ಬೆಂಗಳೂರು: ಬಾನಿನಿಂದ ಬೆಂಗಳೂರು ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವಂತಹ ದೇಶದ ಅತೀ ಎತ್ತರದ ವೀಕ್ಷಣಾ ಗೋಪುರವನ್ನು ನಗರದಲ್ಲಿ ನಿರ್ಮಿಸುವ ಪ್ರಸ್ತಾವನೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ (ಎಲ್) ಎಯು ಸಂಸ್ಥೆಯು ವಿಶ್ವ ವಿನ್ಯಾಸ ಸಂಸ್ಥೆ ಸಹಯೋಗದಲ್ಲಿ ಸ್ಕೈ ಡೆಕ್ (ವೀಕ್ಷಣಾ ಗೋಪುರ) ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಿದೆ. ಈ ವಿನ್ಯಾಸವನ್ನು ಪರಿಶೀಲಿಸಿದ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಯೋಜನೆ ಅನುಷ್ಠಾನಕ್ಕೆ 8 ರಿಂದ 10 ಎಕರೆ ಭೂಮಿಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ವಿನ್ಯಾಸದ ವಿಡಿಯೊ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದವರಲ್ಲಿ ಹಲವರು ಮೊದಲು ಸುಸಜ್ಜಿತ ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಿಸುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. ಕೆಲವರು ಇದು ದುಂದು ವೆಚ್ಚವೆಂದು ಟೀಕಿಸಿದರೆ, ಇನ್ನೂ ಕೆಲವರು ಇದರಿಂದ ಬೆಂಗಳೂರಿನ ‘ಬ್ರ್ಯಾಂಡ್’ ಮೌಲ್ಯ ವೃದ್ಧಿಯಾಗುತ್ತದೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
‘ಸಂಚಾರ ದಟ್ಟಣೆ, ಪಾದಚಾರಿ ಮಾರ್ಗ ದುಸ್ಥಿತಿ, ಮೆಟ್ರೊ ಕಾಮಗಾರಿ ವಿಳಂಬ, ಕಸ’ ಸೇರಿ ನಗರದ ವಿವಿಧ ಸಮಸ್ಯೆಗಳ ಬಗ್ಗೆಯೇ ಬಹುತೇಕರು ಪ್ರಸ್ತಾಪಿಸಿದ್ದು, ಗೋಪುರ ನಿರ್ಮಾಣದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಗೋಪುರದ ಮೇಲೆ ನಿಂತು ರಸ್ತೆಗುಂಡಿ ನೋಡಬೇಕೇ’, ‘ಕಸದ ಬೆಟ್ಟ ವೀಕ್ಷಿಸಬೇಕೇ’ ಎಂದೂ ಕೆಲವರು ಕಾಲೆಳೆದಿದ್ದಾರೆ.
‘ಐದು ತಿಂಗಳ ಬಳಿಕ ಕನಕಪುರಕ್ಕೆ ಪ್ರಯಾಣ ಮಾಡಿದೆ. ರಸ್ತೆ ಅಪಾಯಕಾರಿಯಾಗಿದ್ದು, ಚಾಲನೆ ಕಷ್ಟಸಾಧ್ಯ. ಯಾವುದೇ ಸೂಚನಾ ಫಲಕಗಳು ಕಾಣಸಿಗುವುದಿಲ್ಲ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ’ ಎಂದು ಲೋಕನಾಥ್ ಡಿ. ಎನ್ನುವವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘ಇದು ನೋಡಲು ಚೆನ್ನಾಗಿದೆ. ಆದರೆ, ನಗರದ ಬಹುದೊಡ್ಡ ಸಮಸ್ಯೆ ಸಂಚಾರ ದಟ್ಟಣೆ. ಉಪನಗರ ರೈಲ್ವೆ ಕಾರಿಡಾರ್ ಅನ್ನು ಮೊದಲು ಕಾರ್ಯಗತಗೊಳಿಸಿ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಶೇ 30 ರಷ್ಟು ನಿವಾರಣೆಯಾಗಲಿದೆ. ನಮಗೆ ಶುದ್ಧ ಗಾಳಿ, ನೀರು ಹಾಗೂ ಸಾರಿಗೆ ಅಗತ್ಯ’ ಎಂದು ಕಮಲಾಕರ್ ಪಂಡಿತ್ ತಿಳಿಸಿದ್ದಾರೆ.
