ADVERTISEMENT

ಸೂರ್ಯನಿಗೆ ಕಂಕಣ: ನೋಡೋಣ ಬನ್ನಿ

ಬರಿಗಣ್ಣಿನಲ್ಲಿ ನೋಡಿದರೆ ಅಪಾಯ * ಗ್ರಹಣ ವೀಕ್ಷಣೆಗೆ ಅಲ್ಲಲ್ಲಿ ವ್ಯವಸ್ಥೆ * ಕಣ್ತುಂಬಿಕೊಳ್ಳಲು ಜನರ ಕುತೂಹಲ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 9:16 IST
Last Updated 25 ಡಿಸೆಂಬರ್ 2019, 9:16 IST
ಕಂಕಣ ಸೂರ್ಯ ಗ್ರಹಣ (ಸಾಂದರ್ಭಿಕ ಚಿತ್ರ)
ಕಂಕಣ ಸೂರ್ಯ ಗ್ರಹಣ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬಾಹ್ಯಾಕಾಶದಲ್ಲಿ ವರ್ಷಾಂತ್ಯದಲ್ಲಿ ಸಂಭವಿಸುವ ವಿಸ್ಮಯಕಾರಿ ‘ಕಂಕಣ ಸೂರ್ಯಗ್ರಹಣ'ಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ಅಪೂರ್ವ ವಿದ್ಯಮಾನವನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸಲುವಾಗಿ ನಗರದ ಅಲ್ಲಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೂರ್ಯನ ಶೇಕಡ 90ರಷ್ಟು ಭಾಗವನ್ನು ಮಾತ್ರ ಚಂದ್ರ ಮರೆ ಮಾಡುವುದರಿಂದ ನಗರದಲ್ಲಿ ಪಾರ್ಶ್ವ ಗ್ರಹಣವಾಗಿ ಕಾಣಲಿದೆ. ಗುರುವಾರ ಬೆಳಿಗ್ಗೆ 8.05ರಿಂದ ಆರಂಭವಾಗುವ ಗ್ರಹಣವುಸುಮಾರು 2 ಗಂಟೆ 59 ನಿಮಿಷಗಳ ಕಾಲ ಇರಲಿದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಾರದು ಎಂದು ವಿಜ್ಞಾನಿಗಳು ಹಾಗೂ ವೈದ್ಯರು ಎಚ್ಚರಿಸಿದ್ದಾರೆ.

ಗ್ರಹಣದ ಅವಧಿಯಲ್ಲಿ ನೇಸರನನ್ನು ನೋಡಿದಲ್ಲಿ ಕಣ್ಣಿನ ರೆಟಿನಾಕ್ಕೆ ಹಾನಿಯಾಗಲಿದೆ. ಅಷ್ಟೇ ಅಲ್ಲ,ದೀರ್ಘಕಾಲ ಎವೆಯಿಕ್ಕದೇ ನೋಡಿದರೆ ಕಣ್ಣಿನ ನರಗಳಲ್ಲಿ ರಂಧ್ರ ಕಾಣಿಸಿಕೊಳ್ಳುವ ಅಪಾಯವಿದೆ. ಹೀಗಾಗಿ, ಬರಿಗಣ್ಣಿನಿಂದ ವೀಕ್ಷಿಸುವ ಬದಲು, ಸೌರ ಕನ್ನಡಕವನ್ನು ಕಡ್ಡಾಯವಾಗಿ ಧರಿಸಿ, ವೀಕ್ಷಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ADVERTISEMENT

ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ನಗರದ ವಿವಿಧೆಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ವಯೋಮಾನದವರಿಗೂ ಪ್ರವೇಶಕ್ಕೆ ಮುಕ್ತ ಅವಕಾಶವಿದೆ.

