ಬೆಂಗಳೂರು: ಶಾಂತ್ ಎ. ತಿಮ್ಮಯ್ಯ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಕಾನೂನು ಉಲ್ಲಂಘಿಸಿ ಅಧ್ಯಕ್ಷರ ಹುದ್ದೆಗೆ ಮೂರು ವರ್ಷಗಳ ಪೂರ್ಣಾವಧಿಗೆ ನೇಮಿಸುವ ಮೂಲಕ ಈ ಹಿಂದಿನ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಜಲ (ಮಾಲಿನ್ಯ ನಿಯಂತ್ರಣ) ಕಾಯ್ದೆ–1972ರ ಪ್ರಕಾರ, ‘ಹಾಲಿ ಅಧ್ಯಕ್ಷರ ಅಧಿಕಾರದ ಅವಧಿಯಲ್ಲಿ ಮಧ್ಯಂತರ ನೇಮಕಾತಿಯ ಸಂದರ್ಭ ಉದ್ಭವಿಸಿದಲ್ಲಿ ಮೂರು ವರ್ಷಗಳಲ್ಲಿ ಬಾಕಿ ಉಳಿದಿರುವ ಅವಧಿಗೆ ಸೀಮಿತವಾಗಿ ಹೊಸ ಅಧ್ಯಕ್ಷರನ್ನು ನೇಮಿಸಬೇಕು’. ಈ ಸೆಕ್ಷನ್ ಅನ್ನು ಉಲ್ಲಂಘಿಸಿ ಶಾಂತ್ ತಿಮ್ಮಯ್ಯ ಅವರನ್ನು ಪೂರ್ಣ ಅವಧಿಗೆ ನೇಮಕ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳಿಂದ ಬಹಿರಂಗಗೊಂಡಿದೆ.
ಮಂಡಳಿಯ ಅಧ್ಯಕ್ಷರ ಹುದ್ದೆಗೆ ನಿವೃತ್ತ ಐಎಫ್‌ಎಸ್ ಅಧಿಕಾರಿ ಎನ್. ಜಯರಾಂ ಅವರನ್ನು ನೇಮಿಸುವುದರೊಂದಿಗೆ 2019ರ ಮಾರ್ಚ್ 5ರಂದು ಹೊಸ ಅವಧಿ ಆರಂಭವಾಗಿತ್ತು. 2022ರ ಮಾರ್ಚ್ 4ಕ್ಕೆ ಕೊನೆಗೊಳ್ಳಬೇಕಿತ್ತು. ಮೂರು ತಿಂಗಳಲ್ಲೇ ಜಯರಾಂ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ಖಾಲಿಯಾಗಿತ್ತು. ನಂತರದಲ್ಲಿ ಐದು ಮಂದಿ ಈ ಹುದ್ದೆಗೆ ಆಕಾಂಕ್ಷಿಗಳಾಗಿದ್ದರು. ಆಯ್ಕೆಯಾದ ಸುಧೀಂದ್ರ ರಾವ್ ಕೂಡ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದರು. ನಂತರವೂ ಹೊಸ ನೇಮಕಾತಿ ಆರು ತಿಂಗಳಷ್ಟು ವಿಳಂಬವಾಗಿತ್ತು.
ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆ ಭರ್ತಿಗೆ ‘ಸಾಮಾನ್ಯ ನೇಮಕಾತಿ’ ಎಂಬ ಶೀರ್ಷಿಕೆಯಡಿ ಜಾಹೀರಾತು ಪ್ರಕಟಿಸಲಾಗಿತ್ತು. ಆದರೆ, ‘ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಶಾಂತ್ ತಿಮ್ಮಯ್ಯ ಅವರನ್ನು ಮೂರು ವರ್ಷಗಳ ಪೂರ್ಣ ಅವಧಿಗೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುವುದು ಜಲ (ಮಾಲಿನ್ಯ ನಿಯಂತ್ರಣ) ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ನಡಾವಳಿಯಲ್ಲಿ ಉಲ್ಲೇಖಿಸಿದ್ದರು.
