ADVERTISEMENT

ಬಿಬಿಎಂಪಿ ಶಾಲೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 1ರಷ್ಟು ವೃದ್ಧಿ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:37 IST
Last Updated 9 ಮೇ 2024, 15:37 IST
ಪಿ. ಚಂದನಾ
ಪಿ. ಚಂದನಾ   

ಬೆಂಗಳೂರು: ಬಿಬಿಎಂಪಿಯ 33 ಶಾಲೆಗಳಲ್ಲಿ ಶೇ 68.78ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 66 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಗಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ 1ರಷ್ಟು ಫಲಿತಾಂಶ ವೃದ್ಧಿಯಾಗಿದೆ.

2,502 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 1,721 ಮಂದಿ ಉತ್ತೀರ್ಣರಾಗಿದ್ದು, 781 ಮಂದಿ ಅನುತ್ತೀರ್ಣರಾಗಿದ್ದಾರೆ.

ಮತ್ತಿಕೆರೆ ಬಾಲಕಿಯರ ಪ್ರೌಢಶಾಲೆಯು ಶೇ 92.78 ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದಿದೆ. ಈ ಶಾಲೆಯಲ್ಲಿ 97 ವಿದ್ಯಾರ್ಥಿಗಳಲ್ಲಿ 90 ಮಂದಿ ಉತ್ತೀರ್ಣರಾಗಿದ್ದಾರೆ. ಭೈರವೇಶ್ವರ ನಗರ ಪ್ರೌಢಶಾಲೆಯಲ್ಲಿ 262ರಲ್ಲಿ 241 ವಿದ್ಯಾರ್ಥಿಗಳು ಪಾಸಾಗಿದ್ದು (ಶೇ 91.98), ಹೇರೋಹಳ್ಳಿ ಪ್ರೌಢಶಾಲೆಯಲ್ಲಿ 233ರಲ್ಲಿ 211 ವಿದ್ಯಾರ್ಥಿಗಳು ಉತ್ತೀರ್ಣರಾಗಿ (ಶೇ 90.56) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.

ADVERTISEMENT

ಭೈರವೇಶ್ವರನಗರ ಪ್ರೌಢಶಾಲೆಯಲ್ಲಿ 19 ವಿದ್ಯಾರ್ಥಿಗಳು, ಶಕ್ತಿಗಣಪತಿ ನಗರ ಶಾಲೆಯಲ್ಲಿ 13, ಹೇರೋಹಳ್ಳಿ ಶಾಲೆಯಲ್ಲಿ 11 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ.

ಕೆ.ಜಿ. ನಗರದ ಪ್ರೌಢಶಾಲೆಯಲ್ಲಿ 10 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಉತ್ತೀರ್ಣರಾಗಿದ್ದು, ಶಾಲೆ ಕೊನೆಯ ಸ್ಥಾನ ಗಳಿಸಿದೆ. ಆಸ್ಟೀನ್‌ ಟೌನ್‌ ಶಾಲೆಯಲ್ಲಿ 38ರಲ್ಲಿ 9, ಪಿಳ್ಳಣ್ಣ ಗಾರ್ಡನ್‌ ಶಾಲೆಯಲ್ಲಿ 249ರಲ್ಲಿ 61 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನಾ ಅವರು 625ಕ್ಕೆ 619 ಅಂಕಗಳನ್ನು  (ಶೇ 99) ಪಡೆದು ಪಾಲಿಕೆ ಶಾಲೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ದಾಖಲೆ ಬರೆದಿದ್ದಾರೆ. ಲಗ್ಗೆರೆ ಪ್ರೌಢಶಾಲೆಯ ಟಿ.ಜೆ. ಯಶವಂತ್ ಅವರು 610 ಅಂಕಗಳನ್ನು (ಶೇ 97.60) ಪಡೆದಿದ್ದಾರೆ.

ಟಿ.ಜೆ. ಯಶವಂತ್ 

‘ವೈದ್ಯೆ ಆಗುವ ಗುರಿ’

ಬೆಂಗಳೂರು: ‘ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 621 ಅಂಕಗಳು ಬರುವ ನಿರೀಕ್ಷೆ ಇತ್ತು. ಆದರೆ, ಎರಡು ಅಂಕಗಳು ಕಡಿಮೆ ಬಂದಿದೆ. ನನ್ನ ಈ ಸಾಧನೆ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಖುಷಿ ಉಂಟು ಮಾಡಿದೆ...’

2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕ (ಶೇ 99) ಪಡೆದಿರುವ ಶ್ರೀರಾಂಪುರ ಬಾಲಕಿಯರ ಬಿಬಿಎಂಪಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಿ. ಚಂದನಾ ಅವರ ಮಾತುಗಳಿವು.

ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಂದೆಯ ಆರೈಕೆ ಮಾಡುವ ಜೊತೆಗೆ ಬಿಬಿಎಂಪಿ ಶಾಲೆಯ ಪಿ. ಚಂದನಾ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಅವರು ಸಂಸ್ಕೃತದಲ್ಲಿ 125, ಇಂಗ್ಲಿಷ್‌ನಲ್ಲಿ 98, ಕನ್ನಡದಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 97 ಹಾಗೂ ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾರೆ. ಚಂದನಾ ಅವರ ತಾಯಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ.

‘ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು, ಮುಂದೆ ವೈದ್ಯೆ ಆಗಬೇಕು ಎಂಬ ಗುರಿ ಹೊಂದಿದ್ದೇನೆ. ವೈದ್ಯ ವೃತ್ತಿ ಬಗ್ಗೆ ಮೊದಲಿಂದಲೂ ನನಗೆ ಅಪಾರ ಹೆಮ್ಮೆ ಇದ್ದು, ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಚಂದನಾ ತಿಳಿಸಿದರು.

‘ಚಂದನಾ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನು ಚೆನ್ನಾಗಿ ಶ್ರದ್ಧೆಯಿಂದ ಕಲಿಯುತ್ತಿದ್ದರು. ಬಿಬಿಎಂಪಿ ಶಾಲೆಗಳಲ್ಲೂ ಒಳ್ಳೆಯ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಶ್ರದ್ಧೆಯಿಂದ ಒದಬೇಕು. ಇದಕ್ಕೆ ನಾನು ಸೇರಿದಂತೆ ಅನೇಕ ಮಕ್ಕಳು ಸಾಕ್ಷಿಯಾಗಿದ್ದಾರೆ’ ಎಂದು ಹೇಳಿದರು.

ಪಿ. ಚಂದನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.