ಬೆಂಗಳೂರು: ಶರವೇಗದಲ್ಲಿ ನುಗ್ಗುವ ವಾಹನಗಳ ನಡುವೆ ಜೀವ ಬಿಗಿ ಹಿಡಿದು ರಸ್ತೆ ದಾಟುವ ಪಾದಚಾರಿಗಳ ಪರದಾಟ ನಗರದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಈ ಸಮಸ್ಯೆ ತಪ್ಪಿಸಲು ಪಾಲಿಕೆ ಅಲ್ಲಲ್ಲಿ ಪಾದಚಾರಿ ಮೇಲ್ಸೇತುವೆಗಳನ್ನು (ಸ್ಕೈವಾಕ್) ನಿರ್ಮಿಸಿದೆಯಾದರೂ, ಅವು ಜನರ ಪಾಲಿಗೆ ಗಗನ ಕುಸುಮದಂತಾಗಿವೆ.
ಬೆರಳೆಣಿಕೆಯಷ್ಟು ಸ್ಕೈವಾಕ್‌ಗಳನ್ನು ಮಾತ್ರ ಜನ ಬಳಸುತ್ತಿದ್ದು, ಅವು ಅಪಘಾತ ತಪ್ಪಿಸುವಲ್ಲಿ ಪಾತ್ರ ವಹಿಸುತ್ತಿವೆ. ಆದರೆ, ಬಹುತೇಕ ಸೇತುವೆಗಳನ್ನು ಪಾದಚಾರಿಗಳಿಗೆ ಉಪಯೋಗಕ್ಕೆ ಬಾರದ ಜಾಗದಲ್ಲಿ ನಿರ್ಮಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಬಿಬಿಎಂಪಿ ನಿರ್ಮಿಸಿದ ಸ್ಕೈವಾಕ್‌ಗಳಲ್ಲಿ ಹೆಚ್ಚಿನವು ಪಾದಚಾರಿಗಳ ಅನುಕೂಲಕ್ಕಿಂತ ಹೆಚ್ಚಾಗಿ ಜಾಹೀರಾತು ಪ್ರದರ್ಶನಕ್ಕೆ ಆದ್ಯತೆ ನೀಡುವಂತಿವೆ ಎಂಬ ಆರೋಪವೂ ಇದೆ.
ಪಾದಚಾರಿಗಳು ಸಾಮಾನ್ಯವಾಗಿ ರಸ್ತೆ ದಾಟುವುದು ಜಂಕ್ಷನ್‌ಗಳ ಬಳಿ. ಆದರೆ, ಇಂತಹ ಜಂಕ್ಷನ್‌ಗಳ ಬಳಿ ಸ್ಕೈವಾಕ್‌ಗಳು ಇಲ್ಲವೇ ಇಲ್ಲ ಎಂಬಷ್ಟು ವಿರಳ. ಜನರು ಅವು ಇರುವಲ್ಲಿಗೆ ನಡೆದುಕೊಂಡು ಹೋಗಿ ಮೆಟ್ಟಿಲು ಹತ್ತಿ, ಇಳಿಯಬೇಕಾಗುತ್ತದೆ. ಈ ಸಾಹಸದ ನಡುವೆ ರಸ್ತೆ ದಾಟಲು ಕನಿಷ್ಠ 20 ನಿಮಿಷ ಬೇಕಾಗುತ್ತದೆ. ಇಷ್ಟು ತಾಳ್ಮೆ ಮತ್ತು ಸಮಯ ಬೆಂಗಳೂರಿನ ಜನರಿಗೆ ಇಲ್ಲ. ಈ ಕಾರಣದಿಂದಾಗಿಯೇ ಬಹುತೇಕ ಸೇತುವೆಗಳನ್ನು ಪಾದಚಾರಿಗಳು ಬಳಸುವುದೇ ಇಲ್ಲ.
ಬಸವೇಶ್ವರ ವೃತ್ತ, ಕಂಠೀರವ ಕ್ರೀಡಾಂಗಣ, ನೆಹರೂ ತಾರಾಲಯ, ದೊಮ್ಮಲೂರು ಜಂಕ್ಷನ್, ಕೆ.ಜಿ.ರಸ್ತೆ, ಮಹಾರಾಣಿ ಕಾಲೇಜು, ಯಶವಂತಪುರ ಬಳಿ ಇರುವ ಸ್ಕೈವಾಕ್‌ಗಳು ಇದಕ್ಕೆ ಉದಾಹರಣೆ. ಈ ರೀತಿಯ ನೂರಾರು ಸ್ಕೈವಾಕ್‌ಗಳು ಜನ ಬಳಕೆಗೆ ಯೋಗ್ಯವಾದ ಜಾಗದಲ್ಲಿ ಇಲ್ಲ.
