ಬೆಂಗಳೂರು: ‘ನಮ್ಮ ಮೆಟ್ರೊ’ಗೆ ಶೀಘ್ರದಲ್ಲಿ 21 ರೈಲುಗಳು ಸೇರ್ಪಡೆಯಾಗಲಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೆಟ್ರೊ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರವರೆಗೆ ಬುಧವಾರ ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಜೊತೆಗೆ ಪ್ರಾಯೋಗಿಕವಾಗಿ ಸಂಚಾರ ನಡೆಸಿದ ಬಳಿಕ ಅವರು ಮಾತನಾಡಿದರು.
ಹೊಸ ರೈಲುಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ₹1,130 ಕೋಟಿ ವೆಚ್ಚದಲ್ಲಿ ರೈಲುಗಳು ಪೂರೈಕೆಯಾಗಲಿವೆ. ಮೆಟ್ರೊ ರೈಲಿನಲ್ಲಿ ಈಗಿರುವ ವಿಪರೀತ ದಟ್ದಣೆ ಹೊಸ ರೈಲುಗಳು ಸೇರ್ಪಡೆಗೊಂಡ ಬಳಿಕ ಕಡಿಮೆಯಾಗಲಿದೆ ಎಂದು ಹೇಳಿದರು.
33.46 ಕಿ.ಮೀ. ಹಸಿರು ಮಾರ್ಗ, 40.5 ಕಿ.ಮೀ. ನೇರಳೆ ಮಾರ್ಗ ಸದ್ಯ ಚಾಲನೆಯಲ್ಲಿವೆ. ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳು ನಿರ್ಮಾಣಗೊಳ್ಳುತ್ತಿವೆ. 2026ರ ವೇಳೆಗೆ 175 ಕಿ.ಮೀ. ಉದ್ದದ ಮೆಟ್ರೊ ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.
ಮೆಟ್ರೊ ಒಂದು ಮತ್ತು ಎರಡನೇ ಹಂತ ಪೂರ್ಣಗೊಂಡಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.
ಮಂಜುನಾಥ ನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಿ, ಅನುಕೂಲ ಮಾಡಿಕೊಡಲಾಗುತ್ತಿದೆ. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಪಾದಚಾರಿ ಮೇಲ್ಸೇತುವೆ ಸೇರಿದಂತೆ ವಿವಿಧ ಅನುಕೂಲಗಳನ್ನು ಮಾಡಲು ಭಾರತೀಯ ರೈಲ್ವೆ ಹಾಗೂ ನಮ್ಮ ಮೆಟ್ರೊ ಸಂಸ್ಥೆ ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.
ಚಿಕ್ಕಬಿದರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಸೇರಿ ಕೆಳಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೊ ನಿಲ್ದಾಣದ ಬಳಿಯೂ ಕೆಳಸೇತುವೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಸುತ್ತಬಹುದು. ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿಯೇ ಹೆಚ್ಚು ಪ್ರಯಾಣಿಕರ ಸಂಚಾರ
‘ದೆಹಲಿ ಮುಂಬೈ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇರುವ ಮೆಟ್ರೊ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಮಾಣಕ್ಕಿಂತ ಬೆಂಗಳೂರಿನಲ್ಲಿರುವ ನೇರಳೆ ಮಾರ್ಗ ಹಸಿರು ಮಾರ್ಗಗಲ್ಲಿ ಪ್ರಯಾಣಿಸುವವರ ಪ್ರಮಾಣ ಹೆಚ್ಚಿದೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.