ADVERTISEMENT

ಬೆಂಗಳೂರು | ಸಮಸ್ಯೆಗಳ ಆಗರ ಕೆ.ಆರ್‌. ಮಾರುಕಟ್ಟೆ

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ: ಸಮಸ್ಯೆಗಳ ಆಗರ, ಬಳಕೆಯಾಗದ ಎಸ್ಕಲೇಟರ್‌

ಬಾಲಕೃಷ್ಣ ಪಿ.ಎಚ್‌
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಒಂದು ನೋಟ
ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಒಂದು ನೋಟ   

ಬೆಂಗಳೂರು: ವಾಹನಗಳ ನಿಲುಗಡೆಗೆ ಸರಿಯಾದ ಜಾಗವಿಲ್ಲ. ಕುಡಿಯುವ ನೀರಿಲ್ಲ. ಗಬ್ಬು ನಾರುತ್ತಿರುವ ಶೌಚಾಲಯ, ಮುಗಿಯದ ಸ್ಮಾರ್ಟ್‌ಸಿಟಿ ಕಾಮಗಾರಿಗಳು...

ಇದು ಕೆ.ಆರ್‌. ಮಾರುಕಟ್ಟೆಯ ದುಃಸ್ಥಿತಿ. ರಸ್ತೆಯಲ್ಲೇ ವ್ಯಾಪಾರವಾಹನಗಳ ನಿಲುಗಡೆಗೆ ಸರಿಯಾದ ಜಾಗವಿಲ್ಲ. ಕುಡಿಯುವ ನೀರಿಲ್ಲ. ಗಬ್ಬು ನಾರುತ್ತಿರುವ ಶೌಚಾಲಯ, ಮುಗಿಯದ ಸ್ಮಾರ್ಟ್‌ಸಿಟಿ ಕಾಮಗಾರಿಗಳು...

ಇದು ಕೆ.ಆರ್‌. ಮಾರುಕಟ್ಟೆಯ ದುಃಸ್ಥಿತಿ. ರಸ್ತೆಯಲ್ಲೇ ವ್ಯಾಪಾರ ಮಾಡುವವರನ್ನು ಅಲ್ಲಿಂದ ಎಬ್ಬಿಸಿ ವಾಹನಗಳು ಓಡಾಡುವಂತೆ ಮಾಡಲು ಪೊಲೀಸರು ಹರಸಾಹಸ ಮಾಡುತ್ತಿರುವುದು ಇಲ್ಲಿ ಪ್ರತಿದಿನ ಕಾಣುವ ದೃಶ್ಯ.

ADVERTISEMENT
ಕೆ.ಆರ್‌ ಮಾರುಕಟ್ಟೆಯ ರಸ್ತೆಯೊಂದರಲ್ಲಿ ನೀರು ನಿಂತಿದ್ದು, ನಾಗರಿಕರು ಮೂಗು ಮುಚ್ಚಿ ಓಡಾಡುವಂತಾಗಿದೆ. ಚಿತ್ರ: ಪಿ ರಂಜು

ಸ್ಮಾರ್ಟ್‌ಸಿಟಿ ಯೋಜನೆಯ ಮಾದರಿ ಕಾಮಗಾರಿಯಾಗಿ ಕೆ.ಆರ್‌. ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿತ್ತು. ಅದಕ್ಕೆ ₹ 34.67 ಕೋಟಿ ಅನುದಾನವನ್ನೂ ಮೀಸಲಿಟ್ಟಿತ್ತು. ಜತೆಗೆ ಮೊಬಿಲಿಟಿ ಹಬ್‌ಗಾಗಿ ₹ 18.68 ಕೋಟಿ ನಿಗದಿ ಮಾಡಿತ್ತು. 2016–17ನೇ ಸಾಲಿನಲ್ಲಿ ಅಭಿವೃದ್ಧಿಗೆ ಚಾಲನೆಯನ್ನೂ ನೀಡಿತ್ತು. 