ಇತ್ತೀಚೆಗೆ ಬಿಬಿಎಂಪಿಗೆ ಪತ್ರ ಬರೆದಿದ್ದ ಈ ಹಿಂದಿನ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ. ಹರಿಶೇಖರನ್, ‘ಪಾದಚಾರಿಗಳಿಗೆ ಅನುಕೂಲವಲ್ಲದ ಜಾಗದಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದೆ. ಅಧಿಕಾರಿಗಳು ಒತ್ತಡಗಳಿಗೆ ಒಳಗಾಗಿ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿ ಎಲ್ಲೆಂದರಲ್ಲಿ ಸ್ಕೈವಾಕ್ ನಿರ್ಮಿಸುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದ್ದರು.
34 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಸ್ಕೈವಾಕ್‌ಗಳು ಬೇಕಿರುವ 109 ಜಾಗಗಳನ್ನು ಅವರು ಗುರುತಿಸಿದ್ದರು. ‘ಪೊಲೀಸರು ಗುರುತಿಸಿದ ಜಾಗದಲ್ಲಿ ಸ್ಕೈವಾಕ್‌ಗಳು ನಿರ್ಮಾಣವಾಗಿಲ್ಲ. ಕೆಲವು ಸ್ಕೈವಾಕ್‌ಗಳನ್ನು ಸ್ಥಳಾಂತರ ಮಾಡಬೇಕು. ಸ್ಕೈ ವಾಕ್ ನಿರ್ಮಿಸುವಾಗ ಸಂಚಾರ ಪೊಲೀಸರ ಸಲಹೆಯನ್ನೂ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದ್ದರು.
ತಪ್ಪು ಮರುಕಳಿಸದಂತೆ ಎಚ್ಚರಿಕೆ
‘ಖಾಸಗಿ ಕಂಪನಿಗಳ ಜಾಹೀರಾತು ಪ್ರಸಾರಕ್ಕೆ ಮಾತ್ರ ಅನುಕೂಲ ಆಗುವ ಜಾಗಗಳಲ್ಲಿ ಸ್ಕೈವಾಕ್‌ಗಳಿವೆ ಎಂಬ ದೂರುಗಳು ನನಗೂ ಬಂದಿವೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
‘ಯಾವುದೋ ಖಾಸಗಿ ಕಂಪನಿ ಹೇಳಿದ ಜಾಗದಲ್ಲಿ ಸ್ಕೈವಾಕ್ ನಿರ್ಮಿಸಿದರೆ ಪಾದಚಾರಿಗಳಿಗೆ ಉಪಯೋಗ ಆಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮೇಯರ್ ಮತ್ತು ಆಯುಕ್ತರ ಗಮನಕ್ಕೆ ತಾರದೆ ಸ್ಕೈವಾಕ್ ನಿರ್ಮಿಸಬಾರದು ಮತ್ತು ಸಂಚಾರ ಪೊಲೀಸರ ಸಲಹೆಯನ್ನೂ ಪಡೆಯಬೇಕು ಎಂದು ಆದೇಶ ಹೊರಡಿಸಲು ಆಯುಕ್ತರಿಗೆ ಸೂಚಿಸುತ್ತೇನೆ’ ಎಂದು ಹೇಳಿದರು.
‘ಸಂಚಾರ ಪೊಲೀಸರಿಗೆ ಅನಾಹುತಗಳ ಅರಿವಿರುತ್ತದೆ. ಹೀಗಾಗಿ ಸ್ಕೈವಾಕ್ ನಿರ್ಮಿಸುವ ಸಂದರ್ಭದಲ್ಲಿ ಅವರು ಗುರುತು ಮಾಡಿರುವ ಸ್ಥಳಗಳಿಗೇ ಆದ್ಯತೆ ನೀಡಲು ಸೂಚನೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಖಾಸಗಿ ಕಂಪನಿಗಳ ಒತ್ತಡ
ಬಹುತೇಕ ಪಾದಚಾರಿ ಮೇಲ್ಸೇತುವೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಇವುಗಳ ನಿರ್ಮಾಣಕ್ಕೆ ಬೇಕಿರುವ ವೆಚ್ಚವನ್ನು ಖಾಸಗಿ ಕಂಪನಿಗಳು ನೋಡಿಕೊಳ್ಳುತ್ತವೆ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಲಾಜಿಗೆ ಒಳಗಾಗುತ್ತಾರೆ.ಇದರ ಪರಿಣಾಮ ಜನರಿಗೆ ಬೇಡವಾದ ಕಡೆಗಳಲ್ಲಿ ಸ್ಕೈವಾಕ್‌ಗಳು ತಲೆ ಎತ್ತಿವೆ ಎಂದು ಸಾರಿಗೆ ತಜ್ಞರು ಆರೋಪಿಸುತ್ತಾರೆ.
