಿನ್ ಬ್ಯಾಂಕ್ ಮೇಲ್ವಿಚಾರಕ ಬಿ.ಎನ್. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೃತ ದಾನಿಯ ಕಾಲಿನ ಹಾಗೂ ತೊಡೆಯ ಭಾಗದ ಚರ್ಮದ ಮೇಲ್ಪದರವನ್ನು ಪಡೆದುಕೊಳ್ಳುತ್ತೇವೆ. ಪ್ರತಿ ವ್ಯಕ್ತಿಯಿಂದ 500ರಿಂದ 3 ಸಾವಿರ ಚದರ ಸೆಂ.ಮೀ. ಚರ್ಮವನ್ನು ತೆಗೆಯುತ್ತೇವೆ.ಆದರೆ, ಚರ್ಮವು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದ ವ್ಯಕ್ತಿಗೆ ಕಸಿ ಮಾಡಲು 3 ಸಾವಿರ ಚದರ ಸೆಂ ಮೀ.ವರೆಗೂ ಚರ್ಮ ಬೇಕಾಗುತ್ತದೆ. ಚರ್ಮ ಒದಗಿಸುವಂತೆ ರಾಜ್ಯದ ವಿವಿಧೆಡೆಗಳಿಂದ ಬೇಡಿಕೆ ಬರುತ್ತಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೂರೈಕೆ ಮಾಡಲಾಗುತ್ತಿದೆ. ನಗರದ ಹೊರವಲಯದಲ್ಲೂ ಎರಡು ಕಡೆ ಚರ್ಮ ಸಂಗ್ರಹ ಕೇಂದ್ರ ಆರಂಭಿಸುವ ಚಿಂತನೆ ನಡೆದಿದೆ’ ಎಂದು ಮಾಹಿತಿ ನೀಡಿದರು.
**
ರಾಜ್ಯದ ವಿವಿಧೆಡೆ ಸಂಗ್ರಹ ಕೇಂದ್ರ
‘18 ವರ್ಷ ದಾಟಿದ ವ್ಯಕ್ತಿ ಮರಣ ಹೊಂದಿದ ಬಳಿಕ ಕುಟುಂಬದ ಒಪ್ಪಿಗೆ ಪಡೆದು ಚರ್ಮ ಪಡೆಯಲಾಗುತ್ತದೆ. ಬಳಿಕ ದಾನಿ ಎಚ್ಐವಿ, ಎಚ್‌ಸಿವಿ, ಕ್ಯಾನ್ಸರ್‌ನಂತಹ ಕಾಯಿಲೆ ಪೀಡಿತರಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅಗತ್ಯ ಇರುವವರಿಗೆ ಚರ್ಮ ನೀಡಲಾಗುತ್ತದೆ. ಚರ್ಮದ ಕೊರತೆ ನೀಗಿಸಬೇಕಾದರೆ ರಾಜ್ಯದ ವಿವಿಧ ಕಡೆ ಸಂಗ್ರಹ ಕೇಂದ್ರ ಆರಂಭಿಸುವುದು ಅನಿವಾರ್ಯ. ಇದಕ್ಕಾಗಿ ರೋಟರಿ ಕ್ಲಬ್‌ನ ಸಹಯೋಗ ಪಡೆದಿದ್ದು, ರಾಜ್ಯದ ವಿವಿಧೆಡೆ ಚರ್ಮ ಸಂಗ್ರಹ ಕೇಂದ್ರ ಆರಂಭಿಸುವ ಚಿಂತನೆ ಇದೆ’ ಎಂದು ಸ್ಕಿನ್ ಬ್ಯಾಂಕ್ ಮುಖ್ಯಸ್ಥ ಡಾ.ಕೆ.ಟಿ. ರಮೇಶ್ ತಿಳಿಸಿದರು.
5 ವರ್ಷ ಶೇಖರಣೆ ಸಾಧ್ಯ
ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರವನ್ನು ಮಾತ್ರ ತೆಗೆದು, ಬ್ಯಾಂಡೇಜ್ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು ಗ್ಲಿಸೆರಾಲ್ ಸಹಾಯದಿಂದ 5 ವರ್ಷದವರೆಗೂ ಶೇಖರಣೆ ಮಾಡಲು ಸಾಧ್ಯವಿದೆ ಎಂದು ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.