ADVERTISEMENT

ಎಸ್‌ಎಸ್‌ಎಲ್‌ಸಿ: ಸಾಧಕರಿಗೆ ಸಿಎಂ, ಡಿಸಿಎಂ ನೆರವು

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:33 IST
Last Updated 14 ಮೇ 2024, 16:33 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊಣ್ಣೂರ (ಬಲತುದಿ) ಮತ್ತು ಮೂರನೇ ಸ್ಥಾನ ಪಡೆದ ಕೆ.ಸಿ. ನವನೀತ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಮಂಗಳವಾರ ಸನ್ಮಾನಿಸಿದರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊಣ್ಣೂರ (ಬಲತುದಿ) ಮತ್ತು ಮೂರನೇ ಸ್ಥಾನ ಪಡೆದ ಕೆ.ಸಿ. ನವನೀತ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಮಂಗಳವಾರ ಸನ್ಮಾನಿಸಿದರು   

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಅಂಕಿತಾ ಕೊಣ್ಣೂರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಲಾ ₹ 5 ಲಕ್ಷ ಪ್ರೋತ್ಸಾಹಧನ ನೀಡಿದ್ದಾರೆ. ಮೂರನೇ ಸ್ಥಾನ ಪಡೆದ ಕೆ.ಸಿ. ನವನೀತ್‌ ಅವರಿಗೆ ಅನುಕ್ರಮವಾಗಿ ₹ 3 ಲಕ್ಷ ಮತ್ತು ₹ 2 ಲಕ್ಷ ನೀಡಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಅಂಕಿತಾ ಪೋಷಕರಿಗೆ ದೂರವಾಣಿ ಕರೆ ಮಾಡಿದ್ದ ಶಿವಕುಮಾರ್‌, ಮಗಳೊಂದಿಗೆ ಬೆಂಗಳೂರಿಗೆ ಬಂದು ತಮ್ಮನ್ನು ಭೇಟಿ ಮಾಡಲು ಆಮಂತ್ರಣ ಕೊಟ್ಟಿದ್ದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಮತ್ತು ಮಂಡ್ಯ ತಾಲ್ಲೂಕಿನ ತುಂಬಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನವನೀತ್‌ ಪೋಷಕರ ಜೊತೆ ಶಿವಕುಮಾರ್‌ ಅವರನ್ನು ಮಂಗಳವಾರ ಭೇಟಿಮಾಡಿದರು.

ADVERTISEMENT

ಅಂಕಿತಾಗೆ ₹ 5 ಲಕ್ಷ ಮೊತ್ತದ ಚೆಕ್‌ ನೀಡಿ ಗೌರವಿಸಿದ ಉಪ ಮುಖ್ಯಮಂತ್ರಿ, ನವನೀತ್‌ಗೂ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗೆ ₹ 2 ಲಕ್ಷ ಮೊತ್ತದ ಚೆಕ್‌ ನೀಡುವಂತೆ ತಮ್ಮ ಕಚೇರಿಯ ಸಿಬ್ಬಂದಿಗೆ ಸೂಚಿಸಿದರು.

ಮೈಸೂರು ಪ್ರವಾಸದಿಂದ ಮಂಗಳವಾರ ಸಂಜೆ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ, ಅಂಕಿತಾ ಮತ್ತು ನವನೀತ್‌ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಗೌರವಿಸಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅಂಕಿತಾಗೆ ₹ 5 ಲಕ್ಷ ಮತ್ತು ನವನೀತ್‌ಗೆ ₹ 3 ಲಕ್ಷ ಮೊತ್ತದ ನೆರವನ್ನು ಘೋಷಿಸಿದರು.

ವಿದ್ಯಾರ್ಥಿಗಳನ್ನು ಅಭಿನಂದಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕನಸಿನ ಯೋಜನೆ. 1994ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾಗ ಈ ಶಾಲೆಗಳಿಗೆ ಚಾಲನೆ ನೀಡಿದ್ದೆ’ ಎಂದು ನೆನಪಿಸಿಕೊಂಡರು.

ಸಿ.ಎಂ ಸಾಧನೆಯೇ ಪ್ರೇರಣೆ: ಗೌರವ ಸ್ವೀಕರಿಸಿದ ಅಂಕಿತಾ, ‘ಸಾರ್‌ ನಿಮ್ಮ ಸಾಧನೆಯೇ ನನ್ನ ಈ ಯಶಸ್ಸಿಗೆ ಪ್ರೇರಣೆ. ನಿಮ್ಮ ಸಾಧನೆ ನನಗೆ ಪ್ರೋತ್ಸಾಹ ನೀಡಿತು’ ಎಂದು ಮುಖ್ಯಮಂತ್ರಿ ಅವರನ್ನುದ್ದೇಶಿಸಿ ಹೇಳಿದರು.

ಐಎಎಸ್‌ ಅಧಿಕಾರಿ ಆಗಬೇಕೆಂಬ ಆಸೆ ಹೊಂದಿರುವುದಾಗಿ ಅಂಕಿತಾ ಹೇಳಿದರು. ಪಿಯುಸಿ ಪ್ರವೇಶಾತಿ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶಾಲೆಗಳಿಗೂ ಅನುದಾನ ಘೋಷಣೆ ಅಂಕಿತಾ ಕೊಣ್ಣೂರ ವ್ಯಾಸಂಗ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಭಿವೃದ್ಧಿಗೆ ₹ 1 ಕೋಟಿ ಮತ್ತು ಕೆ.ಸಿ. ನವನೀತ್‌ ವ್ಯಾಸಂಗ ಮಾಡಿರುವ ಮಂಡ್ಯ ತಾಲ್ಲೂಕಿನ ತುಂಬಿಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಭಿವೃದ್ಧಿಗೆ ₹ 50 ಲಕ್ಷ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.