ADVERTISEMENT

ಐಸಿಡಿಎಸ್‌ ಯೋಜನೆ ಬಲಪಡಿಸಿ: ಟಿ.ಆರ್. ಚಂದ್ರಶೇಖರ್‌ ಒತ್ತಾಯ

ಅಂಗನವಾಡಿ ಕೇಂದ್ರಗಳ ಸಮಗ್ರತೆ ಕಾಪಾಡುವ ಸಭೆಯಲ್ಲಿ ಟಿ.ಆರ್. ಚಂದ್ರಶೇಖರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:46 IST
Last Updated 22 ಜೂನ್ 2024, 14:46 IST
ನಗರದ ಶಾಸಕರ ಭವನ–2ರಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಿಕ್ಷಣ ತಜ್ಞ ಬಿ. ಶ್ರೀಪಾದ್ ಭಟ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಟಿ.ಆರ್. ಚಂದ್ರಶೇಖರ್,  ಕಾತ್ಯಾಯಿನಿ ಚಾಮರಾಜ್, ಎಸ್. ವರಲಕ್ಷ್ಮಿ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ನಗರದ ಶಾಸಕರ ಭವನ–2ರಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಿಕ್ಷಣ ತಜ್ಞ ಬಿ. ಶ್ರೀಪಾದ್ ಭಟ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಟಿ.ಆರ್. ಚಂದ್ರಶೇಖರ್,  ಕಾತ್ಯಾಯಿನಿ ಚಾಮರಾಜ್, ಎಸ್. ವರಲಕ್ಷ್ಮಿ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್‌) ಬಲಪಡಿಸಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು’ ಎಂದು ಆರ್ಥಿಕ ತಜ್ಞ ಟಿ.ಆರ್. ಚಂದ್ರಶೇಖರ್‌ ಅವರು ಸರ್ಕಾರವನ್ನು ಶನಿವಾರ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಆಯೋಜಿಸಿದ್ದ ‘ಅಂಗನವಾಡಿ ಕೇಂದ್ರದ ಪರಿಕಲ್ಪನೆಗೆ ಬಂದಿರುವ ಅಪಾಯದ ಕುರಿತು ಚರ್ಚಿಸಲು ಮತ್ತು ಸಮಗ್ರತೆಯನ್ನು ಕಾಪಾಡಲು ಕರೆದಿದ್ದ ಸಭೆ’ಯಲ್ಲಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಆದೇಶವನ್ನು ಸರ್ಕಾರ ತಜ್ಞರೊಂದಿಗೆ ಚರ್ಚಿಸದೇ ತರಾತುರಿಯಲ್ಲಿ ಮಾಡಿದೆ. ಇದು ಕೇವಲ ಆಡಳಿತಾತ್ಮಕ ಆದೇಶ. ಇದರಿಂದ, ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ’ ಎಂದು ದೂರಿದರು.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಹೀಗಾಗಿ, ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಲಾಗುತ್ತಿದೆ ಎಂಬ ಸಮರ್ಥನೆ ಸರಿಯಲ್ಲ. 2011ರ ಜನಗಣತಿಯ ಪ್ರಕಾರ ಆರು ವರ್ಷದೊಳಗಿನ ಮಕ್ಕಳ ಸಂಖ್ಯೆಯೇ ಕಡಿಮೆ ಆಗಿದೆ’ ಎಂದರು.

ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ‘ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಆದೇಶ ಕೈಬಿಡಬೇಕು. ಅಂಗನವಾಡಿ ಕೇಂದ್ರ ಹೆಸರನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರವೆಂದು ಪರಿವರ್ತಿಸಬೇಕು. ಕಾರ್ಯಕರ್ತೆಯರಿಗೆ ‘ಶಿಕ್ಷಕಿ’ಯರ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.