‘ವೃತ್ತಗಳ ಬಳಿಯಲ್ಲಿ ಸ್ಕೈವಾಕ್‌ಗಳಿದ್ದರೆ ಜನ ಬಳಕೆ ಮಾಡುತ್ತಾರೆ. ದೂರದಲ್ಲಿದ್ದರೆ ಹುಡುಕಿಕೊಂಡು ಹೋಗಿ ರಸ್ತೆ ದಾಟಲು ಸಾಧ್ಯವೇ’ ಎಂದು ಸಾರಿಗೆ ತಜ್ಞ ಎಂ.ಎನ್. ಶ್ರೀಹರಿ ಪ್ರಶ್ನಿಸಿದರು.
‘ಪಾದಚಾರಿಗಳ ಅನುಕೂಲಕ್ಕಿಂತ ಜಾಹೀರಾತುಗಳು ದೊಡ್ಡದಾಗಿ ಕಾಣಿಸುವಂತಹ ಜಾಗವನ್ನು ಖಾಸಗಿ ಕಂಪನಿಗಳು ಆಯ್ಕೆ ಮಾಡುತ್ತವೆ. ಹೀಗಾಗಿ ಜನರಿಗೆ ಅನುಕೂಲ ಆಗುತ್ತಿಲ್ಲ. ಸಂಚಾರ ಪೊಲೀಸರು ಬಿಬಿಎಂಪಿಗೆ ನೀಡಿರುವ ವರದಿ ಸರಿಯಾಗಿಯೇ ಇದೆ. ಎಲ್ಲವನ್ನೂ ಸ್ಥಳಾಂತರ ಮಾಡಬೇಕಿದೆ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿ ಅಂದಾಜು 150 ಸ್ಕೈವಾಕ್‌ಗಳಿವೆ. ಒಂದು ಸ್ಕೈವಾಕ್‌ಗೆ ₹2 ಕೋಟಿಯಿಂದ ₹3 ಕೋಟಿ ವೆಚ್ಚವಾಗಿದೆ. ನಿರ್ಮಾಣಕ್ಕೂ ಮುನ್ನ ಸಮೀಕ್ಷೆಯನ್ನಾಗಲೀ, ಅಧ್ಯಯನವನ್ನಾಗಲೀ ಬಿಬಿಎಂಪಿ ಅಧಿಕಾರಿಗಳು ನಡೆಸಿಯೇ ಇಲ್ಲ. ₹450 ಕೋಟಿ ವ್ಯರ್ಥವಾಗಿದೆ’ ಎಂದು ಅವರು ಆರೋಪಿಸಿದರು.
ಪೊಲೀಸರ ಆಕ್ಷೇಪಗಳೇನು?
*ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಸ್ಕೈವಾಕ್‌ಗಳು ಸಂಚಾರ ಪೊಲೀಸ್ ವಿಭಾಗದಿಂದ ಗುರುತಿಸಲಾಗಿರುವ ಸ್ಥಳದಲ್ಲಿ ಇಲ್ಲ. ಇದು ಸಂಚಾರದ ಸಮಸ್ಯೆ ನೀಗಿಸುವ ಬದಲು ಮತ್ತಷ್ಟು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.
*ಸ್ಕೈವಾಕ್ ನಿರ್ಮಾಣದ ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ತಂದು ತಮಗೆ ಬೇಕಾದ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿಸುತ್ತಿರುವ ಪ್ರವೃತ್ತಿ ಕಂಡು ಬಂದಿದೆ.
ಸಂಚಾರ ಪೊಲೀಸರ ಸಲಹೆಗಳೇನು
*ಪೊಲೀಸರು ಗುರುತಿಸಿದ ಸ್ಥಳ ಸೂಕ್ತವಲ್ಲ ಎನಿಸಿದರೆ ಬಿಬಿಎಂಪಿ ಮತ್ತು ಪೊಲೀಸರು ಜಂಟಿ ಪರಿವೀಕ್ಷಣೆ ಕೈಗೊಂಡು ನಂತರ ಸ್ಕೈವಾಕ್ ನಿರ್ಮಿಸಬೇಕು
*ಸ್ಕೈವಾಕ್‌ಗಳನ್ನು ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ವಿನ್ಯಾಸಗೊಳಿಸಬೇಕು
*ಅತ್ಯಾವಶ್ಯ ಇರುವ ಜಾಗದಲ್ಲಿ ಮಾತ್ರ ಸ್ಕೈವಾಕ್ ನಿರ್ಮಾಣ ಮಾಡಬೇಕು
*ಮುಖ್ಯರಸ್ತೆಗೆ ಅಡಚಣೆ ಆಗದ ರೀತಿಯಲ್ಲಿಸ್ಕೈವಾಕ್ ನಿರ್ಮಾಣ ಕಾಮಗಾರಿ ನಿರ್ವಹಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.