ADVERTISEMENT

25.67 ಲಕ್ಷ ರೈತರಿಗೆ ₹17,260 ಕೋಟಿ ಬೆಳೆ ಸಾಲ ವಿತರಣೆ: ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:40 IST
Last Updated 6 ಏಪ್ರಿಲ್ 2021, 15:40 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌    

ಬೆಂಗಳೂರು: ರಾಜ್ಯದ 25.67 ಲಕ್ಷ ರೈತರಿಗೆ ₹ 17,260.48 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು, ಸರ್ಕಾರ ನಿಗದಿ ಮಾಡಿದ್ದ ಗುರಿಯನ್ನು ಮೀರಿ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಒಟ್ಟು 24.36 ಲಕ್ಷ ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಬೆಳೆ ಸಾಲವಾಗಿ ₹ 15,300 ಕೋಟಿ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಅದನ್ನು ಏಪ್ರಿಲ್‌ 6 ರಂದೇ ಗುರಿಯನ್ನು ಮೀರಲಾಗಿದೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

ಸರ್ಕಾರದ ಇಚ್ಛಾಶಕ್ತಿಯ ಪರಿಣಾಮ 1.31 ಲಕ್ಷಕ್ಕೂ ಹೆಚ್ಚು ರೈತರಿಗೆ ಸಾಲದ ಪ್ರಯೋಜನ ಸಿಕ್ಕಿದೆ. ಇದರಿಂದ ₹ 1960.48 ಕೋಟಿ ಸಾಲವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದೊಂದು ಅಭೂತಪೂರ್ವ ಸಾಧನೆ ಎಂದು ಸೋಮಶೇಖರ್‌ ಹೇಳಿದರು.

ADVERTISEMENT

ಎಲ್ಲ ರೈತ ಫಲಾನುಭವಿಗಳಿಗೂ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್‌ಗಳ ಕಡೆಗೆ ಎಂಬ ಚಿಂತನೆಯಡಿ ಪ್ರತಿಯೊಂದು ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಡಿಸಿಸಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ಅಪೆಕ್ಸ್‌ ಬ್ಯಾಂಕ್‌, 21 ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಿಕೆಯ ಬಗ್ಗೆ ಕಳೆದ ಒಂದು ವರ್ಷದಿಂದ ಪ್ರತಿ ದಿನ ಸಂಜೆ 6 ಗಂಟೆಗೆ ರೈತರಿಗೆ ಸಾಲ ನೀಡಿಕೆ ಬಗ್ಗೆ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಈ ವೇಳೆ, ರೈತರಿಗೆ ಎಷ್ಟು ಸಾಲ ಕೊಡಲಾಗುತ್ತಿದೆ. ಹೊಸ ರೈತರಿಗೆ ಎಷ್ಟು ಸಾಲವನ್ನು ವಿತರಣೆ ಮಾಡಲಾಗಿದೆ. ಗುರಿ ಮುಟ್ಟಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿತ್ತು ಎಂದರು.

ಆರ್ಥಿಕ ಸ್ಪಂದನ ಯೋಜನೆಯಡಿ ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಅಪೆಕ್ಸ್‌ ಬ್ಯಾಂಕ್‌ಗಳು ಹಾಗೂ ನಬಾರ್ಡ್‌ನಿಂದ ಉತ್ತಮ ಸಾಧನೆ ತೋರಿ, ಶೇ 96 ರಷ್ಟು ಗುರಿ ಮುಟ್ಟಲಾಗಿದೆ. ಅಂದರೆ 2020–21 ನೇ ಸಾಲಿಗೆ ₹ 39,072 ಕೋಟಿ ಸಾಲ ವಿತರಣೆ ಗುರಿ ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ₹ 37,366 ಕೋಡಿ ಸಾಲ ವಿತರಿಸಲಾಗಿದೆ. ಈ ವಿಷಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ಮುಂದಿದೆ ಎಂದು ಸೋಮಶೇಖರ್‌ ಹೇಳಿದರು.

ಆತ್ಮನಿರ್ಭರ ಯೋಜನೆಯಡಿ ₹ 2 ಕೋಟಿ ಸಾಲ
ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ ₹ 2 ಕೋಟಿಯಂತೆ ಸಾಲ ನೀಡಲು ಅವಕಾಶವಿದ್ದು, ಈ ಪೈಕಿ 1,549 ಸಹಕಾರ ಸಂಘಗಳನ್ನು ಗುರುತಿಸಿ 949 ಪ್ಯಾಕ್ಸ್‌ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್‌ಗಳಿಗೆ ₹ 198.96 ಕೋಟಿ ಮಂಜೂರಾಗಿದೆ ಎಂದು ಸೋಮಶೇಖರ್‌ ತಿಳಿಸಿದರು.

ಗುರಿ ಮುಟ್ಟದ ಜಿಲ್ಲಾ ಬ್ಯಾಂಕ್‌ಗಳಿಗೆ ನೋಡಲ್‌ ಅಧಿಕಾರಿಗಳು ವಾರಕ್ಕೊಮ್ಮೆ ಭೇಟಿ ನೀಡಿ ಪ್ರಗತಿ ಸಾಧಿಸಬೇಕೆಂಬ ಸೂಚನೆ ನೀಡಲಾಗಿದೆ ಎಂದು ಸಚಿವ ಸೋಮಶೇಖರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.