ಬೆಂಗಳೂರು: ತಂತಾನೆ ಚಲಿಸುವ ಕಾರುಗಳು ನಮ್ಮ ದೇಶದ ರಸ್ತೆಗಳಲ್ಲೂ ಅಂತಹ ಕಾರುಗಳನ್ನು ಓಡಾಡಲಿವೆಯೇ? ಸಂಚಾರ ನಿಯಮ ಉಲ್ಲಂಘನೆ ಹಾಸುಹೊಕ್ಕಾಗಿರುವ ನಮ್ಮಲ್ಲಿನ ವ್ಯವಸ್ಥೆಗೆ ಅಂತಹ ಕಾರುಗಳು ಒಗ್ಗಿಕೊಳ್ಳುತ್ತವೆಯೇ?
ಮುಂತಾದ ಹಲವು ಕುತೂಹಲಕರ ಪ್ರಶ್ನೆಗಳಿಗೆ ‘ಮಿಸ್ತ್ರಾಲ್ ಸಲ್ಯೂಷನ್ಸ್’ ಸಂಸ್ಥೆಯ ಸಂಸ್ಥಾಪಕ ರಾಜೀವ್ ರಾಮಚಂದ್ರ ಉತ್ತರಿಸಿದರು.
‘ಮುನ್ನೋಟ’ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ‘ನಾಳೆಯ ಬುದ್ಧಿವಂತ ಕಾರುಗಳು’ ಕುರಿತು ಉಪನ್ಯಾಸ ನೀಡಿದ ರಾಜೀವ್, ‘ತಂತಾನೆ ಚಲಿಸುವ ಕಾರುಗಳನ್ನು ನಮ್ಮ ರಸ್ತೆಗಳಲ್ಲೂ ಕಾಣುವುದು ಕನಸಿನ ಮಾತಾಗಿ ಉಳಿದಿಲ್ಲ. ಅಂತಹ ಕಾರುಗಳನ್ನು ಇಲ್ಲೂ ಕಾಣುವ ದಿನ ದೂರವಿಲ್ಲ. ರಸ್ತೆ ಅಪಘಾತಗಳನ್ನು ಇವು ಬಹುಮಟ್ಟಿಗೆ ಕಡಿಮೆ ಮಾಡಲಿವೆ’ ಎಂದರು.
‘ಬುದ್ಧಿವಂತ ಕಾರುಗಳ ಹಿಂದಿರುವುದು ಚಾಲಕನಿಗೆ ನೆರವಾಗುವ ಅತ್ಯಾಧುನಿಕ ವ್ಯವಸ್ಥೆ (ಅಡಾಸ್) ಹಾಗೂ ಬಿಗುವಿಲ್ಲದ ಬ್ರೇಕಿಂಗ್ ವ್ಯವಸ್ಥೆ (ಎಬಿಎಸ್). ಇಂತಹ ವಾಹನಗಳ ಎರಡೂ ಬದಿಗಳಲ್ಲಿ, ಮುಂಭಾಗ ಮತ್ತು ಹಿಂಭಾಗಗಳಲ್ಲಿ ಕ್ಯಾಮೆರಾಗಳನ್ನು ಹಾಗೂ ಸಂವೇದಕಗಳನ್ನು (ಸೆನ್ಸರ್) ಅಳವಡಿಸಲಾಗಿರುತ್ತವೆ. ಇವು ಕಾರಿನ ಸುತ್ತಲಿನ ವಾತಾವರಣದ ಮಾಹಿತಿ ಪಡೆಯಲು ನೆರವಾಗುತ್ತವೆ. ಇದಕ್ಕಾಗಿ ರೇಡಿಯೊ ತರಂಗಗಳನ್ನು ಆಧರಿಸಿ ಕಾರ್ಯನಿರ್ವಹಿಸುವ ರಾಡಾರ್ ಅಥವಾ ಲೇಸರ್ ಬೆಳಕಿನ ತರಂಗಗಳನ್ನು ಆಧರಿಸಿ ಕೆಲಸ ಮಾಡುವ ಲಿಡಾರ್ ತಂತ್ರಜ್ಞಾನ ಉಪಯೋಗಿಸಲಾಗುತ್ತದೆ. ಮನುಷ್ಯನ ಕಣ್ಣು, ಕಿವಿ ಮೂಗುಗಳು ಕಾರ್ಯ ನಿರ್ವಹಿಸುವ ರೀತಿಯಲ್ಲೇ ಇವು ಕಾರ್ಯನಿರ್ವಹಿಸುತ್ತವೆ’ ಎಂದು ಅವರು ವಿವರಿಸಿದರು.
