ADVERTISEMENT

ದಕ್ಷಿಣ ಭಾರತದಲ್ಲಿ ಎಸ್‌ಕೆಎಂ ಬಲಪಡಿಸಲು ನಿರ್ಣಯ

ದಕ್ಷಿಣ ಭಾರತ ರಾಜ್ಯಗಳ ಕಿಸಾನ್ ಸಂಯುಕ್ತ ಮೋರ್ಚಾ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:08 IST
Last Updated 8 ಅಕ್ಟೋಬರ್ 2024, 16:08 IST
ದರ್ಶನ್ ಪಾಲ್
ದರ್ಶನ್ ಪಾಲ್   

ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಂಘಟನೆಯನ್ನು ಬಲಗೊಳಿಸುವುದು,  ಆಯಾ ರಾಜ್ಯಗಳಲ್ಲಿ ರೈತ ಮುಖಂಡರ ಸಭೆಗಳನ್ನು ನಡೆಸಿ, ಸ್ಥಳೀಯ ರೈತರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ರೂಪಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ದಕ್ಷಿಣ ಭಾರತದ ರಾಜ್ಯಗಳ ನಾಯಕರ ಎರಡು ದಿನಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸಭೆಯ ನಿರ್ಣಯಗಳ ಕುರಿತು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಕೆಎಂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಂಜಾಬ್‌ನ ದರ್ಶನ್ ಪಾಲ್ ಮಾಹಿತಿ ನೀಡಿದರು.

‘ನವೆಂಬರ್ 15ರೊಳಗೆ ಆಯಾ ರಾಜ್ಯಗಳಲ್ಲಿರುವ ಎಲ್ಲ ರೈತ ಸಂಘಟನೆಗಳ ಮುಖಂಡರ, ಸಭೆ ಅಥವಾ ಸಮಾವೇಶಗಳನ್ನು ನಡೆಸುವುದು. ಕೃಷಿ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಾಧಿಸುವುದು. ನ.26ರಂದು ಜಿಲ್ಲಾ ಮಟ್ಟದಲ್ಲಿ ರೈತರ ಬೃಹತ್ ಸಮಾವೇಶ ನಡೆಸುವ ಮೂಲಕ, ಆ ದಿನವನ್ನು ದಕ್ಷಿಣ ಭಾರತದ ಅತ್ಯಂತ ಐತಿಹಾಸಿಕ ದಿನವನ್ನಾಗಿಸಲು ತೀರ್ಮಾನಿಸಲಾಗಿದೆ’ ಎಂದು ವಿವರಿಸಿದರು.‌

ADVERTISEMENT

‘ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಬಲಗೊಳಿಸಬೇಕು. ರೈತರ ಮೇಲೆ ವಿಧಿಸುವ ಮಾರುಕಟ್ಟೆ ತೆರಿಗೆ ಅಥವಾ ಸೆಸ್‌ಗಳನ್ನು ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣವನ್ನು ವಿರೋಧಿಸುವ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ರೈತರಿಂದಲೇ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ (ಎಂಎಸ್‌ಪಿ) ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಪ್ಯಾಲೆಸ್ಟೀನ್‌ನಲ್ಲಿ ಇಸ್ರೇಲ್‌ ನಡೆಸುತ್ತಿರುವ ನರಮೇಧವನ್ನು ಸಭೆಯಲ್ಲಿ ಖಂಡಿಸಲಾಯಿತು. ಅಲ್ಲಿ ತಕ್ಷಣವೇ ಶಾಶ್ವತ ಯುದ್ಧವಿರಾಮ ಘೋಷಿಸಬೇಕು. ಭಾರತ ಸರ್ಕಾರ ಇಸ್ರೇಲ್‌ನೊಂದಿಗಿನ ಶಸ್ತ್ರಾಸ್ತ್ರ ಪೂರೈಕೆ ಮತ್ತು ವ್ಯಾಪಾರ ವ್ಯವಹಾರವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂಬ ವಿಶೇಷ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಕೆಎಂ ರಾಷ್ಟ್ರೀಯ ನಾಯಕರಾದ ದೆಹಲಿಯ ಕೃಷ್ಣಪ್ರಸಾದ್‌, ಮಧ್ಯಪ್ರದೇಶದ ಸುನಿಲಂ, ತೆಲಂಗಾಣದ ವಿ.ವೆಂಕಟರಾಮಯ್ಯ, ಪದ್ಮ ಪಸ್ಯಾ, ಆಂಧ್ರಪ್ರದೇಶದ ವದ್ದೇ ಸಾಂಬಶಿವರಾವ್‌, ಕೇರಳದ ವಿಜುಕೃಷ್ಣ ಹಾಗೂ ಕರ್ನಾಟಕದ ರೈತ ಮುಖಂಡರದಾದ ಜಿ.ಸಿ.ಬಯ್ಯಾರೆಡ್ಡಿ ಮತ್ತು ಬಡಗಲಪುರ ನಾಗೇಂದ್ರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.