ADVERTISEMENT

ಅಕ್ರಮ ಆಸ್ತಿ: ಬೆಸ್ಕಾಂ ನಿವೃತ್ತ ಎಇಇಗೆ ₹1 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 16:02 IST
Last Updated 4 ಜುಲೈ 2024, 16:02 IST
   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪದಡಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಬೆಸ್ಕಾಂ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ. ರಾಮಲಿಂಗಯ್ಯ ಅಪರಾಧಿ ಎಂದು ತೀರ್ಮಾನಿಸಿರುವ ವಿಶೇಷ ನ್ಯಾಯಾಲಯ, ಮೂರು ವರ್ಷಗಳ ಕಠಿಣ ಸಜೆ ಮತ್ತು ₹1 ಕೋಟಿ ದಂಡ ವಿಧಿಸಿದೆ.

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಜೂನ್‌ 29ರಂದು ಅಂತಿಮ ಆದೇಶ ನೀಡಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು, ‘ರಾಮಲಿಂಗಯ್ಯ ವಿರುದ್ಧದ ಆರೋ‍ಪಗಳು ಸಾಬೀತಾಗಿವೆ’ ಎಂದು ಘೋಷಿಸಿದ್ದಾರೆ.

ಕರ್ನಾಟಕ ವಿದ್ಯುತ್‌ ಮಂಡಳಿಯಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಗೆ 1984ರಲ್ಲಿ ಸೇರಿದ್ದ ರಾಮಲಿಂಗಯ್ಯ, ನಂತರ ಬೆಸ್ಕಾಂಗೆ ವರ್ಗಾವಣೆಯಾಗಿದ್ದರು. ಅಲ್ಲಿಂದ ಲೋಕೋಪಯೋಗಿ ಇಲಾಖೆಯ ವಿದ್ಯುತ್‌ ವಿಭಾಗದಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪದಡಿ ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, 2011ರ ಸೆಪ್ಟೆಂಬರ್‌ 30ರಂದು ಅವರ ಮನೆ, ಕಚೇರಿಗಳಲ್ಲಿ ಶೋಧ ನಡೆಸಿದ್ದರು.

ADVERTISEMENT

ಲೋಕಾಯುಕ್ತದಲ್ಲಿ ಡಿವೈಎಸ್‌ಪಿಗಳಾಗಿದ್ದ ಅಬ್ದುಲ್‌ ಅಹದ್‌, ಡಾ. ಅಶ್ವಿನಿ ಮತ್ತು ಎಂ. ನಾರಾಯಣ ಈ ಪ್ರಕರಣದ ತನಿಖೆ ನಡೆಸಿದ್ದರು. ಡಿವೈಎಸ್‌ಪಿ ಕೆ. ರವಿಶಂಕರ್‌ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಅಧಿಕಾರಿಯು ತನ್ನ ಆದಾಯಕ್ಕಿಂತ ₹1.06 ಕೋಟಿ (ಶೇಕಡ 44.6) ಮೌಲ್ಯದ ಆಸ್ತಿಯನ್ನು ಹೆಚ್ಚುವರಿಯಾಗಿ ಹೊಂದಿರುವುದು ದೃಢಪಟ್ಟಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

2017ರ ಆಗಸ್ಟ್‌ನಲ್ಲಿ ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭವಾಗಿದ್ದು, 2024ರ ಮಾರ್ಚ್‌ 14ರಂದು ಪೂರ್ಣಗೊಂಡಿತ್ತು. 30 ಮಂದಿ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯ ದಾಖಲು ಮಾಡಿಕೊಂಡಿತ್ತು. ಲೋಕಾಯುಕ್ತ ಪ್ರಕರಣಗಳ ಎಸ್‌ಪಿಪಿಗಳಾದ ರಮೇಶ್‌ ಬಾಬು ಮತ್ತು ಮಂಜುನಾಥ ಹೊನ್ನಯ್ಯ ನಾಯಕ್‌ ಅವರು ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದರು.

ಅಪರಾಧಿಯು ದಂಡ ಪಾವತಿಸಲು ತಪ್ಪಿದ್ದಲ್ಲಿ ನಾಲ್ಕು ತಿಂಗಳ ಸಾಧಾರಣ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.