ADVERTISEMENT

ಅಧಿಕಾರಿಗಳ ವರ್ಗಾವಣೆ | ಸರ್ಕಾರ– ಬಿಬಿಎಂಪಿ ಶೀತಲ ಸಮರ

ಎರವಲು ಸೇವೆಯಲ್ಲಿದ್ದ ಅಧಿಕಾರಿಗಳು ಮಾತೃ ಇಲಾಖೆಗೆ

ಮಂಜುನಾಥ್ ಹೆಬ್ಬಾರ್‌
Published 31 ಮೇ 2020, 21:19 IST
Last Updated 31 ಮೇ 2020, 21:19 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಹಾಗೂ ಎರವಲು ಸೇವೆ ವಿಚಾರದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಶೀತಲ ಸಮರ ಆರಂಭವಾಗಿದೆ.

ಈ ಹಿಂದೆ ಬಿಬಿಎಂಪಿಯ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರ ಆಯುಕ್ತರಿಗೆ ಮಾತ್ರ ಇತ್ತು. ಕರ್ನಾಟಕ ಸರ್ಕಾರಿ ಸೇವಾ ನಿಯಮ, ಹುದ್ದೆ ವರ್ಗೀಕರಣ ಹಾಗೂನಡತೆ ನಿಯಮಗಳು ಬಿಬಿಎಂಪಿಗೆ ಅನ್ವಯವಾಗುತ್ತಿರಲಿಲ್ಲ. ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ– 2020 ಮಾರ್ಚ್‌ನಲ್ಲಿ ಜಾರಿಗೆ ಬಂದ ಬಳಿಕ ಪಾಲಿಕೆ ಆಯುಕ್ತರ ಕೆಲವೊಂದು ಅಧಿಕಾರಗಳಿಗೆ ಕತ್ತರಿ ಹಾಕಲಾಗಿದೆ. ಆದರೂಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಹಿಂದಿನಂತೆಯೇ ಅಧಿಕಾರವನ್ನು ಚಲಾಯಿಸುತ್ತಿರುವುದು ನಗರಾಭಿವೃದ್ಧಿ ಇಲಾಖೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಬಿಎಂಪಿಯ ವೃಂದ ಮತ್ತು ನೇಮಕಾತಿಯ ಹೊಸ ನಿಯಮದ ಪ್ರಕಾರ, ‘ಎ’ ಗುಂಪಿನ ಅಧಿಕಾರಿಗಳನ್ನು ಹಾಗೂ ₹74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳನ್ನು ಸರ್ಕಾರವೇ (ನಗರಾಭಿವೃದ್ಧಿ ಇಲಾಖೆ) ನೇಮಿಸಬೇಕಿದೆ. ‘ಬಿ’ ಮತ್ತು ‘ಸಿ’ ಗುಂಪಿನ ಅಧಿಕಾರಿಗಳನ್ನು ಹಾಗೂ ‘ಡಿ’ ಗುಂಪಿನ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಬಹುದು.

ADVERTISEMENT

ಅಧಿಕಾರ ಮೊಟಕುಗೊಂಡ ಬಳಿಕವೂ ಅನಿಲ್‌ ಕುಮಾರ್‌ ಅವರು ‍ಪಾಲಿಕೆಯಲ್ಲಿ ಎರವಲು ಸೇವೆಯಲ್ಲಿದ್ದ ಹಲವು ಅಧಿಕಾರಿಗಳನ್ನು ನೇರವಾಗಿ ಮಾತೃ ಇಲಾಖೆಗೆ (ಲೋಕೋಪಯೋಗಿ ಇಲಾಖೆ, ಸಹಕಾರ) ಕಳುಹಿಸಿದ್ದರು.

