ಬೆಂಗಳೂರು: ಕಲಾ ಪ್ರೇಮಿಗಳಿಗೆತಿಂಗಳು ಪೂರ್ತಿ ಸಂಗೀತದ ರಸದೌತಣ ಬಡಿಸಲು ಶ್ರೀರಾಮಸೇವಾ ಮಂಡಳಿಯ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಸಜ್ಜಾಗಿದೆ. ಏಪ್ರಿಲ್ 2ರಿಂದ ಮೇ 2ರವರೆಗೆ 84ನೇಯ ‘ಶ್ರೀ ರಾಮನವಮಿ ಮತ್ತು ಅಂತರರಾಷ್ಟ್ರೀಯ ಸಂಗೀತೋತ್ಸವ’ವನ್ನುಟ್ರಸ್ಟ್ ಹಮ್ಮಿಕೊಂಡಿದೆ.
ಚಾಮರಾಜಪೇಟೆಯ ಹಳೆಕೋಟೆ ಪ್ರೌಢಶಾಲೆ ಆವರಣದಲ್ಲಿಖ್ಯಾತ ಸಂಗೀತಗಾರರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಭೌತಿಕ ಹಾಗೂ ಆನ್‌ಲೈನ್ ಎರಡನ್ನು ಒಳಗೊಂಡ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು, ವಿದ್ವಾಂಸರು, ವೀಣೆ, ಪಿಟೀಲು, ಕೊಳಲು ವಾದಕರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏ.10ರಂದು ‘ಭಾರತ ಸ್ವತಂತ್ರ ಸಂಗೀತ ವೈಭವಂ’ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಡಾ.ಮೈಸೂರು ಮಂಜುನಾಥ್ ನೇತೃತ್ವದಲ್ಲಿ 75 ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ.
ಸಂಗೀತೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯುವ ಮೊದಲು, ಮಾ.27ರಂದು ಸಂಜೆ 6.30ರಿಂದ ರಾತ್ರಿ 9.30ರವರೆಗೆ ವಿಶೇಷ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿದೆ. ಸಿದ್ಧ್ ಶ್ರೀರಾಂ, ತ್ರಿವೇಂಡ್ರಂ ಸಂಪತ್, ನೈವೇಲಿ ನಾರಾಯಣ್ ಹಾಗೂ ಗುರುಪ್ರಸಾದ್ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ರಂಜನಿ ಗಾಯತ್ರಿ,ಬೆಂಗಳೂರು ಎಸ್. ಶಂಕರ್, ಸಿಕ್ಕಿಲ್ ಗುರುಚರಣ್, ವಿಜಯ ಶಂಕರ್, ಪ್ರವೀಣ್ ಗೋಡ್ಖಿಂಡಿ,ಅಭಿಷೇಕ್ ರಘುರಾಮ್,ಗಾಯತ್ರಿ ವೆಂಕಟರಾಘವನ್, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ತ್ರಿಶ್ಶೂರ್ ಸಹೋದರರು, ಕುಮರೇಶ್ ಮತ್ತು ಗಣೇಶ್, ವಿದ್ಯಾಭೂಷಣ, ಫಾಲ್ಘಾಟ್ ರಾಮಪ್ರಸಾದ್,ರಾಮಕೃಷ್ಣನ್ ಮೂರ್ತಿ, ಎಸ್. ಸಾಕೇತರಾಮನ್, ಮಲ್ಲಾಡಿ ಸಹೋದರರು, ಪಂಡಿತ್ ವೆಂಕಟೇಶ್ ಕುಮಾರ್ ಸೇರಿದಂತೆನಾಡಿನ–ದೇಶದ ಹಲವು ಸಂಗೀತ ವಿದ್ವಾಂಸರು ಕಛೇರಿ ನಡೆಸಿಕೊಡಲಿದ್ದಾರೆ.
www.ramanavamitickets.com ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಮಾಹಿತಿಗೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ವರದರಾಜ್ (9448079079), ಕಾರ್ಯನಿರ್ವಾಹಕ ಅಧಿಕಾರಿ ಎಸ್ ಅಭಿಜೀತ್ ವರದರಾಜ್ (9483518012) ಅಥವಾ ಕಚೇರಿಯನ್ನು (080–26604031) ದೂರವಾಣಿ ಮೂಲಕ ಸಂಪರ್ಕಿಸಬಹುದು.ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇನ್ಫೊಸಿಸ್ ಫೌಂಡೇಷನ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗವಿದೆ.
ವಿದ್ವಾಂಸರ ಪ್ರತಿಷ್ಠಿತ ವೇದಿಕೆ
ಶ್ರೀರಾಮದೇವರ ಸ್ಫೂರ್ತಿಯನ್ನು ಸಾಂಸ್ಕೃತಿಕ ರೂಪದಲ್ಲಿ ಜನರಿಗೆ ಮುಟ್ಟಿಸಬೇಕು ಎಂಬ ಉದ್ದೇಶದಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ‘ಶ್ರೀರಾಮಸೇವಾ ಮಂಡಳಿ’ ಸ್ಥಾಪಿಸಿ, 1939ರಿಂದ ಈ ಭಾರತೀಯ ಶಾಸ್ತ್ರೀಯ ಸಂಗೀತ ಮಹೋತ್ಸವವನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದರು. 2000ರಲ್ಲಿ ಅವರ ನಿಧನದ ನಂತರವೂ, ಈ ಸಂಗೀತೋತ್ಸವವು ಮುಂದುವರಿದುಕೊಂಡು ಬಂದಿದ್ದು, ವಿದ್ವಾಂಸರ ಪ್ರತಿಷ್ಠಿತ ವೇದಿಕೆಯಾಗಿ ಮಾರ್ಪಟ್ಟಿದೆ. ಪ್ರಸ್ತುತ ಎಸ್.ಎನ್. ವರದರಾಜ್ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.