ADVERTISEMENT

ಉಕ್ಕಿನ ಸೇತುವೆ : 54 ತಿಂಗಳ ಬಳಿಕವೂ ಮುಗಿಯದ ಕಾಮಗಾರಿ

ಉಕ್ಕಿನ ಸೇತುವೆ: 13 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿಗೆ ನಾಲ್ಕೂವರೆ ವರ್ಷ ತೆಗೆದುಕೊಂಡ ಗುತ್ತಿಗೆದಾರ

ವಿಜಯಕುಮಾರ್ ಎಸ್.ಕೆ.
Published 10 ಡಿಸೆಂಬರ್ 2021, 22:12 IST
Last Updated 10 ಡಿಸೆಂಬರ್ 2021, 22:12 IST
ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ (ಎಡ ಚಿತ್ರ), ಸೇತುವೆ ಮೇಲೆ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ (ಎಡ ಚಿತ್ರ), ಸೇತುವೆ ಮೇಲೆ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.   

ಬೆಂಗಳೂರು: 13 ತಿಂಗಳಲ್ಲಿ ಮುಗಿಯಬೇಕಿದ್ದ ಉಕ್ಕಿನ ಸೇತುವೆ ಕಾಮಗಾರಿ, 54 ತಿಂಗಳಾದರೂ ದೊರಕದ ಮುಕ್ತಿ, ಹತ್ತಾರು ಗಡುವುಗಳಿಗೂ ಇಲ್ಲ ಕಿಮ್ಮತ್ತು, ವಾಹನ ಸವಾರರಿಗೆ ತಪ್ಪಲಿಲ್ಲ ಕಿರಿಕಿರಿ...

ಶಿವಾನಂದ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಉಕ್ಕಿನ ಸೇತುವೆಯ ಕಥೆ ಇದು. 2017ರ ಜೂನ್‌ನಲ್ಲಿ ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಕಾಮಗಾರಿ ಗುತ್ತಿಗೆ ವಹಿಸಿ ಬಿಬಿಎಂಪಿ ಕಾರ್ಯಾದೇಶ ನೀಡಿತ್ತು. 13 ತಿಂಗಳಲ್ಲಿ ಅಂದರೆ 2018ರ ಜುಲೈನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಕಾಲಮಿತಿ ನಿಗದಿ ಮಾಡಿತ್ತು. ನಿಗದಿತ ಅವಧಿಗಿಂತ 4 ಪಟ್ಟು ಹೆಚ್ಚು ಸಮಯ ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಯೋಜನೆ ಜಾರಿಯಿಂದ ರಸ್ತೆ ಬದಿಯಿರುವ ಮರಗಳಿಗೆ ಕೊಡಲಿ ಬೀಳಲಿದೆ ಎಂದು ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಇದರಿಂದ 2018ರಲ್ಲಿ ಮೂರು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಕೋರ್ಟ್‌ ಒಪ್ಪಿಗೆ ಪಡೆದು ಕಾಮಗಾರಿ ಪುನಾರಂಭಿಸಿ ಮೂರು ವರ್ಷ ಪೂರ್ಣಗೊಂಡರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬಕ್ಕೆ ಈ ನೆಪವೊಂದನ್ನೇ ಹೇಳಿಕೊಂಡು ಬಿಬಿಎಂಪಿ ಕಾಲ ತಳ್ಳುತ್ತಿದೆ. ಅನಗತ್ಯ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.

ADVERTISEMENT

ಕುಮಾರಕೃಪಾ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಹರೇಕೃಷ್ಣ ರಸ್ತೆ ಹಾಗೂ ಬಸವೇಶ್ವರ ವೃತ್ತದೆಡೆಗೆ ಸಾಗುವ ರಸ್ತೆಗಳು ಶಿವಾನಂದ ವೃತ್ತದ ಬಳಿ ಸೇರುತ್ತವೆ. ನಾಲ್ಕೂ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ವಾಹನ ಸವಾರರು ಇಲ್ಲಿ ನಿತ್ಯ ಪಡಿಪಾಟಲು ಅನುಭವಿಸುತ್ತಿದ್ದಾರೆ.

‘ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸುತ್ತಿದ್ದಾರೆ. ಆದರೆ, ಕಾಮಗಾರಿ ವಿಳಂಬದಿಂದ ಈ ಸೇತುವೆಯೇ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಆಗ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕು. ಇಲ್ಲಿ ಕುಮಾರಕೃಪಾ ರಸ್ತೆಯನ್ನು ಹಾದು ಹೋಗಲು ಕನಿಷ್ಠ 20 ನಿಮಿಷ ಬೇಕು. ಸಂಜೆ ವೇಳೆ ಶಿವಾನಂದ ವೃತ್ತ ರಸ್ತೆಯಲ್ಲಿ ಬರಲು ಭಯವಾಗುತ್ತದೆ’ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಸುರೇಶ್.

