ADVERTISEMENT

ಉಕ್ಕಿನ ಸೇತುವೆ; ಅಧಿಕಾರಿಗಳ ಜತೆ ಡಿಸಿಎಂ ಸಭೆ

ಯೋಜನೆಗೆ ಬಿಜೆಪಿ ತೀವ್ರ ವಿರೋಧ l ವಾಟಾಳ್‌ ನಾಗರಾಜ್ ಅವರಿಂದ ಎತ್ತಿನಗಾಡಿ ಸವಾರಿ ನಡೆಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 19:37 IST
Last Updated 2 ಜನವರಿ 2019, 19:37 IST
   

ಬೆಂಗಳೂರು: ಉದ್ದೇಶಿತ ಉಕ್ಕಿನ ಸೇತುವೆಗೆ ಸಂಬಂಧಿಸಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಅಧಿಕಾರಿಗಳ ಜತೆ ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಸಮಗ್ರ ಅಭಿವೃದ್ಧಿ ಯೋಜನೆ –2031 ಹಾಗೂ ಬೆಂಗಳೂರು ಅಭಿವೃದ್ಧಿ ಕುರಿತು ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಭೆಯಲ್ಲಿ ಸೇತುವೆಗೆ ಸಂಬಂಧಿಸಿದಂತೆ ಹೆಚ್ಚಿನ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ವಿವಾದಿತ ಉಕ್ಕಿನ ಸೇತುವೆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳುವುದಾಗಿ ಪರಮೇಶ್ವರ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಸಭೆ ನಡೆದಿದೆ.

‘ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಡಿಎ ಅಧಿಕಾರಿಗಳು ಭಾಗವಹಿಸಿದ್ದರು. ಇಡೀ ಸಭೆಯಲ್ಲಿ ಉಕ್ಕಿನ ಸೇತುವೆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳುವುದು ಹೇಗೆ ಎಂಬ ಕುರಿತೇ ದೀರ್ಘ ಚರ್ಚೆ ನಡೆದಿದೆ. ತಮಗೆ ಆಪ್ತರಾಗಿರುವ ಅಧಿಕಾರಿಗಳ ಜತೆ ಚರ್ಚಿಸಿದ ಡಿಸಿಎಂ, ಜನ ವಿರೋಧದ ನಡುವೆ ಈ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನದ ಬಗ್ಗೆ ಕಾರ್ಯತಂತ್ರ ರೂಪಿಸುವ ಬಗೆಗೂ ಚರ್ಚೆ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಉಕ್ಕಿನ ಸೇತುವೆ ಯೋಜನೆ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿದ ಕಾರಣ ಅದನ್ನು ರದ್ದುಗೊಳಿಸಲಾಗಿತ್ತು. ಈಗ ‘ಸರಿಯಾದ’ ಮಾಹಿತಿ ಪಸರಿಸಬೇಕು ಎಂಬ ಸೂಚನೆ ಬಂದಿದೆ. ಯಾವ ಮಾಹಿತಿಯನ್ನು ಹೇಗೆ ತೆರೆದಿಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕಾರ್ಯವನ್ನು ಯಾರು ನಿರ್ವಹಿಸಬೇಕು ಎಂಬುದು ಅಂತಿಮಗೊಂಡಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ಹೇಳಿದರು.

ಸಮಗ್ರ ಯೋಜನಾ ವರದಿಯನ್ನು ಇನ್ನೊಮ್ಮೆ ಜನರ ಮುಂದಿಟ್ಟು ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಕಾಲಮಿತಿ ನಿಗದಿ ಮತ್ತು ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಪರಮೇಶ್ವರ ಅವರು ಯೋಜನೆಯನ್ನು ಶೀಘ್ರವೇ ಅಂತಿಮಗೊಳಿಸಲು ಉತ್ಸುಕರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ವಿರೋಧ: ನಗರದಲ್ಲಿ ಯಾವುದೇ ಕಾರಣಕ್ಕೂ ಉಕ್ಕಿನ ಸೇತುವೆ ನಿರ್ಮಾಣವಾಗಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಹಟಕ್ಕೆ ಬಿದ್ದು ಕಾಮಗಾರಿ ನಡೆಸಿದರೆ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹಾಗೂ ಕಾರ್ಯದರ್ಶಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಕ್ಕಿನ ಸೇತುವೆ ವಿರುದ್ಧ ಪರಿಸರವಾದಿಗಳು ಹಾಗೂ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಧ್ವನಿ ಎತ್ತಿದ್ದರು. ಹೋರಾಟಕ್ಕೆ ಮಣಿದು ಸರ್ಕಾರ ಯೋಜನೆ ಕೈಬಿಟ್ಟಿತ್ತು. ಈಗ ಮತ್ತೆ ಚಾಲನೆ ನೀಡಲು ಮುಂದಾಗಿರುವುದು ಸರಿಯಲ್ಲ’ ಎಂದರು.

