ADVERTISEMENT

ಗ್ಯಾರಂಟಿಗೆ SCSP/TSP ಹಣ ಬಳಕೆ ನಿಲ್ಲಿಸಿ: ದಲಿತ ಹಕ್ಕುಗಳ ಸಮಿತಿ ಆಗ್ರಹ

ರಾಜ್ಯ ಸರ್ಕಾರಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 18:59 IST
Last Updated 7 ಜುಲೈ 2024, 18:59 IST
   

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ (ಟಿಎಸ್‌ಪಿ) ಹಣವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.

‘10 ವರ್ಷಗಳಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಎಂದು ಎರಡೂವರೆ ಲಕ್ಷ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಆದರೆ ಇಷ್ಟೂ ಹಣ ಅರ್ಹ ದಲಿತರಿಗೆ ತಲುಪದೆ, ಅನ್ಯ ಉದ್ದೇಶಕ್ಕೆ ಬಳಕೆಯಾಗಿದೆ. ಅದನ್ನು ತಡೆಗಟ್ಟಲೆಂದೇ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಕಳೆದ ವರ್ಷ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿತ್ತು. ಆದರೆ, ತಾವೇ ಜಾರಿಗೆ ತಂದಿದ್ದ ಈ ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಉಲ್ಲಂಘಿಸಿದ್ದಾರೆ’ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ಟೀಕಿಸಿದ್ದಾರೆ.

‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ₹39,121 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದ್ಧೇವೆ. ಅದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹14,282 ಕೋಟಿಯನ್ನು ಬಳಸಲಾಗುತ್ತದೆ. ಅದನ್ನು ಪರಿಶಿಷ್ಟರಿಗೇ ನೀಡಲಾಗುತ್ತದೆ ಎಂದು ಈಚೆಗೆ ನಡೆಸಿದ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವಂತಹ ವಂಚನೆ. ಇದು ದಲಿತ ವಿರೋಧಿ ನೀತಿ’ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

‘ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಮೀಸಲು ಕ್ಷೇತ್ರದಿಂದ ಚುನಾಯಿತರಾದ ಶಾಸಕರು– ಸಚಿವರು ಸರ್ಕಾರದ ಈ ತೀರ್ಮಾನಕ್ಕೆ ಸಂಬಂಧಿಸಿದಂತೆ ಮೌನವಹಿಸಿರುವುದು ವಿಷಾದನೀಯ. ಸರ್ಕಾರವು ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳುವುದನ್ನು ತಕ್ಷಣವೇ ತಡೆಹಿಡಿಯಬೇಕು. 10 ವರ್ಷಗಳಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಎಷ್ಟು ಹಣ ನೀಡಲಾಗಿತ್ತು ಮತ್ತು ಅದರಲ್ಲಿ ಈ ಯೋಜನೆಗಳಿಗೇ ಎಷ್ಟು ಹಣ ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಲು ಸಮಿತಿ ರಚಿಸಬೇಕು ಹಾಗೂ ಮೌಲ್ಯಮಾಪನ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.