ADVERTISEMENT

ಮೋದಿ ವಾಸ್ತವ್ಯ; ₹80 ಲಕ್ಷ ಬಿಲ್ ಬಾಕಿ!: ಸರ್ಕಾರವೇ ವೆಚ್ಚ ಭರಿಸಲಿದೆ ಎಂದ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 27 ಮೇ 2024, 14:26 IST
Last Updated 27 ಮೇ 2024, 14:26 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ‘ಹುಲಿ ಯೋಜನೆಗೆ 50 ವರ್ಷ ತುಂಬಿದ ಪ್ರಯುಕ್ತ 2023ರ ಏಪ್ರಿಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯದ ₹ 80 ಲಕ್ಷ ಬಿಲ್‌ ಅನ್ನು ರಾಜ್ಯ ಸರ್ಕಾರವೇ ಭರಿಸಲಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಪ್ರಧಾನಿ ಆತಿಥ್ಯದ ಬಿಲ್‌ನ ಬಾಕಿ ಮೊತ್ತ ಪಾವತಿಸುವಂತೆ ಮೈಸೂರಿನ ರಾಡಿಸನ್‌ ಬ್ಲೂ ಹೋಟೆಲ್‌ ಆಡಳಿತವು ನೋಟಿಸ್‌ ನೀಡಿರುವ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ರಾಜ್ಯ ಸರ್ಕಾರವೇ ಆತಿಥ್ಯ ವೆಚ್ಚ ಭರಿಸುತ್ತದೆ. ಅದೇ ಮಾದರಿಯಲ್ಲಿ ಈ ವೆಚ್ಚವನ್ನೂ ಪಾವತಿಸಲಾಗುವುದು’ ಎಂದರು.

ವಿಧಾನಸಭಾ ಚುನಾವಣೆ ನಡೆಯುತ್ತಿದ್ದ ಸಮಯದಲ್ಲೇ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಆಗ ರಾಜ್ಯ ಸರ್ಕಾರ ಕಾರ್ಯಕ್ರಮದ ಆಯೋಜನೆಯಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ಈ ಕಾರಣದಿಂದ ಗೊಂದಲ ಉಂಟಾಗಿದೆ. ಗೊಂದಲ ನಿವಾರಣೆಗಾಗಿ ಹೋಟೆಲ್‌ ಬಿಲ್‌ ಪಾವತಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್‌ಟಿಸಿಎ) ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಒಟ್ಟು ₹6.33 ಕೋಟಿ ವೆಚ್ಚವಾಗಿತ್ತು. ಎನ್‌ಟಿಸಿಎ ರಾಜ್ಯಕ್ಕೆ ₹3 ಕೋಟಿ ಪಾವತಿಸಿದೆ. ಉಳಿದ ಹಣ ಪಾವತಿಸಿಲ್ಲ ಎಂದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.