ADVERTISEMENT

ಬೆಂಗಳೂರು: ‘ಸ್ಮಾರ್ಟ್‌ ಪಾರ್ಕಿಂಗ್‌’ ಜೂನ್ 20ರಿಂದ ಆರಂಭ

ಸ್ವಾತಂತ್ರ್ಯ ಉದ್ಯಾನದಲ್ಲಿರುವ ಬಹುಮಹಡಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 0:30 IST
Last Updated 18 ಜೂನ್ 2024, 0:30 IST
ಬಹುಮಹಡಿ ಸ್ಮಾರ್ಟ್ ಪಾರ್ಕಿಂಗ್ ತಾಣ
ಬಹುಮಹಡಿ ಸ್ಮಾರ್ಟ್ ಪಾರ್ಕಿಂಗ್ ತಾಣ   

ಬೆಂಗಳೂರು: ನಗರದ ಹೃದಯ ಭಾಗವಾದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿರುವ ‘ಬಹುಮಹಡಿ ಪಾರ್ಕಿಂಗ್‌ ಕಟ್ಟಡ’ ಜೂನ್‌ 20ರಂದು ಉದ್ಘಾಟನೆಯಾಗಲಿದೆ.

ಬಿಬಿಎಂಪಿ, ನಗರೋತ್ಥಾನ ಯೋಜನೆ ಅಡಿ 2017ರಲ್ಲಿ ಕಟ್ಟಡದ ಕಾಮಗಾರಿ ಆರಂಭಿಸಿತ್ತು. ₹78 ಕೋಟಿ ಖರ್ಚು ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಕಟ್ಟಡದ ಕೆಲಸ ಪೂರ್ಣಗೊಂಡಿದ್ದರೂ ಗುತ್ತಿಗೆದಾರರು ಮುಂದೆ ಬಾರದ ಕಾರಣಕ್ಕೆ ಕಟ್ಟಡ ಬಳಕೆಗೆ ಲಭ್ಯವಾಗಿರಲಿಲ್ಲ.

ಈ ವರ್ಷದ ಆರಂಭದಲ್ಲಿ ಬೆಂಗಳೂರು ಮೂಲದ ‘ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸೆಲ್ಯೂಷನ್‌ ಕಂಪನಿ’ಗೆ ವಾರ್ಷಿಕ ₹1.55 ಕೋಟಿಗೆ ಗುತ್ತಿಗೆ ನೀಡಿತ್ತು. ಈ ಕಂಪನಿ
10 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ಪಾರ್ಕಿಂಗ್ ತಾಣದಲ್ಲಿ ‘ಅಡ್ವಾನ್ಸ್ಡ್‌ ಪಾರ್ಕಿಂಗ್‌ ತಂತ್ರಜ್ಞಾನ’ ಅಳವಡಿಸಲಾಗಿದೆ.

ADVERTISEMENT

ಸದ್ಯ ನೆಲದಡಿಯಲ್ಲಿ ಮೆಟ್ರೊ ನಿಲ್ದಾಣಗಳಲ್ಲಿರುವಂತೆ, ಈ ಪಾರ್ಕಿಂಗ್‌ ತಾಣಕ್ಕೂ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಪಾರ್ಕಿಂಗ್‌ ತಾಣದ ಗೋಡೆಯ ಮೇಲೆ ವಿಧಾನಸೌಧದ ವರ್ಣ ಚಿತ್ರಗಳು, ಯಕ್ಷಗಾನದ ವಿವಿಧ ಭಂಗಿಗಳು ಮತ್ತು ಮೈಸೂರು ದಸರಾ ಜಂಬೂ ಸವಾರಿಯ ವರ್ಣಚಿತ್ರಗಳಿವೆ.

‘ಪಾರ್ಕಿಂಗ್ ತಾಣದಲ್ಲಿ 600 ಕಾರುಗಳು ಮತ್ತು 750 ಬೈಕ್‌ಗಳನ್ನು ಏಕಕಾಲಕ್ಕೆ ನಿಲುಗಡೆ ಮಾಡಬಹುದು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ತಿಳಿಸಿದ್ದಾರೆ.

‘ಸ್ಮಾರ್ಟ್‌ ಪಾರ್ಕಿಂಗ್‌‘ತಾಣದ ಗೋಡೆಯ ಮೇಲೆ ರಚಿಸಿರುವ ಮೈಸೂರು ದಸರಾ ಜಂಬೂಸವಾರಿಯ ವರ್ಣಚಿತ್ರಗಳು

‘ಪಾರ್ಕಿಂಗ್ ತಾಣದಲ್ಲಿ ಸುಧಾರಿತ ಸ್ಮಾರ್ಟ್ ಪಾರ್ಕಿಂಗ್ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ. ದಿನ ಪೂರ್ತಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ಕಟ್ಟಡದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯ, ಗಾಲಿಕುರ್ಚಿಗಳು, ಶೌಚಾಲಯಗಳು ಮತ್ತು ಆಂಬುಲೆನ್ಸ್‌ ಸೇವೆಗಳು ಲಭ್ಯವಿವೆ‘ ಎಂದು ಅವರು ವಿವರಿಸಿದರು.

ವಾಹನ ಸೌಲಭ್ಯ

ವಾಹನ ನಿಲುಗಡೆ ಮಾಡಿದವರಿಗೆ ನಿಗದಿತ ಸ್ಥಳಕ್ಕೆ ತಲುಪಲು ವಾಹನ ವ್ಯವಸ್ಥೆ ಇದೆ. ಈ ವಾಹನಗಳು ಪ್ರತಿ ಹದಿನೈದು ನಿಮಿಷ ಗಳಿಗೊಮ್ಮೆ ಮೂರು ಮಾರ್ಗಗಳಲ್ಲಿ ಸಂಚರಿಸುತ್ತವೆ.

1 ಸಿಟಿ ಸಿವಿಲ್ ಕೋರ್ಟ್, ಕೆ.ಆರ್ ಸರ್ಕಲ್, ವಿಧಾನ ಸೌಧ, ಎಂಎಸ್ ಬಿಲ್ಡಿಂಗ್ ಮತ್ತು ಹೈ ಕೋರ್ಟ್

2 ಪೊಥೀಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೊ ಸ್ಟೇಷನ್, ಬಿವಿಕೆ ಅಯ್ಯಂಗಾರ್ ರಸ್ತೆ, ಟಿಸಿಎಂ ರಾಯನ್ ಸರ್ಕಲ್

3 ಪೊಥೀಸ್ ಸರ್ಕಲ್‌, ಉಪ್ಪಾರಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ ರೈಲು ನಿಲ್ದಾಣ

ಪಾರ್ಕಿಂಗ್‌ ಶುಲ್ಕದ ವಿವರ

ಅವಧಿ; ದ್ವಿಚಕ್ರ ವಾಹನ; ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ
0ದಿಂದ 1; ₹15;₹25
1ರಿಂದ 2;₹25;₹40
2ರಿಂದ 4;₹40;₹65
4ರಿಂದ 6;₹55;₹90
6ರಿಂದ 8;₹70;₹115
8ರಿಂದ 10;₹85;₹140
10ರಿಂದ 12;₹100;₹165
12ರಿಂದ 24;₹100+;₹165+

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.