ಬೆಂಗಳೂರು: ಯುಗಾದಿ ಹಬ್ಬದ ಆಚರಣೆಗೆ ನಗರದ ಜನ ಸಜ್ಜಾಗಿದ್ದು, ಸೋಮವಾರ ವಿವಿಧ ಮಾರುಕಟ್ಟೆಗಳಲ್ಲಿ ಹಣ್ಣು–ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯ ಭರಾಟೆ ಜೋರಾಗಿತ್ತು.
ಮಾವು ಮತ್ತು ಬೇವಿನ ಸೊಪ್ಪನ್ನು ತಂದು ರಸ್ತೆ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದರು.
ನಗರದ ಬಟ್ಟೆ ಅಂಗಡಿಗಳು, ಆಭರಣದ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಎರಡು–ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ದರಗಳು ಏರಿಕೆಯಾಗಿವೆ.
ಕೆ.ಆರ್.ಮಾರುಕಟ್ಟೆ, ಯಶವಂತಪುರ, ಗಾಂಧಿಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು.
ಹೂಗಳ ಬೆಲೆ ಗಗನಮುಖಿ: ‘ಹಬ್ಬದ ಹಿನ್ನೆಲೆಯಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳು ಏರಿಕೆಯಾಗಿವೆ’ ಎಂದು ಕೆ.ಆರ್. ಮಾರುಕಟ್ಟೆ ಹೂವಿನ ವ್ಯಾಪಾರಿ ಸುಹಾಸ್ ಮಾಹಿತಿ ನೀಡಿದರು.
‘ಕನಕಾಂಬರ ಪ್ರತಿ ಕೆ.ಜಿ.ಗೆ ₹1,000, ಮಲ್ಲಿಗೆ ಕೆ.ಜಿಗೆ ₹800 ಇದೆ. ಸೇವಂತಿಗೆ ಕೆ.ಜಿಗೆ ₹300, ಗುಲಾಬಿ ಕೆ.ಜಿಗೆ ₹200, ಸುಗಂಧರಾಜ ಕೆ.ಜಿಗೆ ₹240 ರಂತೆ ಮಾರಾಟವಾಗುತ್ತಿದೆ’ ಎಂದರು.
‘ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಖಾದ್ಯಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಬೆಂಗಳೂರು, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯುಗಾದಿಯು ಹೊಸ ತೊಡಕು ವಿಜೃಂಭಣೆಯಿಂದ ನಡೆಯುತ್ತದೆ. ಈ ವೇಳೆ ಮಾಂಸದ ಬೆಲೆ ಗಗನಕ್ಕೇರುತ್ತದೆ. ತರಕಾರಿಗಳ ದರಗಳು ಸ್ಥಿರವಾಗಿವೆ’ ಎಂದು ತರಕಾರಿ ವರ್ತಕ ಸುಹೇಲ್ ತಿಳಿಸಿದರು.
ಮಳೆ ಕಡಿಮೆ ಆಗಿರುವ ಕಾರಣ ಕನಕಾಂಬರ ಹೂವಿನ ಬೆಳೆ ಚೆನ್ನಾಗಿ ಬಂದಿದ್ದು ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಇಲ್ಲದಿದ್ದರೆ ಕೆ.ಜಿಗೆ ₹2 ಸಾವಿರದಂತೆ ಮಾರಾಟವಾಗುತ್ತಿತ್ತು.-ಸುರೇಶ್ ಗಂಗಾ, ಹೂವಿನ ವ್ಯಾಪಾರಿಗಳು ಕೆ.ಆರ್. ಮಾರುಕಟ್ಟೆ
ಯುಗಾದಿ ಹಬ್ಬಕ್ಕೆ ತಟ್ಟಿದ ಬರದ ಬಿಸಿ
ದಾಬಸ್‌ಪೇಟೆ: ಬರದ ಛಾಯೆ ಬಿಸಿಲಿನ ತಾಪ ಹಾಗೂ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರಲ್ಲಿ ಹಬ್ಬದ ಸಡಗರ ಸಂಭ್ರಮ ಕಾಣಿಸುತ್ತಿಲ್ಲ. ‘ಈ ಬಾರಿ ಮಳೆಯಿಲ್ಲದೇ ಬೆಳೆ ಇಲ್ಲದೇ ಜನರು ಕಂಗಾಲಾಗಿದ್ದರು. ಅದರ ನಡುವೆ ನೀರಿನ ಅಭಾವ ತಲೆದೋರಿದೆ. ಹಬ್ಬಕ್ಕೆ ಬೇಕಾದ ಹಣ್ಣು ತರಕಾರಿ ಹೂವಿನ ಬೆಲೆಯೂ ಹೆಚ್ಚಾಗಿದೆ. ಹಬ್ಬ ಮಾಡುವುದಕ್ಕೆ ಮನಸ್ಸೇ ಇಲ್ಲ’ ಎಂದು ಗೃಹಿಣಿ ಗಂಗಮ್ಮ ಹೇಳುತ್ತಾರೆ.
‘ಬಿಸಿಲಿನಿಂದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೈನಲ್ಲಿ ಕಾಸಿಲ್ಲ. ಮಕ್ಕಳಿಗೆ ಬಟ್ಟೆ ಕೊಡಿಸಲು ಆಗುತ್ತಿಲ್ಲ. ಹಬ್ಬದ ನೆಪ ಇಟ್ಟುಕೊಂಡು ಹೂವು ಹಣ್ಣು ತರಕಾರಿ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ‘ ಎಂದು ಎಂದು ಕಾರ್ಮಿಕ ಗಂಗಣ್ಣ ಬೇಸರ ವ್ಯಕ್ತಪಡಿಸಿದರು.
ಯುಗಾದಿ ಹಬ್ಬದಂದು ಗ್ರಾಮೀಣ ಭಾಗದ ಜನರು ಹೊಸ ಬಟ್ಟೆ ಖರೀದಿಸಿ ಮನೆಗೆ ಬೇಕಾದ ದಿನಸಿ ತರಕಾರಿ ಹೂವು ಹಣ್ಣು ತೆಗೆದುಕೊಂಡು ಹೋಗುತ್ತಾರೆ. ಹಬ್ಬದ ಅಂಗವಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದರು. ಆದರೆ ಈ ಬಾರಿ ಜನರಲ್ಲಿ ಆ ಬಿರಿಸು ಕಾಣಿಸುತ್ತಿಲ್ಲ’ ಎಂದು ವರ್ತಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.