ADVERTISEMENT

ವಿಶೇಷ ಕಾರ್ಯಾಚರಣೆ: ಎಲೆಕ್ಟ್ರಿಕ್‌ ಬೈಕ್‌ ಸೇರಿ 144 ವಾಹನಗಳ ವಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 23:12 IST
Last Updated 5 ಜುಲೈ 2024, 23:12 IST
ನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅನಧಿಕೃತವಾಗಿ ಸಂಚರಿಸುವ ಬೈಕ್‌ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡರು.
ನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅನಧಿಕೃತವಾಗಿ ಸಂಚರಿಸುವ ಬೈಕ್‌ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡರು.   

ಬೆಂಗಳೂರು: ನಗರದಾದ್ಯಂತ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಾರಿಗೆ ಅಧಿಕಾರಿಗಳ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, 29 ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇರಿದಂತೆ ಅನಧಿಕೃತವಾಗಿ ಸಂಚರಿಸುತ್ತಿದ್ದ 144 ವಾಹನಗಳನ್ನು ವಶಪಡಿಸಿಕೊಂಡಿವೆ.

‘ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗಳು ಬಾಡಿಗೆಗೆ ಸಂಚರಿಸುವುದನ್ನು ನಿಷೇಧಿಸಿದ್ದರೂ ಕ್ರಮ ಕೈಗೊಂಡಿಲ್ಲ, ಒಂದು ನಗರ ಒಂದು ದರ ಎಂದು ಕಾನೂನು ಮಾಡಿದ್ದರೂ ಅಗ್ರಗೇಟರ್‌ ಕಂಪನಿಗಳ ವಾಹನಗಳು ಹೆಚ್ಚುವರಿ ಬಾಡಿಗೆ ಪಡೆಯುತ್ತಿವೆ’ ಎಂದು ಆರೋಪಿಸಿ ಸಾರಿಗೆ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಚಾಲಕರು ಗುರುವಾರ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ್ದರು. ಬಳಿಕ ಎಚ್ಚೆತ್ತುಕೊಂಡ ಸಾರಿಗೆ ಆಯುಕ್ತ ಎ.ಎಂ. ಯೋಗೀಶ್‌ ಅನಧಿಕೃತವಾಗಿ ಸಂಚರಿಸುವ ವಾಹನಗಳ ಪತ್ತೆಗೆ ಪ್ರಾದೇಶಿಕ ಸಾರಿಗೆ ಕಚೇರಿವಾರು 11 ತಂಡಗಳನ್ನು ರಚಿಸಿದ್ದರು. 

ಶುಕ್ರವಾರ ಬೆಳಿಗ್ಗೆಯೇ ಅಧಿಕಾರಿಗಳು ವಾಹನ ತಪಾಸಣೆ ಮಾಡುವಂತೆ ಸಹಾಯಕ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ಸೂಚನೆ ನೀಡಿದ್ದರು. 

ADVERTISEMENT

ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ 11, ದೇವನಹಳ್ಳಿ ವ್ಯಾಪ್ತಿಯಲ್ಲಿ ಒಂಬತ್ತು, ಚಂದ್ರಾಪುರ ವ್ಯಾಪ್ತಿಯಲ್ಲಿ 11, ಯಲಹಂಕ ವ್ಯಾಪ್ತಿಯಲ್ಲಿ 15, ಜಯನಗರ ವ್ಯಾಪ್ತಿಯಲ್ಲಿ 12, ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯಲ್ಲಿ 12, ಕೆ.ಆರ್‌.ಪುರ ವ್ಯಾಪ್ತಿಯಲ್ಲಿ 10, ಕೋರಮಂಗಲ ವ್ಯಾಪ್ತಿಯಲ್ಲಿ 18, ರಾಜಾಜಿನಗರ ವ್ಯಾಪ್ತಿಯಲ್ಲಿ 15, ಯಶವಂತಪುರ ವ್ಯಾಪ್ತಿಯಲ್ಲಿ 16 ಹಾಗೂ ಕಸ್ತೂರಿನಗರ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ 15 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಅನಧಿಕೃತವಾಗಿ ಸಂಚರಿಸುವ ಬೈಕ್‌ ಟ್ಯಾಕ್ಸಿಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.