‘ಹೆದ್ದಾರಿಗಳಲ್ಲಿ ಕಾರು ಸಾಗುತ್ತಿರುವಾಗ ಅದರ ಹಿಂದೆ, ಮುಂದೆ ಅಥವಾ ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ವಾಹನಗಳ ವೇಗವನ್ನೂ ರಾಡಾರ್ ಮೂಲಕ ನಿಖರವಾಗಿ ತಿಳಿಯಬಹುದು. ಅದರ ಆಧಾರದಲ್ಲೇ ಚಾಲನೆಗೆ ಸಂಬಂಧಿಸಿದ ನಿರ್ಧಾರ ತಳೆಯಬಹುದು. ಸೆನ್ಸರ್‌ಗಳೇನಿದ್ದರೂ ಮಾಹಿತಿಯನ್ನು ಒದಗಿಸುತ್ತವೆ. ಆದರೆ, ಅದನ್ನು ಆಧರಿಸಿ ನಿರ್ಧಾರ ತಳೆಯುವುದಕ್ಕೆ ಪೂರಕವಾಗಿ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ರೂಪಿಸಲಾಗುತ್ತದೆ’ ಎಂದು ವಿವರಿಸಿದರು.
‘ಅಡಾಸ್ ನೆರವಿನಿಂದ ಸಂಚಾರ ಸಿಗ್ನಲ್, ರಸ್ತೆ ಗುಂಡಿ, ಎದುರಲ್ಲಿ ವಸ್ತು ಅಡ್ಡ ಬಂದರೆ ಅದರ ಮಾಹಿತಿಯನ್ನೂ ಗ್ರಹಿಸಬಹುದು. ಉಷ್ಣಾಂಶವನ್ನು ಗ್ರಹಿಸುವ ವ್ಯವಸ್ಥೆ ಮೂಲಕ ದಾರಿಯಲ್ಲಿ ಅಡ್ಡ ಬರುವ ವ್ಯಕ್ತಿಗಳ ಇರುವಿಕೆಯ್ನೂ ಗುರುತಿಸಬಹುದು. ಕಗ್ಗತ್ತಲಲ್ಲಿ ಕಪ್ಪು ಕುರಿ ಅಡ್ಡ ಬಂದರೂ ಗುರುತಿಸಿ, ಕಾರು ತನ್ನಿಂದ ತಾನೆ ನಿಲ್ಲುವಂತೆ ಮಾಡುವಷ್ಟು ಖಚಿತ ಮಾಹಿತಿಯನ್ನು ಇದು ಒದಗಿಸಬಲ್ಲುದು. ಈ ವ್ಯವಸ್ಥೆ ಮನುಷ್ಯನ ಮೂರ್ಖ ನಿರ್ಧಾರಗಳನ್ನು ಮೆಟ್ಟಿ ಸ್ವಯಂ ನಿರ್ಧಾರ ತಳೆಯುತ್ತದೆ. ಆದರೆ, ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಅನುಸರಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮತ್ತೆ ಮ್ಯಾನ್ಯುವಲ್ ವ್ಯವಸ್ಥೆಗೆ ಬದಲಾಗಬಹುದು’ ಎಂದರು.
‘ಸದ್ಯಕ್ಕೆ ಚಾಲಕನ ಕೆಲಸವನ್ನು ಸಲೀಸುಗೊಳಿಸುವ ತಂತ್ರಜ್ಞಾನಗಳನ್ನು ಮಾತ್ರ ಬಳಸಲಾಗುತ್ತಿದೆ. ಜಿಪಿಎಸ್, ಜಿಐಎಸ್‌ಗಳನ್ನು ಬಳಸಿಕೊಂಡು ದಿನ ಚಾಲಕನಿಲ್ಲದೇ ಓಡಾಡುವ ಕಾರುಗಳು ನಮ್ಮ ದೇಶದಲ್ಲೂ ಬರಲಿವೆ. ಓಲಾ ಉಬರ್‌ನಂತಹ ಕಂಪನಿಗಳ ಕಾರುಗಳು ಚಾಲಕನಿಲ್ಲದೆಯೇ ಚಲಿಸುವ ದಿನ ದೂರವಿಲ್ಲ. ನಮ್ಮ ಸಂಸ್ಥೆಯೇ ತಂತಾನೆ ಚಲಿಸುವ ಕಾರನ್ನು ಡಿಆರ್‌ಡಿಒಗಾಗಿ ಅಭಿವೃದ್ಧಿಪಡಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.