ADVERTISEMENT

ರಾಜ್ಯ ಸರ್ಕಾರದಿಂದ ಗುಳೆ ಗ್ಯಾರಂಟಿ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 16:08 IST
Last Updated 7 ಜನವರಿ 2024, 16:08 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಬರ ಮತ್ತು ಸಾಲಬಾಧೆಯಿಂದ ಕಂಗೆಟ್ಟಿರುವ ರೈತರಿಗೆ ಸಕಾಲಕ್ಕೆ ನೆರವು ನೀಡದ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು, ಗುಳೆ ಗ್ಯಾರಂಟಿಯ ಕೊಡುಗೆ ಕೊಟ್ಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದ್ದಾರೆ.

‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ‘ಗುಳೆ: ಗ್ರಾಮಗಳು ಖಾಲಿ, ಖಾಲಿ...’ ಶೀರ್ಷಿಕೆಯಡಿ ಪ್ರಕಟವಾದ ಒಳನೋಟ ವಿಶೇಷ ವರದಿಯನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿರುವ ಅವರು, ‘ಉತ್ತರ ಕರ್ನಾಟಕದ ರೈತರು ಜೀವ ಉಳಿಸಿಕೊಳ್ಳಲು ಊರು ಬಿಡಬೇಕಾದ ಶೋಚನೀಯ ಸ್ಥಿತಿಯನ್ನು ಕಾಂಗ್ರೆಸ್‌ ಸರ್ಕಾರ ತಂದಿಟ್ಟಿದೆ’ ಎಂದು ಟೀಕಿಸಿದ್ದಾರೆ.

ಬಣ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್‌ ಸರ್ಕಾರದ ಮಂತ್ರಿಗಳು ಮತ್ತು ಶಾಸಕರು, ಎಷ್ಟು ಮಂದಿ ಉಪ ಮುಖ್ಯಮಂತ್ರಿಗಳು ಇರಬೇಕು ಎನ್ನುವುದನ್ನು ಲೆಕ್ಕ ಹಾಕುವ ಬದಲಿಗೆ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ಕೊಡುವ ಬಗ್ಗೆ ಯೋಚಿಸಬೇಕಿತ್ತು. ಆಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

ADVERTISEMENT

‘ಐದು ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ, ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಇದ್ದ ಉತ್ಸಾಹ ರಾಜ್ಯದ ರೈತರು, ಕೃಷಿ ಕಾರ್ಮಿಕರಿಗೆ ಸಹಾಯ ಮಾಡುವ ವಿಷಯದಲ್ಲಿ ಇದ್ದಿದ್ದರೆ ಕೃಷಿ ಕಾರ್ಮಿಕರು ಮನೆ ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮಲ್ಲಿ ಮಾನವೀಯತೆ ಇದ್ದರೆ ಕೃಷಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರ ಮೇಲೆ ಕಾಳಜಿ ಇದ್ದರೆ ಜನರು ಗುಳೆ ಹೋಗುವುದನ್ನು ತಪ್ಪಿಸಿ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಬೇಡಿ. ರೈತರ ನೆರವಿಗೆ ಬರಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಆಗ್ರಹಿಸಿದ್ದಾರೆ.

ರಾಮಭಕ್ತಿಗೆ ಶರಣಾದ ಸರ್ಕಾರ: ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರತಿಷ್ಠಾಪನೆ ನಡೆಯುವ ಜನವರಿ 22ರಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಹೊರಡಿಸಿರುವ ಆದೇಶವನ್ನೂ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಅಶೋಕ, ‘ರಾಮಭಕ್ತಿಗೆ ಸರ್ಕಾರ ಶರಣಾಗಿದೆ. ಇದು ರಾಮಭಕ್ತರಿಗೆ, ಹಿಂದುತ್ವ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ. ತುಷ್ಟೀಕರಣದ ವಿರುದ್ಧ ಹಿಂದುತ್ವದ ಜಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.