ADVERTISEMENT

ಪಿ.ಜಿಗಳಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಲ್ಯಾಪ್‌ಟಾಪ್‌ಗೆ ಕನ್ನ: ಮೂವರ ಬಂಧನ

ಪಿ.ಜಿಗಳಿಗೆ ಹೋಗುತ್ತಿದ್ದ ಆರೋಪಿಗಳು, ಆಂಧ್ರಪ್ರದೇಶಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 14:48 IST
Last Updated 19 ಡಿಸೆಂಬರ್ 2023, 14:48 IST
 ಬಂಧನ
ಬಂಧನ   

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ಗಳಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯುವರಾಜ್‌, ಪ್ರಭು, ಸೆಲ್ವರಾಜು ಬಂಧಿತರು.

ಬಂಧಿತರಿಂದ 25 ಲ್ಯಾಪ್‌ಟಾಪ್‌ಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ADVERTISEMENT

‘ಇಬ್ಬರು ಆರೋಪಿಗಳು ಕೆ.ಆರ್.ಪುರಂನಲ್ಲಿ ಬಾಡಿಗೆಗೆ ರೂಂ ಪಡೆದು ನೆಲೆಸಿದ್ದರು. ವಿದ್ಯಾರ್ಥಿಗಳ ಸೋಗಿನಲ್ಲಿ ಪಿ.ಜಿಗಳಿಗೆ ತೆರಳುತ್ತಿದ್ದರು. ಪಿ.ಜಿಗಳಲ್ಲಿ ಸ್ನೇಹಿತರಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ನಂತರ, ಯಾವ ಕೊಠಡಿಯಲ್ಲಿ ಲ್ಯಾಪ್‌ಟಾಪ್‌ ಇದೆ ಎಂಬುದನ್ನು ಪತ್ತೆ ಮಾಡಿ ಕಳವು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶಕ್ಕೆ ರವಾನೆ: ಹಗಲು ವೇಳೆಯೇ ಪಿ.ಜಿಗಳಿಗೆ ಹೋಗುತ್ತಿದ್ದ ಆರೋಪಿಗಳು ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದರು. ಲ್ಯಾಪ್‌ಟಾಪ್‌ ಕಳವು ಮಾಡಿದ ಕೆಲವೇ ತಾಸಿನಲ್ಲಿ ಬಸ್‌ನಲ್ಲಿ ಆಂಧ್ರಪ್ರದೇಶಕ್ಕೆ ರವಾನೆ ಮಾಡುತ್ತಿದ್ದರು. ಆಂಧ್ರಪ್ರದೇಶದಲ್ಲಿದ್ದ ಸೆಲ್ವರಾಜ್‌ ಲ್ಯಾಪ್‌ಟಾಪ್‌ಗಳನ್ನು ಬಸ್‌ನಿಂದ ಕೊಂಡೊಯ್ದು ತಲಾ ₹25 ಸಾವಿರದಂತೆ ಮಾರಾಟ ಮಾಡುತ್ತಿದ್ದ. ಈ ತಂಡ ನಗರದಲ್ಲಿ ನಿತ್ಯ ನಾಲ್ಕರಿಂದ ಐದು ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿತ್ತು ಎಂದು ಹೇಳಿದರು.

ಇನ್ನೂ ಹಲವರ ಶಂಕೆ: ‘ಪ್ರಕರಣ ದಾಖಲಿಸಿಕೊಂಡ ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂವರ ಜತೆಗೆ ಇನ್ನೂ ಕೆಲವರು ಭಾಗಿಯಾಗಿದ್ದು ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.