ಇಲಾಖೆಯ ವಿಷಯ ಶಾಖಾಧಿಕಾರಿಗಳಿಂದ ಅಧೀನ ಕಾರ್ಯದರ್ಶಿಗಳವರೆಗೆ ವಿವಿಧ ಅಧಿಕಾರಿಗಳು ಶಾಂತ್ ತಿಮ್ಮಯ್ಯ ಅವರನ್ನು ಮೂರು ವರ್ಷಗಳ ಪೂರ್ಣ ಅವಧಿಗೆ ನೇಮಿಸಲು ಸಾಧ್ಯವಿಲ್ಲ ಎಂದು ಹಲವು ಬಾರಿ ಕಡತದಲ್ಲಿ ದಾಖಲಿಸಿದ್ದರು. ಕಡತವನ್ನು ಹಿಂದಿನ ಪರಿಸರ ಸಚಿವ ಆನಂದ್ ಸಿಂಗ್ ಅವರಿಗೆ ಸಲ್ಲಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ನಿಲುವು ಬದಲಿಸಿತ್ತು.
‘ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನು ಪೂರ್ಣಾವಧಿಗೆ ನೇಮಕ ಮಾಡುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು. ಈ ವಿಷಯವನ್ನು ಸೂಕ್ತ ತೀರ್ಮಾನಕ್ಕಾಗಿ ಸಕ್ಷಮ ಪ್ರಾಧಿಕಾರದ ಮುಂದೆ ಮಂಡಿಸಲಾಗಿದೆ’ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ಕಡತವೊಂದನ್ನು ಆನಂದ್ ಸಿಂಗ್ ಅವರಿಗೆ ಮಂಡಿಸಿದ್ದರು.
‘ಎಲ್ಲ 47 ಪ್ಯಾರಾಗಳನ್ನೂ ಪರಿಶೀಲಿಸಿದ್ದೇನೆ ಮತ್ತು ಶಾಂತ್ ತಿಮ್ಮಯ್ಯ ಅವರನ್ನು ಮೂರು ವರ್ಷಗಳ ಪೂರ್ಣಾವಧಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಿಸಲು ನಿರ್ಧರಿಸಿದ್ದೇನೆ’ ಎಂದು ಸಕ್ಷಮ ಪ್ರಾಧಿಕಾರಿಯಾಗಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.
‘ಶಾಂತ್ ತಿಮ್ಮಯ್ಯ ಅವರನ್ನು ಪೂರ್ಣಾವಧಿಗೆ ನೇಮಕ ಮಾಡಲು ಕಾಯ್ದೆಯಲ್ಲಿ ಅವಕಾಶ ಇರಲಿಲ್ಲ. ಅವರು ಒಂದು ವರ್ಷ ಅಕ್ರಮವಾಗಿ ವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆದಿದ್ದಾರೆ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಿರುವ ಆಕಾಶ್ ಜೆ. ಹೇಳಿದ್ದಾರೆ.
ತನಿಖೆಗೆ ಮುಖ್ಯಮಂತ್ರಿ ಆದೇಶ
ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ₹17 ಕೋಟಿಯನ್ನು ಕಾನೂನು ಉಲ್ಲಂಘಿಸಿ ವೆಚ್ಚ ಮಾಡಲಾಗಿದೆ ಎಂಬ ಆರೋಪದ ಕುರಿತು ಮಂಡಳಿ ಅಧ್ಯಕ್ಷ ಶಾಂತ್ ತಿಮ್ಮಯ್ಯ ವಿರುದ್ಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಆದೇಶಿಸಿದ್ದಾರೆ.
₹17 ಕೋಟಿ ಬಳಕೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಆರ್. ರಮೇಶ್ ದೂರು ನೀಡಿದ್ದರು. ಅದನ್ನು ಆಧರಿಸಿ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ, ಈ ಕಾರ್ಯಕ್ರಮದ ಬಿಲ್ ಪಾವತಿ ತಡೆ ಹಿಡಿಯುವಂತೆ ಸೂಚಿಸಿದ್ದಾರೆ.
ಬೀದರ್‌ನಲ್ಲಿ ಪರಿಸರ ಮಾಲಿನ್ಯ ಕುರಿತು ತಪಾಸಣೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಆರೋಪದ ಮೇಲೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಕೂಡ ಶಾಂತ್ ತಿಮ್ಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.