ಈ ಯೋಜನೆಯಡಿ ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಪಾದಚಾರಿಗಳ ಬಳಕೆಗಾಗಿ ಎಸ್ಕಲೇಟರ್‌ ಕೂಡ ಅಳವಡಿಸಲಾಗಿದೆ. ಇದಾಗಿ 9 ತಿಂಗಳು ಕಳೆದರೂ ಇನ್ನೂ ಎಸ್ಕಲೇಟರ್‌ ಚಾಲನೆಯಲ್ಲಿಲ್ಲ. 

ಹೂವು, ತರಕಾರಿ, ಬಟ್ಟೆ, ಚಪ್ಪಲಿ, ಅಲ್ಯುಮಿನಿಯಂ ಪಾತ್ರೆ, ಸ್ಟೀಲ್ ಪಾತ್ರೆಗಳು, ದಿನಸಿ ಹೀಗೆ 25 ನಮೂನೆಯ ನೂರಾರು ಅಂಗಡಿಗಳು ಇಲ್ಲಿವೆ. ಅಷ್ಟೇ ಪ್ರಮಾಣದಲ್ಲಿ ಬೀದಿಯಲ್ಲಿಯೂ ವ್ಯಾಪಾರ ನಡೆಯುತ್ತಿದೆ. ಆದರೆ, ಇಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇದೆಯಾದರೂ ಸ್ವಚ್ಛತೆ ಇಲ್ಲದ ಕಾರಣ ಮೂಗು ಮುಚ್ಚಿಕೊಂಡು ಹೋಗಬೇಕು ಎಂದು ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ದಿವಾಕರ್ ದೂರಿದರು.

ರಸ್ತೆಯಲ್ಲೇ ಮಳೆ ನೀರು: ಸ್ವಲ್ಪ ಜೋರಾಗಿ ಮಳೆ ಸುರಿದರೆ ಸಾಕು ಮಾರುಕಟ್ಟೆಯ ಸಂಪರ್ಕದ ರಸ್ತೆಗಳೆಲ್ಲ ಕಾಲುವೆಗಳಂತಾಗುತ್ತವೆ. ಅವೆನ್ಯೂ ರಸ್ತೆಯಲ್ಲಿ ಮಳೆ ಬಂದಾಗ ಒಳಚರಂಡಿಯ ಚೇಂಬರ್‌ಗಳು ತೆರೆದುಕೊಂಡು ಹೊರಗೆ ಹರಿಯುತ್ತದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಎಂದು ವ್ಯಾಪಾರಿಗಳು ಪರಿಸ್ಥಿತಿ ವಿವರಿಸಿದರು.

ಟ್ರಾಫಿಕ್ ಸಮಸ್ಯೆ: ವಿಧಾನಸೌಧ ಕಡೆಗೆ ಸಾಗುವ ಬಸ್‌ಗಳಿಗೆ ಬೆಳಿಗ್ಗೆ 9ರಿಂದ 11ರವರೆಗೆ ಅವೆನ್ಯೂ ರಸ್ತೆಯಲ್ಲಿ ಚಲಿಸಲು ಅವಕಾಶ ನೀಡಲಾಗುತ್ತದೆ. ಮುಂಜಾನೆಯೇ ಹೂವು, ಹಣ್ಣು ವ್ಯಾಪಾರಿಗಳು ರಸ್ತೆಯ ತುಂಬೆಲ್ಲ ತುಂಬಿಕೊಂಡಿರುತ್ತಾರೆ. ಅವರನ್ನು ಬೇರೆಡೆಗೆ ಕಳುಹಿಸಿ ಬೆಳಿಗ್ಗೆ 9ರ ಹೊತ್ತಿಗೆ ಬಸ್‌ಗಳು ಸಾಗಲು ವ್ಯವಸ್ಥೆ ಮಾಡಿಕೊಡುವ ಹೊತ್ತಿಗೆ ಸಂಚಾರಿ ಪೊಲೀಸರು ಹೈರಾಣ ಆಗುತ್ತಿದ್ದಾರೆ.