‘ಜವಾಹರ್‌ ಲಾಲ್ ನೆಹರೂ ತಾರಾಲಯದಲ್ಲಿ ಬೆಳಿಗ್ಗೆ 8ರಿಂದ11.15ವರೆಗೆ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಐದು ದೂರದರ್ಶಕಗಳಿಂದಸೂರ್ಯನ ಬಿಂಬವನ್ನು ಪರದೆಯ ಮೇಲೆ ಮೂಡಿಸಲಾಗುತ್ತದೆ.ಗ್ರಹಣದ ವಿವಿಧ ಹಂತಗಳನ್ನು ಇಲ್ಲಿ ಕಾಣಬಹುದು.ಸೂರ್ಯನನ್ನು ನೇರವಾಗಿ ವೀಕ್ಷಿಸಲು14 ವೆಲ್ಡರ್ ಗ್ಲಾಸ್‌ಗಳು ಇರಲಿವೆ.ಸೂರ್ಯಗ್ರಹಣದ ಮೂಲಭೂತ ತತ್ವಗಳನ್ನು ಸಾರ್ವಜನಿಕರಿಗೆ ತಿಳಿಸಲು 12 X 6 ಅಳತೆಯ ಭಿತ್ತಿಚಿತ್ರವನ್ನು ಪ್ರದರ್ಶಿಸಲಾಗುವುದು’ ಎಂದು ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿಯು ರಾಜಾಜಿನಗರ ಆರ್‌ಪಿಎ ಮೈದಾನ, ನವರಂಗ ಮೈದಾನ, ಕೆಂಗೇರಿ, ಆರ್‌.ಟಿ. ನಗರ ಮೈದಾನ, ಬಸವೇಶ್ವರನಗರ ಉದ್ಯಾನದಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ವಿಜ್ಞಾನ ಪರಿಷತ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಗ್ರಹಣ ವೀಕ್ಷಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಲಾಲ್‌ಬಾಗ್‌ನಲ್ಲಿ ಸೂರ್ಯೋತ್ಸವ: ಗ್ರಹಣದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಉದ್ದೇಶ
ದಿಂದಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ನಡಿಗೆದಾರರ ಒಕ್ಕೂಟ ಹಾಗೂ ಬೆಂಗಳೂರು ಅಸ್ಟ್ರೋನಾಮಿಕಲ್ಸೊಸೈಟಿ ಸಹ
ಯೋಗದಲ್ಲಿ ಬೆಳಿಗ್ಗೆ 8 ಗಂಟೆ 5ನಿಮಿಷಕ್ಕೆ ಲಾಲ್‌ಬಾಗ್‌ ಉದ್ಯಾನ ಕಿರುಬೆಟ್ಟದ ಗೋಪುರದ ಬಳಿ ಗ್ರಹಣದ ಸಾಮೂಹಿಕ ವೀಕ್ಷಣೆ, ಸಂವಾದ ಹಾಗೂ ಸಹಭೋಜನ ವ್ಯವಸ್ಥೆ ಮಾಡಲಾಗಿದೆ.

‘ಕಾರ್ಯಕ್ರಮಕ್ಕೆ ಸೂರ್ಯೋತ್ಸವ ಎಂದು ಹೆಸರಿಡಲಾಗಿದೆ. ಗ್ರಹಣ ಸಂಭವಿಸುತ್ತಿದ್ದಂತೆ ಜಂಬೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದೇವೆ. ಸಾರ್ವಜನಿಕರಿಗಾಗಿ200ಕ್ಕೂ ಹೆಚ್ಚು ಸೌರ ಕನ್ನಡಕಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಬಸವರಾಜು ತಿಳಿಸಿದರು.

ರಾಜ್ಯ ನಡಿಗೆದಾರರ ಒಕ್ಕೂಟದ ಅಧ್ಯಕ್ಷ ಸಿ.ಕೆ.ರವಿಚಂದ್ರ,‘ಗ್ರಹಣದಿಂದ ಭೂಮಿಯ ಯಾವ ಜೀವಿಗಳಿಗೂ ಅನಿಷ್ಟವಿಲ್ಲ. ಈ ನಿಟ್ಟಿನಲ್ಲಿ ಸುರಕ್ಷಿತ ಗ್ರಹಣ ವೀಕ್ಷಣೆಗೆ ಕರ್ನಾಟಕ ವಿಜ್ಞಾನ ಸಮಿತಿ ಸೌರ ಕನ್ನಡಕಗಳನ್ನು ವ್ಯವಸ್ಥೆ ಮಾಡಿದೆ. ಆಸಕ್ತರು ಸೌರ ಕನ್ನಡಕಗಳನ್ನು ಖರೀದಿಸಬಹುದು (ಸಂಪರ್ಕ:9448957666)’ ಎಂದು ತಿಳಿಸಿದರು.

ವಿಶೇಷ ಪೂಜೆ:ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರದ ಬನಶಂಕರಿ ದೇವಾಲಯ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7ಗಂಟೆಗೆ ದೇವಾಲಯಗಳಿಗೆ ಬಾಗಿಲು ಹಾಕಲಾಗುತ್ತದೆ.ಗ್ರಹಣ ಮುಗಿದ ನಂತರ ದೇವಾಲಯಗಳನ್ನು ಶುಚಿಗೊಳಿಸಿ,ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.ಗ್ರಹಣ ಶಾಂತಿ ಮಾಡಿಸಲು ಆಸಕ್ತಿಯುಳ್ಳವರಿಗೂ ಅವಕಾಶವನ್ನು ನೀಡಲಾಗಿದೆ.

