ಬೆಂಗಳೂರು: ‘ಹಲವು ರಾಷ್ಟ್ರಗಳೊಂದಿಗೆ ಒಗ್ಗೂಡಿ ಚಂದ್ರನ ಅಂಗಳದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ’ ಎಂದು ಇಸ್ರೊ ಯು.ಆರ್.ರಾವ್ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಎಂ.ಅಣ್ಣಾ ದೊರೆ ತಿಳಿಸಿದರು.
‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಯು. ಆರ್. ರಾವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಯೋಜನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕನಿಷ್ಠ ಬಾಹ್ಯಾಕಾಶದಲ್ಲಿಯಾದರೂ ಯಾವುದೇ ರೀತಿಯ ಗಡಿಗಳು ಇರಬಾರದು ಎನ್ನುವ ಚಿಂತನೆಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ವಿಜ್ಞಾನಿಗಳ ಸಮೂಹದ ಆಶಯಕ್ಕೆ ಪ್ರಮುಖ ರಾಷ್ಟ್ರಗಳು ಬೆಂಬಲ ನೀಡಿವೆ. ವಿಜ್ಞಾನಿಗಳು ಈ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ
ಎಂದು ಅವರು ವಿವರಿಸಿದರು.
‘ಯು.ಆರ್.ರಾವ್ ಅವರು ಬೆಂಗಳೂರಿನಲ್ಲಿ ಇಸ್ರೊ ಉಪಗ್ರಹ ಕೇಂದ್ರ ನಿರ್ಮಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು’ ಎಂದು ಅವರು ನೆನಪಿಸಿಕೊಂಡರು.
ಯು.ಆರ್. ರಾವ್ ಅವರ ತಮ್ಮ ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿಯ ಮಾಜಿ ನಿರ್ದೇಶಕ ಡಾ.ಎಂ.ಗೋವಿಂದರಾವ್ ಅವರು, ಯು.ಆರ್.ರಾವ್ ಅವರ ಬಾಲ್ಯ ಮತ್ತು ಜೀವನದಲ್ಲಿ ಎದುರಿಸಿದ ಕಷ್ಟ ಮತ್ತು ಸವಾಲುಗಳನ್ನು ಭಾವನಾತ್ಮಕವಾಗಿ ವಿವರಿಸಿದರು.
ಈ ಕೃತಿಯು ಇತರರಿಗೆ ಸ್ಪೂರ್ತಿಯಾಗಲಿದೆ. ಯು.ಆರ್.ರಾವ್ ಅವರು ಎಂದು ಅನುಕಂಪವನ್ನು ಬಯಸಲಿಲ್ಲ. ವಿಜ್ಞಾನಿಯ ಗೌರವ ಮಾತ್ರ ತಮಗೆ ಸಿಗಬೇಕು ಎಂದು ಬಯಸಿದ್ದರು ಎಂದು ಸ್ಮರಿಸಿದರು.
ನಾಲ್ಕು ತಂತಿ ಪ್ರಕಾಶನದ ಬಿ.ಸುರೇಶ್ ಅವರು, ‘ಈ ಪುಸ್ತಕವನ್ನು ಪ್ರಕಟಿಸುವ ಮೂಲಕ ಯು.ಆರ್.ರಾವ್ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇವೆ. ಒಬ್ಬ ಸಾಧಕನ ಕಥೆಯನ್ನು ಜನರಿಗೆ ತಲುಪಿಸಿದ ತೃಪ್ತಿ ಇದೆ. ಇಂದಿನ ಸನ್ನಿವೇಶದಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಸೃಷ್ಟಿಸುವುದು ಅಗತ್ಯವಾಗಿದೆ’ ಎಂದು
ಪ್ರತಿಪಾದಿಸಿದರು.
ಕೃತಿ ಕುರಿತು
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಛಾಪು ಮೂಡಿಸುವಲ್ಲಿ ಪ್ರೊ.ಯು.ಆರ್.ರಾವ್ ಅವರು ವಹಿಸಿದ ಮಹತ್ವದ ಪಾತ್ರ ಮತ್ತು ಕಾರ್ಯಗಳನ್ನು ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.
ಇಸ್ರೊದ ಹಲವು ಮಹತ್ವದ ಯೋಜನೆಗಳನ್ನು ರಾವ್ ಅವರು ಯಶಸ್ವಿಗೊಳಿಸಿದ್ದಾರೆ. ರಾವ್ ಅವರು ವೈಯಕ್ತಿಕ, ವೃತ್ತಿಪರ ಸಾಧನೆಗಳನ್ನು ಬಿಂಬಿಸಲಾಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ರಾವ್ ಭಾರತ ಮಹತ್ವದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲು ಕಾರಣಗಳನ್ನು ವಿಶ್ಲೇಷಿಸಲಾಗಿದೆ.
ಬಾಹ್ಯಾಕಾಶ ನೀತಿಯನ್ನು ರೂಪಿಸುವಲ್ಲಿ ರಾವ್ ಅವರು ಪ್ರಮುಖ ಪಾತ್ರ ವಹಿಸಿದ್ದನ್ನು ಉಲ್ಲೇಖಿಸಲಾಗಿದೆ. ರಾವ್ ಅವರ ಸಹೋದರ ಮತ್ತು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಎಂ.ಗೋವಿಂದರಾವ್ ಅವರು ಮುನ್ನುಡಿ ಬರೆದಿದ್ದಾರೆ.
ಪುಸ್ತಕ ಪರಿಚಯ
ಪುಸ್ತಕ: ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಯು. ಆರ್. ರಾವ್’
ಲೇಖಕರು: ಜಿ.ಎನ್. ಪ್ರಶಾಂತ್
ಪ್ರಕಾಶನ: ನಾಕುತಂತಿ
ಪುಟಗಳು: 222
ಬೆಲೆ: ₹ 250
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.