ADVERTISEMENT

ಹೊಸವರ್ಷಕ್ಕೆ ಬರಲಿದೆ ಸ್ಮಾರ್ಟ್‌ ಡಿಎಲ್‌, ಆರ್‌ಸಿ

ರಾಜ್ಯದಲ್ಲಿ ಜಾರಿಯಾಗಲಿದೆ ‘ಒಂದು ದೇಶ ಒಂದು ಕಾರ್ಡ್‌’ ಯೋಜನೆ

ಬಾಲಕೃಷ್ಣ ‍ಪಿ.ಎಚ್‌.
Published 23 ಸೆಪ್ಟೆಂಬರ್ 2024, 23:08 IST
Last Updated 23 ಸೆಪ್ಟೆಂಬರ್ 2024, 23:08 IST
ದೇಶದ ಎಲ್ಲ ರಾಜ್ಯಗಳಲ್ಲಿ ಇದೇ ಮಾದರಿಯ ವಾಹನ ಚಾಲನಾ ಪರವಾನಗಿ (ಡಿಎಲ್‌) ಇರಲಿದೆ
ದೇಶದ ಎಲ್ಲ ರಾಜ್ಯಗಳಲ್ಲಿ ಇದೇ ಮಾದರಿಯ ವಾಹನ ಚಾಲನಾ ಪರವಾನಗಿ (ಡಿಎಲ್‌) ಇರಲಿದೆ   

ಬೆಂಗಳೂರು: ಸ್ಮಾರ್ಟ್‌ ಚಾಲನಾ ಪರವಾನಗಿ (ಡಿಎಲ್‌) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ರಾಜ್ಯದಲ್ಲಿ 2025ರ ಜನವರಿಯಿಂದ ಅನುಷ್ಠಾನಗೊಳ್ಳಲಿದೆ. ಈ ಸ್ಮಾರ್ಟ್‌ ಕಾರ್ಡ್ ಕ್ಯೂಆರ್‌ ಕೋಡ್‌ ಮತ್ತು ಚಿಪ್‌ ಎರಡನ್ನೂ ಹೊಂದಿರಲಿದೆ.

‘ಒಂದು ದೇಶ ಒಂದು ಕಾರ್ಡ್‌’ ಇರಬೇಕು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಈ ಯೋಜನೆಯಂತೆ ದೇಶದಲ್ಲಿ ಒಂದೇ ಮಾದರಿಯ ಕಾರ್ಡ್‌ಗಳನ್ನು ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸಹಿತ ಕೆಲವು ರಾಜ್ಯಗಳು ಇದನ್ನು ಜಾರಿಗೆ ತಂದಿದ್ದವು. ರಾಜ್ಯದಲ್ಲಿ ಡಿಎಲ್‌, ಆರ್‌ಸಿ ಕಾರ್ಡ್‌ ಪೂರೈಕೆಗೆ ಹಿಂದೆ ನೀಡಿದ್ದ ಗುತ್ತಿಗೆ ಅವಧಿ 2024ರ ಫೆಬ್ರುವರಿವರೆಗೆ ಇದ್ದಿದ್ದರಿಂದ ಆನಂತರವಷ್ಟೇ ಹೊಸ ಕಾರ್ಡ್‌ ಪೂರೈಕೆಯ ಗುತ್ತಿಗೆ ಕರೆಯಲು ಸಾರಿಗೆ ಇಲಾಖೆ ನಿರ್ಧರಿಸಿತ್ತು.

‘ಡಿಎಲ್‌, ಆರ್‌ಸಿ ಸ್ಮಾರ್ಟ್‌ಕಾರ್ಡ್‌ಗೆ ಟೆಂಡರ್‌ ಕರೆಯಲಾಗಿದೆ. ಈಗ ಪರಿಶೀಲನೆಯ ಹಂತದಲ್ಲಿದೆ. ಎಲ್ಲ ಪ್ರಕ್ರಿಯೆ ಇನ್ನು ಎರಡು ವಾರದಲ್ಲಿ ಮುಗಿಯಲಿದೆ. ಬಳಿಕ ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರದ ಅನುಮೋದನೆ ಸಿಕ್ಕಿದಲ್ಲಿಂದ 60 ದಿನಗಳಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಣೆ ಆರಂಭಗೊಳ್ಳಲಿದೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌ ತಿಳಿಸಿದರು.