ಯಶವಂತಪುರದ ಮಹಾಯಾಗ ಕ್ಷೇತ್ರ ಗಾಯತ್ರಿ ದೇವಸ್ಥಾನದಲ್ಲಿ ಬೆಳಿಗ್ಗೆ 8.07ರಿಂದ 11.03 ಗಂಟೆಯವರೆಗೆ ವಿಶೇಷ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ. ಶಾಂತಿ ಹೋಮ ಮಾಡಿಸಲು ಇಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ಮೊಬೈಲ್ ದೂರವಾಣಿ ಸಂಖ್ಯೆ: 9986662166ಕ್ಕೆ ಸಂಪರ್ಕಿಸಬಹುದು ಎಂದು ‍ಪ್ರಕಟಣೆ ತಿಳಿಸಿದೆ. ತಾರಾಲಯಗಳು, ಸ್ಟೇಷನರಿ ಮಳಿಗೆಗಳು, ಪುಸ್ತಕ ಮಳಿಗೆಗಳಲ್ಲಿಸೌರ ಕನ್ನಡಕಗಳು ಸಿಗಲಿವೆ.

ಗ್ರಹಣದ ವೇಳೆ ಉಪಾಹಾರ
ಮೂಢನಂಬಿಕೆ ವಿರೋಧಿ ಸಂಘಟನೆಯು ಗ್ರಹಣದ ವೇಳೆ ಜನರಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಪುರಭವನದ ಮುಂಭಾಗ ಉಪಾಹಾರ ವ್ಯವಸ್ಥೆಯನ್ನು ಮಾಡಿದೆ.

‘ಬೆಳಿಗ್ಗೆ 9ರಿಂದ 11ಗಂಟೆಯವರೆಗೆ ಜಾನಪದ ನೃತ್ಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಭಾಗವಹಿಸಿದವರಿಗೆಬಿಸಿಬೇಳೆ ಬಾತ್, ಇಡ್ಲಿ, ವಡೆ ಸೇರಿದಂತೆ ವಿವಿಧ ತಿನಿಸುಗಳನ್ನು ನೀಡಲಾಗುತ್ತದೆ’ ಎಂದು ಕಾರ್ಯಕ್ರಮದ ಸಂಘಟಕ ಟಿ.ನರಸಿಂಹ ಮೂರ್ತಿ ತಿಳಿಸಿದರು.

ವೀಕ್ಷಣೆಗೂ ಮುನ್ನ ಎಚ್ಚರ ವಹಿಸಿ

*ಸೌರ ಕನ್ನಡಕದ ಸಹಾಯದಿಂದ ಗ್ರಹಣ ವೀಕ್ಷಿಸಿ

*ಸೌರ ಕನ್ನಡಕದ ಗುಣಮಟ್ಟವನ್ನು ಖಾತರಿ ಮಾಡಿಕೊಳ್ಳಿ

*ಕಪ್ಪು ಕನ್ನಡಕದಿಂದ ವೀಕ್ಷಿಸಿದಲ್ಲಿ ಕಣ್ಣಿಗೆ ಅಪಾಯ

*ಸೌರ ಕನ್ನಡಕಕ್ಕೆ ಹಾನಿಯಾಗಿದ್ದಲ್ಲಿ ಬಳಸಬೇಡಿ

*ದೂರದರ್ಶಕಕ್ಕೂ ಸೌರ ಹಾಳೆಯನ್ನು ಅಳವಡಿಸಿಕೊಳ್ಳಿ

*ಎಕ್ಸ್‌ ರೇ ಹಾಳೆ ಬಳಕೆ ಅಪಾಯಕಾರಿ

*ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವಾಗಲೂ ಸೌರ ಕನ್ನಡಕ ಇರಲಿ

*ಪಿನ್‌ ಹೋಲ್‌ ಕ್ಯಾಮರಾ ಸಹಾಯದಿಂದ ನೋಡಬಹುದು

*
ಗ್ರಹಣ ವೀಕ್ಷಿಸುವವರು ಸೌರ ಕನ್ನಡಕ ಹಾಕಿಕೊಳ್ಳಬೇಕು. ನೇರವಾಗಿ ನೋಡಿದಲ್ಲಿ ದೃಷ್ಟಿ ನರಕ್ಕೆ ಹಾನಿಯಾಗುತ್ತದೆ. ಕಣ್ಣಿನ ನರಕ್ಕೆ ರಂಧ್ರವಾಗುವ ಸಾಧ್ಯತೆ ಕೂಡ ಇದೆ.
-ಡಾ.ಸುಜಾತಾ ರಾಥೋಡ್, ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ

*
ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಗ್ರಹಣ ವೀಕ್ಷಣೆ ಮಾಡಬಾರದು. ಐಎಸ್‌ಓ ಮಾನ್ಯತೆ ಹೊಂದಿರುವ ಸೌರ ಕನ್ನಡದಲ್ಲಿ ಮಾತ್ರ ವೀಕ್ಷಿಸಬಹುದು.
-ಅಲ್ತಾಫ್ ಪಾಷಾ, ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರದ ವೈಜ್ಞಾನಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.