ಚುನಾವಣೆ ಹತ್ತಿರವಾದಾಗ ಯೋಜನೆ ಪ್ರತ್ಯಕ್ಷ

ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಉಕ್ಕಿನ ಸೇತುವೆಯಂತಹ ಯೋಜನೆಗಳು ನಿಗೂಢ ರೀತಿಯಲ್ಲಿ ಮರುಜೀವ ಪಡೆದುಕೊಳ್ಳುತ್ತವೆ. ಈಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸಹ ಬಿಲ್ಡರ್ - ಗುತ್ತಿಗೆದಾರರ ಮೂಲಕ ನಗರದ ಶೋಷಣೆ, ಸಾರ್ವಜನಿಕ ಹಣದ ದುರ್ಬಳಕೆ, ಭ್ರಷ್ಟಾಚಾರ ಮುಂದುವರಿದಿದೆ. ಈ ಯೋಜನೆಯನ್ನು ನಾಗರಿಕರು ವಿರೋಧಿಸಿದ್ದರು.ರಾಷ್ಟ್ರೀಯ ಹಸಿರು ಪೀಠ ಸಹ ಈ ಯೋಜನೆಗೆ ತಡೆಯೊಡ್ಡಿತ್ತು ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಪರಮೇಶ್ವರ ಮತ್ತು ಸಚಿವ ಡಿ.ಕೆ ಶಿವಕುಮಾರ್ ಅವರು ಸಾರ್ವಜನಿಕರ ದಿಕ್ಕು ತಪ್ಪಿಸಲು ಯಾವುದೇ ಪ್ರಯತ್ನ ನಡೆಸಿದರೂ ಎಂಪಿಸಿ ನೇತೃತ್ವದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿದ ಸಮಗ್ರ ಯೋಜನೆಯ ಹೊರತಾದ ಯಾವುದೇ ಯೋಜನೆಯನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಂದು ಎತ್ತಿನಗಾಡಿ ಸವಾರಿ ಪ್ರತಿಭಟನೆ

ಉಕ್ಕಿನ ಸೇತುವೆ ಯೋಜನೆ ವಿರೋಧಿಸಿ ಜ.3ರಂದು ಬೆಳಿಗ್ಗೆ 11ಕ್ಕೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಚಾಲುಕ್ಯ ವೃತ್ತದಿಂದ ಬಿಡಿಎ ಕಚೇರಿವರೆಗೆ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರು ಎತ್ತಿನಗಾಡಿ ಸವಾರಿ ಮಾಡಲಿದ್ದಾರೆ. ಈ ಯೋಜನೆಯನ್ನು ಕೈಬಿಡುವವರೆಗೂ ಚಳವಳಿ ನಡೆಸುವುದಾಗಿ ನಾಗರಾಜ್‌ ತಿಳಿಸಿದ್ದಾರೆ.

ಜನ ಏನು ಹೇಳುತ್ತಾರೆ...

ಸಮಸ್ಯೆಗಳ ವರ್ಗಾವಣೆ

ಸೇತುವೆ ನಿರ್ಮಾಣದಿಂದವಾಹನ ಸಂಚಾರ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಕಂಡು ಬರುವುದಿಲ್ಲ. ಬದಲಿಗೆ ಇದುಸಮಸ್ಯೆಯನ್ನು ಕೆಳಗಿನ ರಸ್ತೆಯಿಂದ ಮೇಲಿನ ರಸ್ತೆಗೆ ವರ್ಗಾಯಿಸುತ್ತದೆ ಅಷ್ಟೇ! ಉಕ್ಕಿನ ಸೇತುವೆ ಇದಾಗಿರುವುದರಿಂದ ಅದರ ಸುತ್ತಲಿನ ವಾತಾವರಣದಲ್ಲಿ ಶಾಖದ ಪ್ರತಿಫಲನ ಹೆಚ್ಚಲಿದೆ. ಸ್ಥಳೀಯರಿಗೆ ತೊಂದರೆಯಾಗಲಿದೆ.