‘ಇದನ್ನು ಗ್ರಾಫಿಕ್ ವಿನ್ಯಾಸದಲ್ಲಿ ನೋಡಲು ಚೆನ್ನಾಗಿ ಇರುತ್ತದೆ. ವಾಸ್ತವದಲ್ಲಿ ಇದು ಸಾಧ್ಯವಿಲ್ಲ’ ಎಂದು ಅನಂತ್ ಕುಹಕವಾಡಿದ್ದಾರೆ.
ಪ್ರವಾಸಿ ತಾಣ: ಅನಿಕೇಶ್ ಗುಪ್ತ ಎನ್ನುವವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಬೆಂಗಳೂರಿಗೆ ಇಂತಹ ಪ್ರವಾಸಿ ತಾಣ ಅಗತ್ಯ. ಇದು ಉತ್ತಮವಾದ ಪ್ರಾಜೆಕ್ಟ್. ಇದು ಬೆಂಗಳೂರಿಗೆ ಹೊಸ ಗುರುತನ್ನು ನೀಡಲಿದೆ’ ಎಂದು ಶ್ಲಾಘಿಸಿದ್ದಾರೆ.
‘ಈ ಗೋಪುರ ನಿರ್ಮಾಣದಿಂದ ಬೆಂಗಳೂರು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ. ಸ್ವಾತಂತ್ರ್ಯ ಉದ್ಯಾನವು ಇದನ್ನು ನಿರ್ಮಿಸಲು ಉತ್ತಮವಾದ ಸ್ಥಳ’ ಎಂದಿ ನಂದೀಶ್ ಜೆ.ಆರ್. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀಟರ್), ಶಾಂಘೈನ ಶಾಂಘೈ ಟವರ್ (632 ಮೀಟರ್), ಚೀನಾದ ಶೆಂಜೆನ್‌ನ ಪಿಂಗ್ ಆನ್ ಫೈನಾನ್ಸ್ ಸೆಂಟರ್ (599 ಮೀಟರ್), ಚೀನಾದ ಗುಂವಾಂಗ್ಶುವಿನ ಕ್ಯಾಂಟನ್ ಟವರ್ (597 ಮೀಟರ್), ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್ ಟವರ್ (555 ಮೀಟರ್) ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ.
250 ಮೀ. ಎತ್ತರ ಗೋಪುರ
ಪ್ರಸ್ತಾಪಿತ ವೀಕ್ಷಣಾ ಗೋಪುರವು 250 ಮೀಟರ್ ಎತ್ತರವಿರಲಿದೆ. ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ 182 ಮೀ. ಎತ್ತರವಿದೆ. ತಮಿಳುನಾಡಿನ ರಾಮೇಶ್ವರ ಟಿ.ವಿ. ಟವರ್ 323 ಮೀ. ಎತ್ತರವಿದ್ದರೂ ಅದು ಮನುಷ್ಯರು ನಿಂತು ವೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ನಿರ್ಮಾಣವಾಗುವ ಗೋಪುರವು ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ ಎಂಬ ಹಿರಿಮೆಗೆ ಭಾಜನವಾಗಲಿದೆ. ಈ ಗೋಪುರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ನೀಡಬೇಕೆನ್ನುವುದು ಪ್ರಸ್ತಾವದಲ್ಲಿ ಇದೆ. ಪ್ರದರ್ಶನ ಸ್ಕೈ ಡೆಕ್ ಬಾರ್ ಮತ್ತು ರೆಸ್ಟೊರೆಂಟ್ ಗಣ್ಯರ ಪ್ರದೇಶ ಸೇರಿ ಹಲವು ವೈಶಿಷ್ಟ್ಯಗಳಿರಲಿವೆ. ಚೀನಾದ ಶಾಂಘೈ ಟವರ್ ಈ ಯೋಜನೆಗೆ ಪ್ರೇರಣೆಯಾಗಿದೆ. ಇದನ್ನು ನಾಗವಾರ ಹಲಸೂರು ಕೆರೆ ಅಥವಾ ವೈಟ್‌ಫೀಲ್ಡ್‌ನಲ್ಲಿ ನಿರ್ಮಿಸುವ ಬಗ್ಗೆ ಚರ್ಚೆಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.