ಬೆಂಗಳೂರು: ಸ್ವದೇಶಕ್ಕೆ ಹಿಂತಿರುಗಿ ನವಜೀವನಕ್ಕೆ ಕಾಲಿಡುವ ಕನಸಿನಿಂದ ಇಲ್ಲಿನ ಚರ್ಚ್‌ವೊಂದರಲ್ಲಿ ಅಗತ್ಯ ದಾಖಲೆ ಪಡೆಯಲು ಬಂದಿದ್ದ ಶ್ರೀಲಂಕಾದ ಶಂಕಿತಉಗ್ರನೊಬ್ಬನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಏಪ್ರಿಲ್ 28ರಂದು ಕತಾರ್ ಏರ್‌ಲೈನ್ಸ್ ವಿಮಾನದಲ್ಲಿ ಉಕ್ರೇನ್‌ನಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೋಯೆಲ್ ನಿರುಶನ್ ಸ್ಯಾಮ್ಯುಯೆಲ್ (37) ಎಂಬಾತನನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಲಂಕಾ ಸ್ಫೋಟದ ಬಳಿಕ ದೆಹಲಿಯ ಶ್ರೀಲಂಕಾ ಗುಪ್ತಚರ ವಿಭಾಗದ ಸಹಾಯಕ ನಿರ್ದೇಶಕರು ಈತನಿಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು.
ಸ್ಯಾಮ್ಯುಯೆಲ್‌ನ ಇನ್ನೊಂದು ಹೆಸರು ಐ.ಟಿ. ಪೆರೆರಾ. ಈತನ ಬಳಿ ಶ್ರೀಲಂಕಾ ಹಾಗೂ ಭಾರತದ ಎರಡು ಪಾಸ್‌ಪೋರ್ಟ್‌ಗಳಿವೆ. ಎರಡೂ ಪಾಸ್‌ಪೋರ್ಟ್‌ಗಳಲ್ಲಿ ಹುಟ್ಟಿದ ದಿನಾಂಕ ಬೇರೆಬೇರೆ ನಮೂದಾಗಿವೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಶ್ರೀಲಂಕಾ ಸ್ಫೋಟದ ಬಳಿಕ ಭಾರತ ಮತ್ತು ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಕಲಿ ಪಾಸ್‌ಪೋರ್ಟ್ ಹೊಂದಿರುವ ಪೆರೆರಾ ಉಗ್ರರ ಜೊತೆ ಸಂಪರ್ಕ ಹೊಂದಿರಬಹುದು ಎಂಬ ಸಂಶಯದ ಮೇಲೆ ಬಂಧಿಸಲಾಗಿದೆ. ಈ ಸಂಬಂಧ ದ್ವೀಪ ರಾಷ್ಟ್ರವೂ ಸುಳಿವು ನೀಡಿದ್ದರಿಂದ ರಾಷ್ಟ್ರೀಯ ತನಿಖಾ ದಳ ಈತನನ್ನು ಬಂಧಿಸಿದೆ.
ಬಂಧಿತ ಶಂಕಿತ ಉಗ್ರನಲ್ಲ. ಆತನಿಗೂ ಶ್ರೀಲಂಕಾ ಸ್ಪೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಅಂಶ ವಿಚಾರಣೆಯಿಂದ ಗೊತ್ತಾಗಿದೆ. ಆತನನ್ನು ಹೆಚ್ಚಿನ ವಿಚಾರಣೆಗಾಗಿ ವಿಮಾನ ನಿಲ್ದಾಣದ ಅಧಿಕಾರಿಗಳ ವಶಕ್ಕೆ ನೀಡಲಾಗಿತ್ತು. ಆತನ ಬಳಿ ಸಿಕ್ಕಿರುವ ಭಾರತದ ಪಾಸ್‌ಪೋರ್ಟ್ ಅವಧಿ ಮೀರಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿರುವ ಮಾಜಿ ಗೆಳತಿಯ ಸಹಕಾರದಿಂದ ಇಲ್ಲಿನ ಚರ್ಚ್‌ನಲ್ಲಿ ಅಗತ್ಯ ದಾಖಲೆ ಪಡೆಯಲು ಬೆಂಗಳೂರಿಗೆ ಬಂದಿಳಿದ ಪೆರೆರಾ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈತ ಉಕ್ರೇನನಲ್ಲೂ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಅದರ ಬಗ್ಗೆ ವಿವರ ನೀಡುವಂತೆ ನಗರದ ಪೊಲೀಸರು ಆ ದೇಶದ ಪೊಲೀಸರಿಗೆ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.