→ಡಾ.ಶರತ್‌ ಅನಂತಮೂರ್ತಿ,ಹೈದರಾಬಾದ್‌

***

ಸೇತುವೆ ಅಗತ್ಯವಿಲ್ಲ

ಬೇರೆ ದೇಶಗಳಲ್ಲಿ ವಾಹನ ದಟ್ಟಣೆಗೆ ಕಾರಣವಾಗುತ್ತಿರುವ ಕಾರಣ ಉಕ್ಕಿನ ಸೇತುವೆಗಳನ್ನು ಕೆಡವಲಾಗುತ್ತಿದೆ. ಇದರ ನಡುವೆ ಸರ್ಕಾರ ದುಂದುವೆಚ್ಚ ಮಾಡಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಮಂಜಸವಲ್ಲ.

ವಿ.ಎನ್‌.ರಾಜಶೇಖರ್‌,ಮಲ್ಲೇಶ್ವರ

***

ನಂಬಿಕೆ ಕಳೆದುಕೊಳ್ಳುತ್ತಾರೆ

ಜನರಿಗೆ ಬೇಡವಾದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇಂದಿನ ಮುಖ್ಯಮಂತ್ರಿಯವರು ಹಿಂದೆ ಈ ಯೋಜನೆಯನ್ನು ವಿರೋಧಿಸಿದ್ದರು. ಈಗ ಅದರ ನಿರ್ಮಾಣಕ್ಕೆ ಮುಂದಾದರೆ ಅವರುನಂಬಿಕೆ ಕಳೆದುಕೊಳ್ಳಲಿದ್ದಾರೆ. ಆ ಹಣವನ್ನು ನೀರಾವರಿ ಯೋಜನೆಗಳಿಗೆ ವಿನಿಯೋಗಿಸಿದರೆ ಕರ್ನಾಟಕ ಮಾದರಿ ರಾಜ್ಯವಾಗಲಿದೆ.

ಅಶೋಕ,ನೆಲಮಂಗಲ

***

ಸೇತುವೆ ನಿರ್ಮಾಣವಾಗಲಿ

ನಗರದಲ್ಲಿ ಸಂಚಾರ ದಟ್ಟಣೆಯಿಂದ ನಿತ್ಯ ನರಕ ಅನುಭವಿಸುತ್ತಿದ್ದೇವೆ. ಅದಕ್ಕೆ ಮುಕ್ತಿ ಸಿಗಬೇಕಾದರೆ ಉಕ್ಕಿನ ಸೇತುವೆ ನಿರ್ಮಾಣವಾಗಬೇಕು.ಸರ್ಕಾರಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಬೇಕು.

ಅಂದಾನಯ್ಯ,ಯಲಹಂಕ

***

ಭವಿಷ್ಯದ ದೃಷ್ಟಿಯಿಂದ ಬೇಕು

ಭವಿಷ್ಯದ ದೃಷ್ಟಿಯಿಂದ ನಗರಕ್ಕೆಉಕ್ಕಿನ ಸೇತುವೆ ಅಗತ್ಯವಿದೆ. ಸೇತುವೆ ನಿರ್ಮಾಣವಾದರೆ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಜನರಿಗೆಇದರ ಮಹತ್ವ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಎಸ್‌.ಶಿವಶಂಕರ,ಮುತ್ತರಾಯನಹಳ್ಳಿ

***

ಅಸಮಂಜಸ ಯೋಜನೆ

ಉಕ್ಕಿನ ಸೇತುವೆ ನಿರ್ಮಾಣ ಬೇಡ. ಕೆಲವರಅನುಕೂಲಕ್ಕಾಗಿ ಮರಗಳ ಮಾರಣಹೋಮ ಆಗುವುದು ಬೇಡ. ನಗರಕ್ಕೆ ಅದರ ಅಗತ್ಯವೂ ಇಲ್ಲ. ಈ ಅಸಮಂಜಸ ಯೋಜನೆಯನ್ನು ಕೈಬಿಡುವುದು ಒಳ್ಳೆಯದು.

ಆಶಾಬಾಯಿ,ಜಾಲಹಳ್ಳಿ

***

ಸಾರ್ವಜನಿಕರ ಹಣ ಪೋಲು

ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಸರಿ ಇಲ್ಲ. ಇದರಿಂದ ಅಪಾರ ಪ್ರಮಾಣದ ವೆಚ್ಚವಾಗಲಿದೆ. ಸಾಮಾನ್ಯ ಜನರು ಕಟ್ಟುವ ತೆರಿಗೆ ಹಣ ಪೋಲು ಮಾಡುವುದು ತಪ್ಪು.

ಶ್ರೀರಾಮ್ ಶಾಸ್ತ್ರಿ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.