ADVERTISEMENT

ಜಲಮಂಡಳಿ ವಿರುದ್ಧ ಕೋರ್ಟ್‌ ಮೊರೆ ಹೋಗಲು ಸೂಚನೆ ನೀಡಿದ ರಾಜ್ಯ ಮಾನವ ಹಕ್ಕು ಆಯೋಗ

ರಾಜ್ಯ ಮಾನವ ಹಕ್ಕು ಆಯೋಗ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ದೂರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 16:17 IST
Last Updated 20 ಫೆಬ್ರುವರಿ 2024, 16:17 IST
ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿರುವ ಬಿಲ್‌ ಬೋರ್ಡ್‌ಗಳು.
ಸಂಚಾರ ಪೊಲೀಸರು ಜಪ್ತಿ ಮಾಡಿಕೊಂಡಿರುವ ಬಿಲ್‌ ಬೋರ್ಡ್‌ಗಳು.   

ಬೆಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ದೂರನ್ನು ಮುಕ್ತಾಯಗೊಳಿಸಿದ್ದು, ಪರಿಹಾರಕ್ಕಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ(ಬಿಡಬ್ಯುಎಸ್‌ಎಸ್‌ಬಿ) ವಿರುದ್ಧ ನ್ಯಾಯಾಲಯದ ಮೊರೆ ಹೋಗುವಂತೆ ಆಯೋಗವು ಸೂಚಿಸಿದೆ.

ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಅನುಮತಿ ಪಡೆಯದೇ ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿ ನಡೆಸಿತ್ತು. ಕಾಮಗಾರಿ ನಡೆಸಿದ ಮೇಲೆ ರಸ್ತೆಯನ್ನು ಸರಿಪಡಿಸದೆ ಹಾಗೆಯೇ ಬಿಡಲಾಗಿತ್ತು. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿತ್ತು. ಅದೇ ಮಾರ್ಗದಲ್ಲಿ ರಾತ್ರಿ ವೇಳೆ ವಿಶೇಷ ಸ್ಕೂಟರ್‌ನಲ್ಲಿ (ಮೂರು ಗಾಲಿ ಚಕ್ರ)ತೆರಳುತ್ತಿದ್ದ ವೃದ್ಧರೊಬ್ಬರು ಆಯತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಸಂಬಂಧ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿತ್ತು.

ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಯಾವುದೇ ಅನುಮತಿ ಪಡೆಯದೆ ರಸ್ತೆಯ ಮಧ್ಯಭಾಗದಲ್ಲಿ ಕಾಮಗಾರಿ ನಡೆಸಿ ರಸ್ತೆಯನ್ನು ಸರಿಪಡಿಸದೆ ಅಪಘಾತಕ್ಕೆ ಕಾರಣರಾದ ಜಲಮಂಡಳಿ ಅಧಿಕಾರಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ ಆಗಿತ್ತು.

ADVERTISEMENT

‘ಕಾಮಗಾರಿ ನಡೆಸಿದ ನಂತರ ರಸ್ತೆಯನ್ನು ಮರು ನಿರ್ಮಾಣ ಮಾಡಿರಲಿಲ್ಲ. ಅವೈಜ್ಞಾನಿಕ ಕಾಮಗಾರಿ ನಡೆಸಿದವರನ್ನೇ ಹೊಣೆಗಾರರನ್ನಾಗಿ ಮಾಡುವುದಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ’ ಎಂದು ಸಂಚಾರ (ಪಶ್ಚಿಮ) ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ ತಿಳಿಸಿದ್ಧಾರೆ.

200 ಬಿಲ್‌ಬೋರ್ಡ್‌ ಜಪ್ತಿ ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ 200ಕ್ಕೂ ಹೆಚ್ಚು ಬಿಲ್‌ಬೋರ್ಡ್‌ಗಳನ್ನು ಸಂಚಾರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಮಳಿಗೆಗಳ ಎದುರಿನ ಪಾದಚಾರಿ ಮಾರ್ಗದಲ್ಲಿ ಬಿಲ್ ಬೋರ್ಡ್‌ ಇಡಲಾಗಿತ್ತು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿತ್ತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು. ಪದೇ ಪದೇ ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಕಲಂ 283 ಐಪಿಸಿ ಅಡಿಯಲ್ಲಿ ಒಟ್ಟು 23 ಪ್ರಕರಣ ಕೆಪಿ ಆ್ಯಕ್ಟ್‌ ಅಡಿ ಒಟ್ಟು 5 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ವಿಲೇ–ಪ್ರಕರಣ ದಾಖಲು ಜಯನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಸೌತ್‌ ಎಂಡ್‌ ಸರ್ಕಲ್‌ ಬಳಿಯ ಬೈಕ್‌ನಲ್ಲಿ ವಿಲೇ ನಡೆಸುತ್ತಿದ್ದ ಸವಾರ ಜಮೀರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುವಂತೆ ಸವಾರ ಸ್ಕೂಟರ್‌ನಲ್ಲಿ ವಿಲೇ ನಡೆಸುತ್ತಿದ್ದ. ಸ್ಕೂಟರ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.