ಕಾಮಗಾರಿ ನಡೆಯುತ್ತಿರುವುದರಿಂದ ರೇಸ್‌ ಕೋರ್ಸ್‌ ರಸ್ತೆಯಿಂದ ಪ್ರವೇಶ ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಾಹನಗಳು ರೇಸ್‌ಕೋರ್ಸ್‌ ರಸ್ತೆಯಲ್ಲೇ ಮುಂದುವರಿದು ಕುಮಾರಕೃಪಾ ರಸ್ತೆಯ ಕಡೆ ತಿರುವು ಪಡೆದುಕೊಂಡು ಶಿವಾನಂದ ವೃತ್ತಕ್ಕೆ ಬರಬೇಕು. ಕಳೆದ ನಾಲ್ಕು ವರ್ಷಗಳಿಂದ ಜನ ಈ ಸುತ್ತು ಬಳಸು ಹಾದಿಯಲ್ಲೇ ಕ್ರಮಿಸುತ್ತಿದ್ದಾರೆ. ಪರ್ಯಾಯ ಮಾರ್ಗಗಳ ಮೇಲೆ ಹೆಚ್ಚುವರಿ ಸಂಚಾರ ಒತ್ತಡ ಹೇರಲಾಗುತ್ತಿದೆ. ಅದರಿಂದ ಉಂಟಾಗುವ ದಟ್ಟಣೆಯಿಂದ ನಿಧಾನವಾಗಿ ಸಂಚರಿಸಬೇಕು. ಅದಕ್ಕೆ ಖರ್ಚಾಗುವ ಹೆಚ್ಚುವರಿ ಇಂಧನದ ಹೊರೆಯನ್ನೂ ಸವಾರ ಹೊರಬೇಕು.

‘ಗುತ್ತಿಗೆ ಪಡೆದವರು ಮತ್ತು ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಗಿರುವ ವಿಳಂಬಕ್ಕೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಅನಗತ್ಯವಾಗಿ ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸರಿಯಾಗಿ ಮೇಲುಸ್ತುವಾರಿ ವಹಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು’ ಎಂದು ಬೈಕ್ ಸವಾರ ರಮೇಶ್ ಒತ್ತಾಯಿಸಿದರು.

ಕಾಮಗಾರಿ ವಿಳಂಬದ ಕುರಿತು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಎಂ. ಲೋಕೇಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ಅಂಕಿ –ಅಂಶ

ಶಿವಾನಂದ ವೃತ್ತ ಉಕ್ಕಿನ ಸೇತುವೆಯ ಉದ್ದ –493 ಮೀಟರ್

ಯೋಜನೆಯ ಅಂದಾಜು ವೆಚ್ಚ–₹60 ಕೋಟಿ

ಕಾಮಗಾರಿ ಆರಂಭವಾಗಿದ್ದು–2017ರ ಮಾರ್ಚ್

ಬೆಂಗಳೂರಿನ ಮೊದಲ ಉಕ್ಕಿನ ಸೇತುವೆ

* ಗುತ್ತಿಗೆ ಪಡೆದಿರುವ ಕಂಪನಿ; ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ

* ಬಿಬಿಎಂಪಿ ಯೋಜನಾ ವಿಭಾಗದಿಂದ ಕಾಮಗಾರಿ ನಿರ್ವಹಣೆ

ದೂಳು, ಸಂಚಾರ ದಟ್ಟಣೆ ನಡುವೆ ನಾಲ್ಕು ವರ್ಷಗಳಿಂದ ಜೀವನ ನಡೆಸುತ್ತಿದ್ದೇವೆ. ನಾಗರಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಬಿಬಿಎಂಪಿಗೆ ಗಮನವೇ ಇಲ್ಲ.

– ಮಾಯಣ್ಣ, ಸ್ಥಳೀಯ ವರ್ತಕ

ಸೇತುವೆ ಕೆಲಸ ಆರಂಭವಾಗಿ ನಾಲ್ಕರಿಂದ ಐದು ವರ್ಷವಾಗಿದ್ದು, ಇನ್ನೂ ಮುಗಿದಿಲ್ಲ. ಸಂಚಾರ ದಟ್ಟಣೆಯಿಂದ ತೀವ್ರ ತೊಂದರೆ ಉಂಟಾಗುತ್ತಿದೆ.

– ಅಮ್ಜದ್, ಸ್ಥಳೀಯ ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.