ಬೆಳಿಗ್ಗೆ 11ರ ನಂತರ ತಳ್ಳುಗಾಡಿಗಳಲ್ಲಿ ವ್ಯಾಪಾರ ಶುರುವಾಗುತ್ತದೆ. ಖರೀದಿಗಾಗಿ ಬರುವ ಗ್ರಾಹಕರಿಗೆ ವಾಹನಗಳನ್ನು ನಿಲ್ಲಿಸಲು ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಸ್ಮಾರ್ಟ್‌ಸಿಟಿಯಲ್ಲಿ ವ್ಯಾಪಾರ ಮಳಿಗೆ ನಿರ್ಮಿಸುವ ಯೋಜನೆ ಇದೆ. 275ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ, ಸುಮಾರು 170 ಕಾರುಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಈ ಯೋಜನೆ ಹೊಂದಿದೆ. ಯೋಜನೆ ಜಾರಿಯಾಗಿ ಕಾಮಗಾರಿ ನಡೆದರೆ ಶೌಚಾಲಯದ ಸಮಸ್ಯೆ, ಲೋಡಿಂಗ್‌, ಅನ್‌ಲೋಡಿಂಗ್‌ ಬೇ ಸಮಸ್ಯೆ ಎಲ್ಲ ಇತ್ಯರ್ಥಗೊಳ್ಳಲಿದೆ. ವ್ಯಾಪಾರ ಮಳಿಗೆಯ ಜತೆಗೆ ಮೀನು ಮಾರುಕಟ್ಟೆ, ಮಾಂಸ ಮಾರುಕಟ್ಟೆಗಳೆಲ್ಲ ಇನ್ನೂ ಯೋಜನೆಯ ಹಂತದಲ್ಲೇ ಉಳಿದಿರುವುದರಿಂದ ಸಮಸ್ಯೆ ಹಾಗೇ ಮುಂದುವರಿದಿದೆ.

ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಬಸ್‌ನಿಲ್ದಾಣದ ಬದಿಯಲ್ಲಿ ಬಿದ್ದಿರುವ ಕಸದ ರಾಶಿ -ಪ್ರಜಾವಾಣಿ ಚಿತ್ರ/ರಂಜು ಪಿ
ಕೆ.ಆರ್‌. ಮಾರುಕಟ್ಟೆಯ ಪಾದಚಾರಿ ಸುರಂಗ ಮಾರ್ಗದಲ್ಲಿ ಪಾದಚಾರಿ ಮಾರ್ಗದಲ್ಲಿ ಕತ್ತಲು ಆವರಿಸಿಕೊಂಡಿದೆ -ಪ್ರಜಾವಾಣಿ ಚಿತ್ರ/ರಂಜು ಪಿ
ಕೆ.ಆರ್‌. ಮಾರುಕಟ್ಟೆಯಲ್ಲಿ ಜನರ ಬಳಕೆಯಾಗದ ಎಸ್ಕಲೇಟರ್‌ -ಪ್ರಜಾವಾಣಿ ಚಿತ್ರ/ರಂಜು ಪಿ
ಸುಮನ್
ನಮ್ಮ ಅಜ್ಜನ ಕಾಲದಿಂದ ಅಂದರೆ 70 ವರ್ಷಗಳಿಂದ ಇಲ್ಲಿ ನಮ್ಮ ಕುಟುಂಬ ವ್ಯಾಪಾರ ಮಾಡಿಕೊಂಡು ಬಂದಿದೆ. ನಾನು ಐದು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಶೌಚಾಲಯ ಸರಿಪಡಿಸಬೇಇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
- ಸುಮನಾ ಗೋಡಂಬಿ ದ್ರಾಕ್ಷಿ ವ್ಯಾಪಾರಿ
ಶಾಂತಮ್ಮ
30 ವರ್ಷಗಳಿಂದ ಹೂವು ಮಾರುತ್ತಿದ್ದೇನೆ. ಸಣ್ಣ ಮಳೆ ಬಂದರೆ ಛತ್ರಿ ಹಿಡ್ಕೊಂಡು ವ್ಯಾಪಾರ ಮಾಡುತ್ತೇನೆ. ಜೋರಾಗಿ ಬಂದರೆ ಪಕ್ಕದ ಕಟ್ಟಡದ ಅಡಿ ನಿಲ್ಲಬೇಕಾಗುತ್ತದೆ. ಮಳೆ ನಿಂತ ಮೇಲೆ ಮತ್ತೆ ವ್ಯಾಪಾರ ಮಾಡಬೇಕು.
ಶಾಂತಮ್ಮ ಹೂವು ವ್ಯಾಪಾರಿ
ವೆಂಕಟಮ್ಮ
ನಾವು ರಸ್ತೆ ಬದಿಯಲ್ಲೇ ತರಕಾರಿ ಇಟ್ಟುಕೊಂಡು 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಎಲ್ಲಿ ಜಾಗ ಕೊಡುತ್ತಾರೋ ಅಲ್ಲಿ ವ್ಯಾಪಾರ ಮಾಡೋದು. ಈಗ ಆಷಾಢ ಬಂದಿದ್ದರಿಂದ ವ್ಯಾಪಾರ ಕಡಿಮೆಯಾಗಿದೆ.
ವೆಂಕಟಮ್ಮ ತರಕಾರಿ ವ್ಯಾಪಾರಿ
ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್‌ಸಿಟಿಯಿಂದ ಬಿಬಿಎಂಪಿಗೆ ಹಸ್ತಾಂತರಿಸಿದ ಬಳಿಕ ನಾವು ನಿರ್ವಹಣೆ ಮಾಡಬೇಕು.
ತುಷಾರ್‌ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತ

