ಬೆಂಗಳೂರು: ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಅವಕಾಶ ನೀಡುವ ಉದ್ದೇಶದಿಂದ ರಾಜ್ಯಸರ್ಕಾರ ಎಪಿಎಂಸಿ ಕಾಯ್ದೆಗೆ ‘ಸುಗ್ರೀವಾಜ್ಞೆ’ ಹೊರಡಿಸಲು ಮುಂದಾಗಿದೆ.ಆದರೆ, ಚಾಮರಾಜನಗರದ ಸೋಲಿಗ ಸಮುದಾಯದ ರೈತರು ಈಗಾಗಲೇ ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಕಾಫಿ ಬೀಜ, ಕಾಳುಮೆಣಸುವಿನಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಸೋಲಿಗ ಯುವಕರು ಕಂಪನಿ ಸ್ಥಾಪಿಸಿರುವುದು ಮಾತ್ರವಲ್ಲದೆ, ₹1 ಕೋಟಿ ಮೊತ್ತದ ವಹಿವಾಟು ಕೂಡ ನಡೆಸಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸಿದ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿನ ರೈತರು, ‘ಬಿಳಿಗಿರಿ ಸೋಲಿಗಾಸ್ ಪ್ರೊಡ್ಯೂಸರ್ ಕಂಪನಿ’ ರಚಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ, ಕಾಫಿಮಂಡಳಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ನಬಾರ್ಡ್‌ನಿಂದ ನೆರವು ಪಡೆದ ಈ ಯುವ ರೈತರು, ಅದನ್ನು ವ್ಯವಸಾಯ ಮತ್ತು ಮಾರಾಟ ಕ್ರಮದಲ್ಲಿ ಅಳವಡಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.
‘ನಮ್ಮ ಜನ ಮೊದಲು, ಅರಣ್ಯದಲ್ಲಿ ಸಿಗುವ ಬೀಜಗಳನ್ನು ತಂದು ಊರೊಳಗೆ ಬಿತ್ತು ವ್ಯವಸಾಯ ಮಾಡುತ್ತಿದ್ದರು. ಆದರೆ, ಕಾಫಿ ಮಂಡಳಿ ಮತ್ತು ಸಾಂಬಾರು ಪದಾರ್ಥ ಮಂಡಳಿಯು ನಮ್ಮ ಹಿರಿಯರಿಗೆ ಗುಣಮಟ್ಟದ ಬೀಜ ಪೂರೈಸುವ ಜೊತೆಗೆ, ವ್ಯವಸಾಯ ಕ್ರಮದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನೆರವು ನೀಡಿತು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ಕೈಗೊಂಡು ಈಗ ಯಶಸ್ವಿಯಾಗಿದ್ದಾರೆ’ ಎಂದು ಯೆರಕನ ಗದ್ದೆ ಪೊಡುವಿನ ಸೋಲಿಗ ಯುವಕ, ಕಂಪನಿಯ ಕಾರ್ಯದರ್ಶಿ ಸಿ. ನಂಜೇಗೌಡ ಹೇಳುತ್ತಾರೆ.
‘ಸೋಲಿಗ ಸಮುದಾಯದ 540ಕ್ಕೂ ಹೆಚ್ಚು ರೈತರು ಸುಮಾರು 2,500 ಎಕರೆಯಲ್ಲಿ ಕಾಫಿ ಮತ್ತು ಮೆಣಸು ಬೆಳೆಯುತ್ತೇವೆ. ಮೊದಲು, ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದೆವು. ಆಗ ಒಂದು ಕುಟುಂಬಕ್ಕೆ ₹40 ಸಾವಿರದಿಂದ ₹50 ಸಾವಿರ ವರಮಾನ ಸಿಗುತ್ತಿತ್ತು. ಆದರೆ, ಈಗ ಚಿಕ್ಕಮಗಳೂರಿನಲ್ಲಿನ ಕಂಪನಿಗಳಿಗೆ ನೇರವಾಗಿ ಮಾರಾಟ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
‘ಬಿಳಿಗಿರಿ ರಂಗನ ಬೆಟ್ಟದ ಹೊಸ ಪೊಡುವಿನಲ್ಲಿ ಕಂಪನಿಯ ಕೇಂದ್ರ ಕಚೇರಿ ಇದೆ. 2019ರಲ್ಲಿ ಕಂಪನಿ ಪ್ರಾರಂಭಿಸಿದಾಗ ಮೊದಲು ಕಾಫಿ ಬೀಜ ಮಾತ್ರ ಮಾರಾಟ ಮಾಡುತ್ತಿದ್ದೆವು. ಆ ವರ್ಷ 40 ಟನ್ ಕಾಫಿ ಮಾರಾಟ ಮಾಡಿದೆವು. ಈ ವರ್ಷದ ಪ್ರಾರಂಭದಲ್ಲಿ ಕಾಳು ಮೆಣಸು ಕೂಡ ಮಾರಾಟ ಮಾಡಲು ಆರಂಭಿಸಿದ್ದು, 10 ಟನ್ ಮೆಣಸು ಉತ್ಪಾದಿಸಿದ್ದೇವೆ. ಈ ವರ್ಷ ಎರಡೂ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ₹1 ಕೋಟಿ ವಹಿವಾಟು ನಡೆಸಿದ್ದೇವೆ’ ಎಂದು ನಂಜೇಗೌಡ ಹೆಮ್ಮೆಯಿಂದ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.