ADVERTISEMENT

ನಟ ದರ್ಶನ್‌ಗೆ ಜಾಮೀನು ನೀಡದಂತೆ ಕೋರ್ಟ್‌ಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ

‘ದರ್ಶನ್ ತಂಡದ ಷಡ್ಯಂತ್ರ: ತನಿಖೆಯಿಂದ ದೃಢ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:47 IST
Last Updated 8 ಅಕ್ಟೋಬರ್ 2024, 15:47 IST
ನಟ ದರ್ಶನ್‌
ನಟ ದರ್ಶನ್‌   

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರವೂ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ನಡೆಯಿತು.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನಕುಮಾರ್‌ ಅವರು ಪ್ರತಿವಾದ ಮಂಡಿಸಿ, ‘ಕೃತ್ಯ ಎಸಗಲು ಆರೋಪಿಗಳು ಸಂಚು ರೂಪಿಸಿರುವುದು ತನಿಖೆಯಿಂದ ಸಾಬೀತಾಗಿದ್ದು, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

‘ರೇಣುಕಸ್ವಾಮಿ ಫೆಬ್ರುವರಿಯಿಂದಲೂ ಪವಿತ್ರಾಗೌಡ ಅವರಿಗೆ ‘ಗೌತಮ್’ ಹೆಸರಿನ ಖಾತೆಯಿಂದ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಪವಿತ್ರಾಗೌಡ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಬ್ಲಾಕ್‌ ಮಾಡಿ ಪೊಲೀಸರಿಗೆ ದೂರು ನೀಡಿದ್ದರೆ ಸಾಕಿತ್ತು. ಅದನ್ನು ಬಿಟ್ಟು ಕೊಲೆಗೆ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಪ್ರಸನ್ನ ಕುಮಾರ್ ಹೇಳಿದರು.

ADVERTISEMENT

‘ಆರೋಪಿಗಳ ಮಧ್ಯೆ ಮೊಬೈಲ್‌ ಮೂಲಕ ಮಾತುಕತೆ ನಡೆದಿದೆ. ಕರೆಗಳ ವಿವರವೂ ಸಿಕ್ಕಿದೆ. ಕೃತ್ಯ ನಡೆದ ಸಮಯ ಹಾಗೂ ಸ್ಥಳದಲ್ಲಿ ಆರೋಪಿಗಳು ಇದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಲಭಸಿವೆ. ಆರೋಪಿಗಳು ರೇಣುಕಸ್ವಾಮಿ ಅವರನ್ನು ಅಪಹರಿಸಿ ಕಾರಿನಲ್ಲಿ ಕರೆ ತರುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ’ ಎಂದು ವಿವರಿಸಿದರು.

ಜೂನ್‌ 8ರಂದು ಮಧ್ಯಾಹ್ನ 1.32ಕ್ಕೆ ಆರೋಪಿಗಳು ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಬಳಿಕ ರೇಣುಕಸ್ವಾಮಿ ಫೋಟೊವನ್ನು ಆರೋಪಿ ವಿನಯ್ ರೆಸ್ಟೋರೆಂಟ್‌ನಲ್ಲಿ ದರ್ಶನ್‌ ಜೊತೆ ಪಾರ್ಟಿ ಮಾಡುತ್ತಿದ್ದವರಿಗೆ ಕಳುಹಿಸಿದ್ದರು. ಹಲ್ಲೆಯಿಂದ ರೇಣುಕಸ್ವಾಮಿಯ ಮೂಳೆಗಳು ಮುರಿದಿದ್ದವು ಎಂದು ವಾದಿಸಿದರು. 

ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಅಕ್ಟೋಬರ್ 4 ಹಾಗೂ 5ರಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.