ಮಳಿಗೆ ನಿರ್ಮಿಸಬೇಕಾದ ಜಾಗದಲ್ಲಿ ಎಸ್ಕಲೇಟರ್‌ ?

‘ಮಳಿಗೆ ನಿರ್ಮಿಸಬೇಕಾದ ಜಾಗದಲ್ಲಿ ಎಸ್ಕಲೇಟರ್‌ ನಿರ್ಮಿಸಿದ್ದಾರೆ. ಇದರ ವಿರುದ್ಧ ಕೋರ್ಟ್‌ಗೆ ಹೋಗಿದ್ದೇನೆ. ಎಸ್ಕಲೇಟರ್‌ ತೆಗೆಯಲು ಕೋರ್ಟ್ ಹೇಳಿದೆ’ ಎಂದು ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ದಿವಾಕರ್ ತಿಳಿಸಿದರು. ರೈತರಿಗೆ ಸುಲಭದಲ್ಲಿ ಮಾರುಕಟ್ಟೆ ಸಿಗಬೇಕು. ಗ್ರಾಹಕರಿಗೆ ಕಡಿಮೆ ಬೆಲೆಗೆ ಹಣ್ಣು ತರಕಾರಿ ಸಹಿತ ನಿತ್ಯ ಬಳಕೆಯ ವಸ್ತುಗಳು ಸಿಗಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್‌ 1928ರಲ್ಲಿ ಈ ಮಾರುಕಟ್ಟೆ ಆರಂಭಿಸಿದ್ದರು. ಅವರಿಗೆ ಇರುವ ದೂರದೃಷ್ಟಿ ಈಗಿನವರಿಗೆ ಇಲ್ಲ. 7 ವರ್ಷಗಳಿಂದ ಸ್ಮಾರ್ಟ್‌ಸಿಟಿ ಹೆಸರಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಯಾವುದೂ ಮುಗಿಯುತ್ತಿಲ್ಲ ಎಂದು ಅವರು ದೂರಿದರು. ಈ ಬಗ್ಗೆ ವಿವರ ಕೇಳಲು ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.