ADVERTISEMENT

ಸ್ಮಾರ್ಟ್‌ ಕಾರ್ಡ್‌ನಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಡಿಎಲ್‌ ಹೊಂದಿರುವವರ ಪ್ರಾಥಮಿಕ ಮಾಹಿತಿ ಸಿಗಲಿದೆ. ಸಂಚಾರದ ಅವಧಿಯಲ್ಲಿ ಪೊಲೀಸರು ಅಥವಾ ಸಾರಿಗೆ ಇಲಾಖೆಯ ಸಿಬ್ಬಂದಿ ಸುಲಭವಾಗಿ ತಪಾಸಣೆ ಮಾಡಬಹುದು. ಈವರೆಗೆ ಸ್ಮಾರ್ಟ್‌ ಕಾರ್ಡ್‌ನಲ್ಲಿ ಚಿಪ್‌ ಮಾತ್ರ ಇತ್ತು. ಚಿಪ್‌ನಲ್ಲಿ ಇರುವ ವಿವರಗಳನ್ನು ನೋಡಲು ಸಾರಿಗೆ ಕಚೇರಿ ಇಲ್ಲವೇ ಪೊಲೀಸ್‌ ಸ್ಟೇಷನ್‌ಗೆ ಬರಬೇಕಿತ್ತು. ಕ್ಯೂಆರ್ ಕೋಡ್‌  ಸೌಲಭ್ಯದಿಂದ, ಇದು ತಪ್ಪಲಿದೆ. ಪೂರ್ಣ ಮಾಹಿತಿ ಮಾತ್ರ ಚಿಪ್‌ನಲ್ಲಿ ಇರುತ್ತದೆ ಎಂದು ಅವರು ತಿಳಿಸಿದರು.

ಡಿಎಲ್‌ನಲ್ಲಿ ಕಾರ್ಡ್‌ದಾರರ ಹೆಸರು, ಫೋಟೊ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಮೊಬೈಲ್‌ ಸಂಖ್ಯೆ, ತುರ್ತು ಸಂಪರ್ಕ ಸಂಖ್ಯೆ ಸಹಿತ 25ಕ್ಕೂ ಹೆಚ್ಚು ಮಾಹಿತಿ ಇರಲಿದೆ. ಜೊತೆಗೆ ಚಿಪ್‌ ಮತ್ತು ಕ್ಯೂಆರ್‌ ಕೋಡ್‌ಗಳು ಇರಲಿವೆ. ಆರ್‌ಸಿ ಕಾರ್ಡಿನ ಮುಂಭಾಗದಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಮಾನ್ಯತಾ ಅವಧಿ, ಚಾಸಿಸ್‌, ಎಂಜಿನ್‌ ಸಂಖ್ಯೆ, ಮಾಲೀಕರ ವಿವರ ಮತ್ತು ವಿಳಾಸ ಇರಲಿದೆ. ಹಿಂಭಾಗದಲ್ಲಿ ಕ್ಯೂಆರ್‌ ಕೋಡ್‌ನೊಂದಿಗೆ ವಾಹನ ತಯಾರಕ ಕಂಪನಿ ಹೆಸರು, ಮಾಡೆಲ್‌, ವಾಹನದ ಶೈಲಿ, ಆಸನ ಸಾಮರ್ಥ್ಯ ಮತ್ತು ಸಾಲ ನೀಡಿದ ಸಂಸ್ಥೆಗಳ ವಿವರಗಳು ಇರುತ್ತವೆ.

ಈಗ ನೀಡಲಾಗುತ್ತಿರುವ ಆರ್‌ಸಿ, ಡಿಎಲ್‌ಗಳು ಪಾಲಿ ವಿನೈಲ್‌ ಕ್ಲೊರೈಡ್‌ (ಪಿವಿಸಿ) ಕಾರ್ಡ್‌ಗಳಾಗಿವೆ. ವರ್ಷ ಕಳೆದಂತೆ ಕಾರ್ಡ್‌ ಮೇಲಿನ ಅಕ್ಷರಗಳು ಅಳಿಸಿ ಹೋಗುವ, ಕಾರ್ಡ್‌ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಹೊಸ ಸ್ಮಾರ್ಟ್‌ಕಾರ್ಡ್‌ ಪಾಲಿ ಕಾರ್ಬೊನೇಟ್‌ ಆಗಿರುವುದರಿಂದ ಮುರಿಯದಿಲ್ಲ, ಅಕ್ಷರ ಅಳಿಸಿ ಹೋಗುವುದಿಲ್ಲ ಎಂದು ಸಾರಿಗೆ ಅಧಿಕಾರಿಗಳು ವಿವರ ನೀಡಿದರು.

ಒಂದೇ ರೀತಿಯ ಕಾರ್ಡ್‌

‘ಒಂದೊಂದು ರಾಜ್ಯಗಳ ಡಿಎಲ್‌ ಆರ್‌ಸಿಗಳು ಒಂದೊಂದು ರೀತಿಯಲ್ಲಿವೆ. ಇನ್ನುಮುಂದೆ ಎಲ್ಲ ರಾಜ್ಯಗಳ ಡಿಎಲ್‌ಗಳು ಆರ್‌ಸಿಗಳು ಒಂದೇ ರೀತಿ ಇರಲಿವೆ. ಕ್ಯೂಆರ್‌ ಕೋಡ್‌ ಸೇರ್ಪಡೆಯಿಂದಾಗಿ ಸಂಚಾರ ಪೊಲೀಸರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳಿಗೆ ವಾಹನ ಚಾಲಕರು ಹಾಗೂ ಮಾಲೀಕರ ವಿವರಗಳ ದೃಢೀಕರಣವನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ’ ಎಂದು ಸಾರಿಗೆ ಆಯುಕ್ತ ಎ.ಎಂ. ಯೋಗೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.