ಬೆಂಗಳೂರು: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಸಹಯೋಗದೊಂದಿಗೆ ಕೆ.ಎಸ್.ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ ‘ಪ್ಲಾಸ್ಟಿಕ್ ಹಾವುಗಳು ಮತ್ತು ಏಣಿಗಳು’ ಎಂದು ವಿನೂತನ ರೀತಿಯಲ್ಲಿ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಹಾವುಗಳ ಬದಲಿಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಏಣಿಗಳ ಬದಲಿಗೆ ಬಳ್ಳಿ/ಮರಗಳ ಚಿತ್ರಗಳಿವೆ. ಆಟವು ಆಟಗಾರರಿಗೆ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಉಪಯುಕ್ತ ಸಂಗತಿಗಳನ್ನು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ. ಡಬ್ಲ್ಯುಡಬ್ಲ್ಯುಎಫ್‌ನಿಂದ ನಿಯೋಜಿತರಾದ ಸ್ವಯಂಸೇವಕರು ಸಂದರ್ಶಕರಿಗೆ ಮಾರ್ಗದರ್ಶನ ನೀಡಿದರು.
ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅ.2ರ ವರೆಗೆ ಈ ಜಾಗೃತಿ ಆಟ ಮುಂದುವರಿಯಲಿದೆ ಎಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಮಾಹಿತಿ ನೀಡಿದರು.
ಮನರಂಜನೆಯೊಂದಿಗೆ ಶಿಕ್ಷಣ ಮತ್ತು ಜಾಗೃತಿಯನ್ನು ಈ ಅಭಿಯಾನ ನೀಡುತ್ತದೆ ಎಂದು ಡಬ್ಲ್ಯುಡಬ್ಲ್ಯುಎಫ್ ರಾಜ್ಯ ಕಚೇರಿ ನಿರ್ದೇಶಕ ರಾಹುಲ್ ಸುಂದರರಾಜನ್ ತಿಳಿಸಿದರು.
ವಿಭಾಗೀಯ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ವಿಭಾಗೀಯ ಹಿರಿಯ ಪರಿಸರ ಮತ್ತು ಹೌಸ್‌ಕೀಪಿಂಗ್ ಮ್ಯಾನೇಜರ್ ಪ್ರಿಯಾ ಮತ್ತು ತಂಡದವರು ಕಾರ್ಯಕ್ರಮ ಆಯೋಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.