ಬೆಂಗಳೂರು: ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ಬಂಧಿಸಲಾಗಿರುವ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ (ಬೆಂಗಳೂರು ಪಶ್ಚಿಮ) ಕಾನೂನು ಪರಿವೀಕ್ಷಣಾ ಅಧಿಕಾರಿ ಗೀತಾ ನೀಡಿದ್ದ ದೂರು ಆಧರಿಸಿ ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಾಗಿತ್ತು. ಸೋನು ಶ್ರೀನಿವಾಸ್ ಗೌಡ ಅವರನ್ನು ಮಾರ್ಚ್ 22ರಂದು ಬಂಧಿಸಿದ್ದ ಪೊಲೀಸರು, ವಿಚಾರಣೆಗಾಗಿ ಮಾರ್ಚ್ 25ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದರು.
‘ಸೋನು ಶ್ರೀನಿವಾಸ್ ಗೌಡ ಅವರನ್ನು ವಾಸವಿದ್ದ ಮನೆಗೆ ಹಾಗೂ ಬಾಲಕಿಯ ರಾಯಚೂರಿನ ಮನೆಗೆ ಕರೆದೊಯ್ದು ಮಹಜರು ನಡೆಸಲಾಗಿದೆ. ಜೊತೆಗೆ, ಮಗು ದತ್ತು ಸಂಬಂಧ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಕಸ್ಟಡಿಗೆ ಅವಧಿ ಮುಗಿದಿದ್ದರಿಂದ, ಅವರನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರದ ಕೇಂದ್ರ ಮಹಿಳಾ ಕಾರಾಗೃಹದಲ್ಲಿದ್ದಾರೆ’ ಎಂದು ತಿಳಿಸಿವೆ.
ಮಾರಾಟದ ಮಾಹಿತಿ
‘ಪೋಷಕರಿಗೆ ಹಣ ಕೊಟ್ಟು ಬಾಲಕಿಯನ್ನು ಕರೆತಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಪೋಷಕರು ನಿರಾಕರಿಸಿದ್ದಾರೆ. ಈ ಆರೋಪದ ಬಗ್ಗೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.