ADVERTISEMENT

ಬೆಂಗಳೂರು | ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ: 7 ಮಂದಿಗೆ ಗಾಯ

ಮಾರುತಿ ನಗರದಲ್ಲಿ ಘಟನೆ: ನಾಲ್ವರ ಸ್ಥಿತಿ ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 16:23 IST
Last Updated 22 ನವೆಂಬರ್ 2023, 16:23 IST
ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದ ಮನೆ.
ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದ ಮನೆ.   

ಬೆಂಗಳೂರು: ಕೋಣನಕುಂಟೆ ವೀವರ್ಸ್‌ ಕಾಲೊನಿಯ ಮಾರುತಿ ನಗರದಲ್ಲಿ ಬುಧವಾರ ಬೆಳಿಗ್ಗೆ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಮನೆಯಲ್ಲಿದ್ದ ಏಳು ಮಂದಿ ಗಾಯಗೊಂಡಿದ್ಧಾರೆ.

ಉತ್ತರ ಪ್ರದೇಶದ ಬನಾರಸ್‌ನ ಜಮಾಲ್(33), ಅವರ ಪತ್ನಿ ನಾಜಿಯಾ(23) ಹಾಗೂ ಇರ್ಫಾನ್(22) ಮತ್ತು ಅವರ ಪತ್ನಿ ಗುಲಾಬ್(19), ಶಹಜಾದ್(9) ಸೇರಿದಂತೆ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಜಮಾಲ್ ಮತ್ತು ನಾಜಿಯಾ ಹಾಗೂ ಇಬ್ಬರು ಚಿಕ್ಕ ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಳಿಮಾವು ನಿವಾಸಿ ಮಾರ್ಟಿನ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಏಳು ಮಂದಿ ನೆಲೆಸಿದ್ದರು.

ADVERTISEMENT

ಜಮಾಲ್ ಮತ್ತು ಇರ್ಫಾನ್ ದಂಪತಿ ವೀವರ್ಸ್ ಕಾಲೊನಿ ಸಮೀಪದಲ್ಲೇ ಕೈಮಗ್ಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ‌

‘ಕಾರ್ಖಾನೆಯಲ್ಲಿ ಮಂಗಳವಾರ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದವರು ಅಡುಗೆ ತಯಾರಿಸಿ ಊಟ ಮಾಡಿದ್ದರು. ಅದಾದ ಮೇಲೆ ಸಿಲಿಂಡರ್‌ ಆಫ್‌ ಮಾಡಿರಲಿಲ್ಲ. ರಾತ್ರಿಯಿಡೀ ಅಡುಗೆ ಅನಿಲ ಸೋರಿಕೆಯಾಗಿತ್ತು. ಅಡುಗೆ ಕೋಣೆಯ ಬಾಗಿಲು ಹಾಗೂ ಕಿಟಕಿ ಮುಚ್ಚಿದ್ದರಿಂದ ಅನಿಲ್‌ ಸೋರಿಕೆಯಾಗುತ್ತಿರುವುದು ಮನೆಯವರ ಅರಿವಿಗೆ ಬಂದಿರಲಿಲ್ಲ. ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ನಾಜಿಯಾ ಅಡುಗೆ ಕೋಣೆಯ ವಿದ್ಯುತ್ ಸ್ವಿಚ್ ಆನ್ ಮಾಡಿದಾಗ ಸ್ಫೋಟ ಸಂಭವಿಸಿದೆ. ಎಲ್ಲರಿಗೂ ಸುಟ್ಟ ಗಾಯಗಳಾಗಿವೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಬಾಗಿಲು, ಮೂರು ಕಿಟಕಿಗಳು, ಹೊರಾಂಗಣದಲ್ಲಿದ್ದ ಕಬ್ಬಿಣದ ಕಂಬಿಗಳು ಛಿದ್ರಗೊಂಡು ಹೊರಗಡೆ ಬಿದ್ದಿವೆ. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಎದುರು ಮನೆಯ ಮೇಲೆ ಸಿಲಿಂಡರ್ ಮತ್ತು ಕಿಟಕಿ ಬಿದ್ದು ಚಾವಣಿಗೆ ಹಾನಿಯಾಗಿದೆ. ಪಕ್ಕದ ಮನೆ ಈಶ್ವರಮ್ಮ ಅವರಿಗೂ ಸಣ್ಣ ಪ್ರಮಾಣದ ಗಾಯವಾಗಿದೆ.

ಬೆಳಿಗ್ಗೆಯೇ ರಕ್ಷಣಾ ಕಾರ್ಯಾಚರಣೆ:

ಪಕ್ಕದ ಮನೆಯ ನಿವಾಸಿಗಳು ಕರೆ ಮಾಡಿ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಅಸ್ವಸ್ಥಗೊಂಡಿದ್ದ ಏಳು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.

ಸ್ಪೋಟದ ರಭಸಕ್ಕೆ ಕಿಟಕಿಗೆ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.