‘ಅನ್ಯ ಇಲಾಖೆಗಳ ಅಧಿಕಾರಿಗಳನ್ನು ಎರವಲು ಸೇವೆ ಮೂಲಕ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ನಿಯೋಜಿಸುತ್ತದೆ. ಇಲಾಖೆಯ ಮೂಲಕವೇ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಬೇಕು. ಆದರೂ, ಆಯುಕ್ತರು ಹಲವು ಅಧಿಕಾರಿಗಳನ್ನು ನೇರವಾಗಿ ಮಾತೃ ಇಲಾಖೆಗೆ ಕಳುಹಿಸಿರುವುದು ನಿಯಮ ಬಾಹಿರ’ ಎಂದು ಆಕ್ಷೇಪಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌
ಸಿಂಗ್‌ ಅವರು ಆಯುಕ್ತರಿಗೆ ಮೇ 19ರಂದು ಪತ್ರ ಬರೆದಿದ್ದರು. ‘ಗ್ರೂಪ್‌–ಎ ವೃಂದದ ಅಧಿಕಾರಿಗಳ ನೇಮಕಾತಿ ಪ್ರಾಧಿಕಾರ ಸರ್ಕಾರವೇ ಆಗಿದ್ದು, ಬಡ್ತಿ, ಸ್ಥಳ ನಿಯುಕ್ತಿ, ವರ್ಗಾವಣೆ, ಶಿಸ್ತುಕ್ರಮವನ್ನು ಸರ್ಕಾರವೇ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಈ
ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದೂ ಅವರು ತಾಕೀತು ಮಾಡಿದ್ದರು.

ಇಷ್ಟೆಲ್ಲ ಆದ ಬಳಿಕವೂ, ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರನ್ನು ರಸ್ತೆ ಮೂಲಸೌಕರ್ಯ/ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಗೆ ಆಯುಕ್ತರು ಶುಕ್ರವಾರ ವರ್ಗಾವಣೆ ಮಾಡಿದ್ದಾರೆ. ಅವರಿಗೆ ರಾಜಕಾಲುವೆ ವಿಭಾಗದ ಹೆಚ್ಚುವರಿ ಹೊಣೆಯನ್ನೂ ಮುಂದುವರಿಸಲಾಗಿದೆ. ಮುಖ್ಯ ಎಂಜಿನಿಯರ್‌ ಎ.ಬಿ.ದೊಡ್ಡಯ್ಯ ಅವರನ್ನು ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಆಗಿ ವರ್ಗ ಮಾಡಲಾಗಿದೆ.

‘ಈ ಹಿಂದೆ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದ ಎಲ್ಲ ಅಧಿಕಾರ ಪಾಲಿಕೆಯಲ್ಲೇ ಕೇಂದ್ರಿಕೃತವಾಗಿತ್ತು. ಜನಪ್ರತಿನಿಧಿಗಳು ಒತ್ತಡ ತಂದು ತಮಗೆ ಬೇಕಾದವರಿಗೆ ಬಡ್ತಿ ಕೊಡಿಸುತ್ತಿದ್ದರು. ಮೀಸಲಾತಿಯ ಆಶಯಗಳನ್ನೂ ಗಾಳಿಗೆ ತೂರಲಾಗುತ್ತಿತ್ತು. ಹೊಸ ನಿಯಮ ಜಾರಿಗೆ ಬಂದ ಬಳಿಕವೂ ಈ ಚಾಳಿ ಮುಂದುವರಿದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನಾಲ್ಕು ಬಾರಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆಗೆ ಆಯುಕ್ತರು ಲಭ್ಯರಾಗಲಿಲ್ಲ.

ಆಗ ವರ್ಗ, ಈಗ ಅಮಾನತು
ಭಾರಿ ಮಳೆ ವೇಳೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಕಾರಣಕ್ಕೆ ಶಿವಾಜಿನಗರದ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಂ.ವಾಸು ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಬಿ.ತಾರಾನಾಥ್‌ ಅವರನ್ನು ಸೇವೆಯಿಂದ ಅಮಾನತು ಮಾಡಿ ಅನಿಲ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಹೆಬ್ಬಾಳದ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಕೆ.ಎಂ.ವಾಸು ಅವರನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಪತ್ರ ಆಧಾರದಲ್ಲಿ ಅನಿಲ್‌ ಕುಮಾರ್ 2019ರ ಅಕ್ಟೋಬರ್‌ನಲ್ಲಿ ವರ್ಗಾಯಿಸಿದ್ದರು. ಇದನ್ನು ಪ್ರಶ್ನಿಸಿ ವಾಸು ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಸ್ವಾಯತ್ತ ಸಂಸ್ಥೆ ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಮೂಗು ತೂರಿಸಬಾರದು’ ಎಂದು ಹೇಳಿದ್ದ ಹೈಕೋರ್ಟ್, ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.