ಬೆಂಗಳೂರು: ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಅಗತ್ಯ ಇರುವ ವಿದ್ಯುತ್‌ಗೆ ಸೌರಶಕ್ತಿಯನ್ನೇ ಬಳಸುವ ಯೋಜನೆಯನ್ನು ಸಾರಿಗೆ ಇಲಾಖೆ ರೂಪಿಸಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 20 ಕಚೇರಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ.
ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವವನ್ನು ಕಳುಹಿಸಿಕೊಡಲಾಗಿದೆ. ಅನುಮೋದನೆ ಸಿಕ್ಕಿದ ಬಳಿಕ ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗದ ಎಚ್‌ಎಸ್‌ಆರ್ ಲೇಔಟ್ (ಕೋರಮಂಗಲ) ಆರ್‌ಟಿಒ ಕಚೇರಿಯಲ್ಲಿ ಸೌರಶಕ್ತಿ ಘಟಕ ಅಳವಡಿಸಲಾಗುವುದು. ಇಲ್ಲಿನ ಸಾಧಕ–ಬಾಧಕಗಳನ್ನು ಪರಿಶೀಲಿಸಿದ ಬಳಿಕ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನಂತರ ಮೊದಲ ಹಂತದ ಉಳಿದ 19 ಕಚೇರಿಗಳಲ್ಲಿ ಸೌರಶಕ್ತಿ ಘಟಕ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳಿವೆ.
ಬೆಂಗಳೂರು ನಗರ ವಿಭಾಗದ ಕಸ್ತೂರಿನಗರ, ಜ್ಞಾನಭಾರತಿ, ಕೆ.ಆರ್.ಪುರ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ವಿಭಾಗದ ನೆಲಮಂಗಲ, ತುಮಕೂರು, ಚಿಂತಾಮಣಿ, ಮೈಸೂರು ವಿಭಾಗದ ಮೈಸೂರು (ಪೂರ್ವ), ಮಂಡ್ಯ, ಶಿವಮೊಗ್ಗ ವಿಭಾಗದ ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ವಿಭಾಗದ ಧಾರವಾಡ (ಪಶ್ಚಿಮ), ವಿಜಯಪುರ, ಬಾಗಲಕೋಟೆ, ಕಲಬುರಗಿ ವಿಭಾಗದ ಬಳ್ಳಾರಿ, ರಾಯಚೂರು ಪ್ರಾದೇಶಿಕ ಸಾರಿಗೆ ಕಚೇರಿಗಳು ಮೊದಲ ಹಂತದಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಿಕೊಳ್ಳಲಿವೆ.
‘ಪ್ರಾದೇಶಿಕ ಸಾರಿಗೆ ಕಚೇರಿಗಳು ಬಹುತೇಕ ಸ್ವಂತ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕಚೇರಿಗಳಲ್ಲಿ ಸೌರಶಕ್ತಿ ಫಲಕ ಅಳವಡಿಸಿದರೆ, ನಮ್ಮ ಕಚೇರಿಗಳಿಗೆ ಬೇಕಾದ ವಿದ್ಯುತ್ ಅಲ್ಲೇ ಉತ್ಪಾದನೆಯಾಗಲಿದೆ. ಇಲ್ಲಿಯವರೆಗೆ ಒಂದು ಕಚೇರಿಯಲ್ಲಿ ವಿದ್ಯುತ್‌ಗಾಗಿ ಎಷ್ಟು ವೆಚ್ಚ ಮಾಡಲಾಗುತ್ತಿತ್ತು? ಸೋಲಾರ್ ಅಳವಡಿಸಿದ ಮೇಲೆ ಎಷ್ಟು ಉಳಿತಾಯವಾಗುತ್ತದೆ? ಎಂಬುದನ್ನೆಲ್ಲ ಮೊದಲ ಹಂತದಲ್ಲಿ ನೋಡಲಾಗುವುದು’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದರು.
ಸೌರ ವಿದ್ಯುತ್ ಉತ್ಪಾದನೆಯ ವೆಚ್ಚವು ಕಲ್ಲಿದ್ದಲು ಅಥವಾ ಜಲ ವಿದ್ಯುತ್ ಉತ್ಪಾದನೆಯ ವೆಚ್ಚಕ್ಕಿಂತ ಕಡಿಮೆ ಇರಲಿದೆ. ಅಲ್ಲದೇ ಪರಿಸರಕ್ಕೂ ಪೂರಕವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಅಳವಡಿಸುವ ಸೌರಶಕ್ತಿ ಘಟಕಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆಯಾದರೆ ಅದನ್ನು ಮಾರಾಟ ಮಾಡಲು ಅವಕಾಶ ಇರಲಿದೆ. ಅಂತಹ ಘಟಕಗಳಿಗೆ ಗ್ರಿಡ್ ಸಂಪರ್ಕ ಕಲ್ಪಿಸಲಾಗುವುದು. ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಪ್ರಾದೇಶಿಕ ಕಚೇರಿಗಳಿಗೆ ಆದಾಯ ಕೂಡ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.