ಬೆಂಗಳೂರು: ‘ದೊಡ್ಡವರು ಮಾತನಾಡುವ ಸುವರ್ಣಯುಗ, ವೈಭವದ ಇತಿಹಾಸಗಳೇ ಬೇರೆ. ಸಾಮಾನ್ಯರು ಆಡುವ ಸಾಮಾಜಿಕ ಚರಿತ್ರೆಯೇ ಬೇರೆ. ಜನಪದ ಇರುವುದೇ ತೆರೆಮರೆಯ ನಾಯಕರ ಹಿರಿಮೆ ಸಾರಲು‘ ಎಂದು ಕತೆಗಾರ ಕೃಷ್ಣಮೂರ್ತಿ ಹನೂರು ತಿಳಿಸಿದರು. ತಮ್ಮ ‘ದೇವಮೂಲೆಯ ಮಳೆ‘ ಕಥಾಸಂಕಲನದ ಕುರಿತು ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದರು.
ನಿನ್ನೆಯಿಂದಲೂ ಬೇರೆಯದ್ದೆ ಜಗತ್ತಿನಲ್ಲಿರುವಂತೆ ಭಾಸವಾಗುತ್ತಿದೆ. ಈ ವೇದಿಕೆಗಳಲ್ಲಿ ದೊಡ್ಡ ರಾಜಕಾರಣಿಗಳ, ದೊಡ್ಡ ಸಂಗತಿಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಕಳೆದ 40 ವರ್ಷಗಳಲ್ಲಿ ನಾನು ಕಂಡುಕೊಂಡ ಜಗತ್ತಿನಲ್ಲಿ ಸಾಮಾನ್ಯ ಜನ ದೇವಮೂಲೆಯತ್ತ ಚಿತ್ತ ನೆಡುತ್ತಾರೆ. ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯಭಾಗವೇ ಈ ದೇವಮೂಲೆ. ಅಲ್ಲೊಂದು ಮೋಡ ಸುಳಿದರೂ ಮಿಂಚಿನ ಸೆಳಕು ಕಂಡರೂ ಮಳೆ ಬಂದೇ ಬರುತ್ತೆ ಎನ್ನುವ ಭರವಸೆ ತಾಳುತ್ತಾರೆ. ಮಳೆ ಬಂದರಷ್ಟೆ ಬದುಕು; ಕೇವಲ ಮಾತಿನಿಂದಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ಜನಸಾಮಾನ್ಯರು ಯಾವ ಕಡೆಗೆ ಮುಖ ಮಾಡಿದ್ದಾರೆ ಎಂದು ಅರಿಯುವುದೇ ನಿಜವಾದ ಅರಿವು. ನನ್ನ ಓಡಾಟದಲ್ಲಿ ಭೇಟಿ ಮಾಡಿದ್ದ 70 ವರ್ಷದ ಅವಿದ್ಯಾವಂತ ಭೋವಿ ಜನಾಂಗದ ಹೆಣ್ಣುಮಗಳು ಆಡಿದ ಮಾತು ಇಂದಿಗೂ ಕಿವಿಯಲ್ಲಿ ಅನುರಣಿಸುತ್ತಿದೆ. ‘ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು. ಕಣ್ಣು ಒದ್ದೆಯಾಗದೆ ಈ ಬದುಕನ್ನು ದಾಟಲು ಆಗುವುದಿಲ್ಲ‘. ಈ ಮಾತಿನಲ್ಲಿರುವ ಜೀವನದರ್ಶನವೇ ಬೇರೆ. ಇದು ಯಾವ ಪಠ್ಯ, ಭಾಷಣಗಳಲ್ಲಿಯೂ ಸಿಗಲಾರದು ಎಂದು ಅಭಿಪ್ರಾಯಪಟ್ಟರು.
