ADVERTISEMENT

Krishi Mela 2023 | ಬಹೋಪಯೋಗಿ ಸೋಲಾರ್ ‘ಇ–ಕಾರ್ಟ್‌’

ಕಡಿಮೆ ವೆಚ್ಚದಲ್ಲಿ ತಯಾರಿ * ವಿದ್ಯಾರ್ಥಿಗಳ ಕೆಲಸಕ್ಕೆ ಕೃಷಿ ಮೇಳದಲ್ಲಿ ಮೆಚ್ಚುಗೆ

ಖಲೀಲಅಹ್ಮದ ಶೇಖ
Published 20 ನವೆಂಬರ್ 2023, 0:22 IST
Last Updated 20 ನವೆಂಬರ್ 2023, 0:22 IST
ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ಆವಿಷ್ಕರಿಸಿರುವ ವಿದ್ಯುತ್‌ ಮತ್ತು ಸೌರ ಚಾಲಿತ ವಾಹನ. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ಆವಿಷ್ಕರಿಸಿರುವ ವಿದ್ಯುತ್‌ ಮತ್ತು ಸೌರ ಚಾಲಿತ ವಾಹನ. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಕೃಷಿ ಉತ್ಪನ್ನಗಳ ಸಾಗಣೆ, ಕಳೆ ತೆಗೆಯುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಯ ನಿರ್ವಹಣೆಗೆ ನೆರವಾಗುವ ಸೋಲಾರ್‌ ಹಾಗೂ ವಿದ್ಯುತ್‌ ಚಾಲಿತ ಬಹುಪಯೋಗಿ ‘ಇ–ಕಾರ್ಟ್‌’ ವಾಹನವೊಂದನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. 

ಬೆಂಗಳೂರು ರಾಜರಾಜೇಶ್ವರಿನಗರದಲ್ಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಇ–ಕಾರ್ಟ್‌’ ಅನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಮೇಳದಲ್ಲಿ ವಾಹನ ವೀಕ್ಷಣೆಗೆ ಬರುವ ರೈತರಿಗೆ ವಾಹನದ ಉಪಯೋಗವನ್ನು ತಿಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಅಗ್ಗದ ವಾಹನಗಳಿಗಿಂತ ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ತಮ್ಮ ವಾಹನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಕಾಲೇಜಿನ ಅಧ್ಯಯನದ ಭಾಗವಾಗಿ ತಯಾರಿಸಿದ್ದ ವಾಹನ ಯೋಜನೆ, ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಇದೇ ವಾಹನವನ್ನು ರೈತರ ಅನುಕೂಲಕ್ಕಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ.

ADVERTISEMENT

‘ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಸಂಬಂಧಿತ ಕೆಲಸಗಳ ನಿರ್ವಹಣೆ ಕಷ್ಟವಾಗುತ್ತಿದೆ. ದೊಡ್ಡ ಯಂತ್ರಗಳನ್ನು ಬಾಡಿಗೆ ತರುವುದು ದುಬಾರಿಯಾಗುತ್ತದೆ. ಟ್ರ್ಯಾಕ್ಟರ್‌ ಮತ್ತು ಗೂಡ್ಸ್‌ಗಳಂತಹ ವಾಹನ ಖರೀದಿಸಬೇಕೆಂದರೆ ₹ 4 ಲಕ್ಷದಿಂದ ₹ 5 ಲಕ್ಷ ವೆಚ್ಚ ಮಾಡಬೇಕು. ಇಂಥ ರೈತರಿಗಾಗಿಯೇ ಈ ಹೊಸ ವಾಹನ ಆವಿಷ್ಕರಿಸಿದ್ದೇವೆ’ ಎಂದು ವಿದ್ಯಾರ್ಥಿ ಅಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಾಹನ, ವಸ್ತುಗಳ ಸಾಗಣೆ, ಕಳೆ ತೆಗೆಯುವುದರ ಜೊತೆಗೆ ಗೊಬ್ಬರ–ಬೀಜಗಳನ್ನು ಸಾಗಿಸಲು ಅನುಕೂಲವಾಗಿದೆ. ಬೈಕ್‌ ರೀತಿಯಲ್ಲೇ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾಗಿದೆ’ ಎಂದು ಹೇಳಿದರು.

‘ಈ ವಾಹನಕ್ಕೆ 48 ವ್ಯಾಟ್‌ನ ಆರು ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಿದೆ. ಪೂರ್ಣ ಚಾರ್ಜ್‌ ಆಗಲು ನಾಲ್ಕು ಗಂಟೆ ಬೇಕಾಗುತ್ತದೆ. ವಿದ್ಯುತ್‌ನಿಂದ ಚಾರ್ಜ್‌ ಆಗಲು ಕೇವಲ 2 ಗಂಟೆ ಸಾಕು. ಒಮ್ಮೆ ಚಾರ್ಜ್ ಮಾಡಿದರೆ, 40ರಿಂದ 50 ಕಿ.ಮೀ ಮೈಲೇಜ್‌ ನೀಡುತ್ತದೆ. ಈ ವಾಹನದ ವೇಗ ಪ್ರತಿ ಗಂಟೆಗೆ 50 ಕಿ.ಮೀ. ಇದೆ’ ಎಂದರು.

‘ವಾಹನದ ಬೆಲೆ ₹ 1.50 ಲಕ್ಷ. ರೈತರು ಇದನ್ನು ಖರೀದಿಸಿದರೆ ಅವರಿಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ. ವಾಹನಕ್ಕೆ ಅಳವಡಿಸಿರುವ ಬ್ಯಾಟರಿಗೆ 3 ವರ್ಷದಿಂದ 5 ವರ್ಷದವರೆಗೂ ವಾರಂಟಿ ಇರುತ್ತದೆ. ರೈತರ ಅಗತ್ಯತೆಗೆ ತಕ್ಕಂತೆ ವಾಹನವನ್ನು ಸಿದ್ಧಪಡಿಸಲು ನಾವು ಸಿದ್ಧ’ ಎಂದು ತಿಳಿಸಿದರು.

‘ಕಳ್ಳತನ ತಡೆಯುವ ಸೌಲಭ್ಯ’

‘ಇ–ಕಾರ್ಟ್ ವಾಹನಕ್ಕೆ ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ಇದು ವಾಹನ ಕಳ್ಳತನ ತಡೆಯಲು ಹಾಗೂ ವಾಹನದ ಸ್ಥಿತಿಗತಿ ಅರಿಯಲು ಸಹಾಯಕವಾಗಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು. ‘ವಾಹನದ ವೇಗ ಜಾರ್ಜಿಂಗ್ ಪ್ರಮಾಣ ಹಾಗೂ ಇತರೆ ಮಾಹಿತಿಯೂ ಮೊಬೈಲ್‌ನಲ್ಲಿರುವ ಆ್ಯಪ್‌ ಮೂಲಕ ತಿಳಿದುಕೊಳ್ಳಬಹುದು’ ಎಂದರು. ‘ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಕೆಗೆಂದು ಎಕಾನಾಮಿ ಮೋಡ್‌ ನೀಡಲಾಗಿದೆ. ಕತ್ತಲಾದರೆ ಸ್ವಯಂಚಾಲಿತವಾಗಿ ದೀಪ ಹೊತ್ತಿಕೊಳ್ಳುವ ವ್ಯವಸ್ಥೆಯೂ ವಾಹನದಲ್ಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.