ADVERTISEMENT

ಘನತ್ಯಾಜ್ಯ ವರ್ಗಾವಣೆ ಕೇಂದ್ರ: ಕಾರ್ಯಾದೇಶ, ಟೆಂಡರ್‌ ರದ್ದು

ಬಿಎಸ್‌ಡಬ್ಲ್ಯುಎಂಎಲ್‌: ಸಮಗ್ರ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 15:53 IST
Last Updated 20 ಜೂನ್ 2023, 15:53 IST
ಘನತ್ಯಾಜ್ಯ
ಘನತ್ಯಾಜ್ಯ   

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನೀಡಿರುವ ಕಾರ್ಯಾದೇಶಗಳು, ಚಾಲ್ತಿಯಲ್ಲಿರುವ ಟೆಂಡರ್‌ ಪ್ರಕ್ರಿಯೆಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಬಿಎಸ್‌ಡಬ್ಲ್ಯುಎಂಎಲ್‌ ಸ್ಥಾಪನೆಯಾದಂದಿನಿಂದ ಅನುಷ್ಠಾನಗೊಳಿಸಿದ ಕಾಮಗಾರಿಗಳು, ಹಣ ದುರುಪಯೋಗ, ಸಂಸ್ಥೆಯ ಸಂಪೂರ್ಣ ಕಾರ್ಯವೈಖರಿ ಬಗ್ಗೆ ಸಮಗ್ರ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

ಬಿಎಸ್‌ಡಬ್ಲ್ಯುಎಂಎಲ್‌ನಿಂದ ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು. ‘ಪ್ರಜಾವಾಣಿ’ಯಲ್ಲಿ ‘ಗುತ್ತಿಗೆ ದೋಷಯುಕ್ತ: ₹13 ಕೋಟಿ ಬಿಡುಗಡೆ’ ಶೀರ್ಷಿಕೆಯಡಿ ಜೂನ್‌ 20ರಂದು ವರದಿ ಪ್ರಕಟವಾಗಿತ್ತು. ಮುಖ್ಯಮಂತ್ರಿಯವರು ಮಂಗಳವಾರ ಮಧ್ಯಾಹ್ನ ತನಿಖೆ ಟಿಪ್ಟಣಿಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದಾರೆ.

ADVERTISEMENT

ಟಿಪ್ಪಣಿ ಸಾರಾಂಶ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹ, ಸಾಗಣೆ, ನಿರ್ವಹಣೆ ಮತ್ತು ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು 2015ರಲ್ಲಿ ಸರ್ಕಾರ ₹468 ಕೋಟಿಗಳ ಅನುದಾನದಲ್ಲಿ ಆರು ಘನ ತ್ಯಾಜ್ಯ ನಿರ್ವಹಣ ಘಟಕಗಳನ್ನು ಸ್ಥಾಪಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದ ಇವುಗಳು ನಿಷ್ಕ್ರಿಯಗೊಂಡು, ಪಾಲಿಕೆ ಖಾಸಗಿ ಘಟಕಗಳಿಗೆ ಅವೈಜ್ಞಾನಿಕವಾಗಿ ಘನತ್ಯಾಜ್ಯವನ್ನು ಆಯ್ದ ಸ್ಥಳಗಳಲ್ಲಿ ಭೂ ಭರ್ತಿ ಮಾಡುತ್ತಿದೆ. ರಸ್ತೆ ಬದಿ ಮತ್ತು ಮೇಲ್ಸೇತುವೆ ಕೆಳಗೆ ತ್ಯಾಜ್ಯ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವ ಕ್ರಮಗಳಿಂದ ಘನತ್ಯಾಜ್ಯ ನಿರ್ವಹಣೆ ಹದಗೆಡಲು ಕಾರಣವಾಗಿದೆ.

ರಾಷ್ಟ್ರೀಯ ಹಸಿರುಪೀಠ ಮತ್ತು ಘನತ್ಯಾಜ್ಯ ನಿರ್ವಹಣೆ ನಿಯಮ 2016 ಪಾಲಿಸದೆ ಪಾಲಿಕೆ ಅನುತ್ಪಾದಕ ಕ್ರಮಗಳಿಗೆ ₹1,100 ಕೋಟಿ ವೆಚ್ಚ ಮಾಡಿದೆ. ಪಾಲಿಕೆಯ ಇಂತಹ ಅವೈಜ್ಞಾನಿಕ ಕ್ರಮಗಳು ನಗರ ಸಂಚಾರ ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಯೋಜನೆಗಳಾಗಿವೆ.

ಈ ಮಧ್ಯೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ  ಘನತ್ಯಾಜ್ಯ ಸುಗಮ ಸಂಗ್ರಹ, ಸಾಗಣೆ ಮತ್ತು ನಿರ್ವಹಣೆಗೆ 2021ರಲ್ಲಿ ಸ್ಥಾಪಿತವಾದ ಸರ್ಕಾರಿ ಸ್ವಾಮ್ಯದ ಬಿಎಸ್‌ಡಬ್ಲ್ಯುಎಂಎಲ್‌ ಸಂಸ್ಥೆಯಿಂದ ಮತ್ತು ಪಾಲಿಕೆಯಿಂದ ‘ಶುಭ್ರ ಬೆಂಗಳೂರು’ ಕ್ರಿಯಾ ಯೋಜನೆಯಡಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಾನದಂಡಗಳಿಗೆ ವಿರುದ್ಧವಾಗಿ ಬ್ಯಾಂಕ್‌ ಗ್ಯಾರಂಟಿ ದಾಖಲೆ ಸಲ್ಲಿಸಿದ್ದ ಪರಿಶುದ್ಧ ವೆಂಚುರ್ಸ್‌ಗೆ ಸರ್ಕಾರದ ಸೂಚನೆ ಮೀರಿ ₹13.45 ಕೋಟಿ ಮುಂಗಡವಾಗಿ ಪಾವತಿಸಲಾಗಿದೆ. ಈ ಮೂಲಕ ಸಂಸ್ಥೆಯು ಸರ್ಕಾರದ ಆದೇಶಗಳು, ಸೂಚನೆಗಳು, ನಿಯಮಗಳನ್ನು ಪಾಲಿಸದೆ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಿ.ಆರ್‌. ರಮೇಶ್‌ ಗಮನಕ್ಕೆ ತಂದಿದ್ದಾರೆ. ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ  ನಡೆಸಿ ಮಾಹಿತಿ ಪಡೆದರು

ರಾಜಕಾರಣಿಗಳ ಕೈವಾಡ!

‘ಬಿಎಸ್‌ಡಬ್ಲ್ಯುಎಂಎಲ್‌ ಸ್ಥಾಪಿಸಲು ಹೊರಟಿದ್ದ ಮೂರು ದೊಡ್ಡ ವರ್ಗಾವಣೆ ಕೇಂದ್ರಗಳ ಟೆಂಡರ್‌ ಗುತ್ತಿಗೆಯಲ್ಲಿ ರಾಜಕಾರಣಿಗಳ ಕೈವಾಡವಿದೆ. ನೂರಾರು ಕೋಟಿಯನ್ನು ದುರುಪಯೋಗ ಮಾಡಿಕೊಳ್ಳುವ ಹುನ್ನಾರ ಇದೆ. ಈಗಾಗಲೇ ಹಲವು ಕೋಟಿ ದುರುಪಯೋಗವಾಗಿದೆ. ಇದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೇಲೆ ಕ್ರಮವಾಗಬೇಕು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.