ಹಟ್ಟಿಯಲ್ಲಿ ಒಮ್ಮೆ ಸಿರಿಯಜ್ಜಿಯನ್ನು ಭೇಟಿ ಮಾಡಿದ್ದೆ. ಕಡುಬಡತನದ ನಡವೆಯೂ ‘ಸಿರಿ‘ ಎಂಬ ಚಂದದ ಹೆಸರು. ಅದರ ಬಗ್ಗೆ ವಿಚಾರಿಸುತ್ತ ಹೋದಂತೆ ತಿಳಿಯಿತು. ಆ ಬುಡಕಟ್ಟಿನ ತ್ಯಾಗಮಯಿ ನಾಯಕನ ಹೆಸರು ‘ಸಿರಿ‘ ಎಂದು. ಇಡೀ ಊರೇ ಲಿಂಗಭೇದವಿಲ್ಲದೇ ಆ ಹೆಸರನ್ನು ಇಟ್ಟುಕೊಂಡಿತ್ತು. ತಮ್ಮವರ ಒಳಿತಿಗಾಗಿ ಹೋರಾಡಿದ ನಾಯಕನನ್ನು ಇಡೀ ಊರೇ ಆರಾಧಿಸುವುದು ಹೀಗೆ ಎಂದು ವಿವರಿಸಿದರು.
ಸಾಮಾನ್ಯರು ಎಂದಾಕ್ಷಣ ಅಸಡ್ಡೆ ತೋರುವಂತಿಲ್ಲ. ಅವರಿಗಿರುವ ತಿಳಿವಳಿಕೆ ದೊಡ್ಡದು. ಸಿರಿಯಜ್ಜಿ ಅಹೋರಾತ್ರಿ ಹಾಡುವ ಪ್ರತಿಭಾವಂತೆ. ಒಮ್ಮೆ ಸಿರಿಯಜ್ಜಿ ಬೆಂಗಳೂರಿನ ಕಲಾಕ್ಷೇತ್ರಕ್ಕೆ ಬಂದಿದ್ದಳು. ಎದುರಾದ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೆ ‘ಯಾರಪ್ಪ ನೀನು’ ಎಂದು ಮುಗ್ದವಾಗಿ ಕೇಳಿದಳು. ‘ನಿನ್ನ ಮಗ ಕಣವ್ವ‘ ಎಂದು ಜಾಣ ಉತ್ತರ ನೀಡಿದರು ಮುಖ್ಯಮಂತ್ರಿ. ಸಿರಿಯಜ್ಜಿಯ ಮುಂದಿನ ಪ್ರಶ್ನೆ ‘ನಿನ್ನ ಹೆಂಡತಿ, ಮಕ್ಕಳು ಚಂದಾಗ್ವರ’ ಎಂದು ಕೇಳುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಸಂಸ್ಕೃತಿ ದೊಡ್ಡದು ಎಂದು ಸಾರಿದಳು ಎಂದು ಕೃಷ್ಣಮೂರ್ತಿ ಅವರು ಘಟನೆಯೊಂದನ್ನು ನೆನಪಿಸಿಕೊಂಡರು.
ಒಬ್ಬ ರಾಜನ ಪರಾಕ್ರಮದ ಕತೆಗಳನ್ನು ಕೇಳಿರುತ್ತೇವೆ. ಆದರೆ ಅದೇ ರಾಜನ ಸೈನ್ಯ ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಧ್ಯೆ ಸಿಗುವ ಹಳ್ಳಿಗಳ ಮೇಲೆ ನಡೆಸುತ್ತಿದ್ದ ಶೋಷಣೆಯ ಕತೆಗಳು ಎಂಥವರನ್ನೂ ತಲ್ಲಣಗೊಳಿಸುತ್ತವೆ. ಅಧಿಕಾರ ಇರುವವರ ಪರ ಅಥವಾ ವಿರೋಧಿಸಿ ಮಾತನಾಡಿದರೂ ಜನಪ್ರಿಯತೆ ಸಿಗುತ್ತದೆ. ಆದರೆ, ಸಾಮಾನ್ಯರ ಚಿಂತನಾಕ್ರಮವನ್ನು ಅರಿಯಲು ಪ್ರಯತ್ನಪಡಬೇಕಿದೆ. ಸಾಮಾಜಿಕ ಚರಿತ್ರೆಯ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದ ಹೊರತು ರಾಜಕೀಯ ಇತಿಹಾಸವನ್ನು ಸರಿಯಾಗಿ ಗ್ರಹಿಸಲು ಆಗುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.