ಬೆಂಗಳೂರು: ಕೈಗಾರಿಕೆಗಳು ರಾಸಯನಿಕಯುಕ್ತ ತ್ಯಾಜ್ಯನೀರನ್ನು ಸಂಸ್ಕರಿಸದೆಯೇ ಕೆರೆಗಳಿಗೆ ಹರಿಯಬಿಟ್ಟರೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಎಂ. ಗೌತಮ್ ಕುಮಾರ್ ಎಚ್ಚರಿಕೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಮೂಲಗಳು ಕಲುಷಿತಗೊಳ್ಳದಂತೆ ತಡೆಯುವ ಸಲುವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಅವರು ಮಂಗಳವಾರ ಸಮನ್ವಯ ಸಭೆ ನಡೆಸಿದರು.
‘ವಿವಿಧ ಕೈಗಾರಿಕೆಗಳು ರಾಸಾಯನಿಕಯುಕ್ತ ತ್ಯಾಜ್ಯನೀರನ್ನು ರಾಜಕಾಲುವಗಳಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಇದರಿಂದ ಕೆರೆಗಳು ಮಲಿನವಾಗುವುದರ ಜೊತೆ ವೃಷಭಾವತಿ ಕಣಿವೆ, ಹೆಬ್ಬಾಳ ಕಣಿವೆ ಹಾಗೂ ಕೋರಮಂಗಲ–ಚಲ್ಲಘಟ್ಟ ಕಣಿವೆಗಳ ವ್ಯಾಪ್ತಿಯ ಅಂತರ್ಜಲವೂ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್ ಸೂಚನೆ ನೀಡಿದರು.
‘ಕೋವಿಡ್-19 ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ಕೈಗಾರಿಕೆಗಳು ಸ್ಥಗಿತವಾಗಿದ್ದವು. ಇದರಿಂದಾಗಿ ಮಲಿನ ನೀರು ಕೆರೆಗಳಿಗೆ ಸೇರಲಿಲ್ಲ. ಈ ಅವಧಿಯಲ್ಲಿ ಕೆರೆಗಳ ನೀರು ಸ್ವಚ್ಛವಾಗಿರುವ ಜ್ವಲಂತ ಉದಾಹರಣೆ ನಮ್ಮ ಮುಂದಿದೆ. ಮುಂದೆಯೂ ಬಿಬಿಎಂಪಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಿದೆ’ ಎಂದು ತಿಳಿಸಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಸಮಾಲೋಚನೆ ನಡೆಸುತ್ತೇನೆ’ ಎಂದರು.
ಕೆಎಸ್‌ಪಿಸಿಬಿ ಅಧ್ಯಕ್ಷರ ವಿಜಯ್ ಕುಮಾರ್ ಗೋಗಿ, ‘ಲಾಕ್‌ಡೌನ್ ಆಗಿದ್ದರಿಂದ ಕೈಗಾರಿಕೆಗಳು, ಹೋಟೆಲ್‌ಗಳು, ಉದ್ಯಮಗಳು ಕಾರ್ಯನಿರ್ವಹಿಸಿಲ್ಲ. ವಾಹನ ಓಡಾಟವೂ ಬಹುತೇಕ ಸ್ತಬ್ಧಗೊಂಡಿತ್ತು. ಹಾಗಾಗಿ ವಿಷಪೂರಿತ ಹೊಗೆ ಪರಿಸರಕ್ಕೆ ಸೇರುವ ಪ್ರಮಾಣ ಕಡಿಮೆಯಾಗಿದೆ. ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಹಾಗೂ ಕೆರೆಗಳ ಮೀಸಲು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲೇಬಾರದು. ರಾಜಕಾಲುವೆಗಳಿಗೆ ಶುದ್ಧ ನೀರು ಮಾತ್ರ ಸೇರುವಂತೆ ನೋಡಿಕೊಂಡರೆ ಕೆರೆಗಳು ಮಲಿನವಾಗುವುದನ್ನು ತಡೆಯಬಹುದು. ಉದ್ದಿಮೆ ಪರವಾನಗಿ ಪಡೆಯದೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು, ತ್ಯಾಜ್ಯನೀರನ್ನು ಸಂಸ್ಕರಿಸದೆ ಹಾಗೆಯೇ ಚರಂಡಿಗಳಿಗೆ ಹರಿಯಬಿಡುತ್ತಿರುವ ದೂರುಗಳಿವೆ. ಇಂತಹ ಉದ್ದಿಮೆಗಳನ್ನು ಪತ್ತೆಹಚ್ಚಿ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದರು.
ಮುಖ್ಯ ಎಂಜಿನಿಯರ್ (ರಾಜಕಾಲುವೆ) ಪ್ರಹ್ಲಾದ್, ‘ಕೈಗಾರಿಕೆಗಳಿಂದ ರಾಸಯನಿಕಯುಕ್ತ ನೀರನ್ನು ಸಂಸ್ಕರಿಸದೆ ಕೆರೆಗಳಿಗೆ ಹರಿಯಬಿಟ್ಟಿರುವ ಬಗ್ಗೆ ಇದುವರೆವಿಗೂ 496 ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಲಮಂಡಳಿ ಮುಖ್ಯ ಎಂಜಿನಿಯರ್ ಗಂಗಾಧರ್, ‘ವೃಷಭಾವತಿ ಕಣಿವೆಗೆ ನಿತ್ಯ 50.40 ಕೋಟಿ ಲೀಟರ್‌ಗಳಷ್ಟು ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದೆ. ಈಗಾಗಲೇ ನಿತ್ಯ 24.60 ಕೋಟಿ ಲೀಟರ್ ಸಂಸ್ಕರಿಸುವ ಸಾಂರ್ಥ್ಯದ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಈ ಕಣಿವೆ ಬಳಿ ನಿತ್ಯ 15 ಕೋಟಿ ಲೀಟರ್ ತ್ಯಾಜ್ಯನೀರು ಸಂಸ್ಕರಿಸುವ ಸಾಮರ್ಥ್ಯದ ಎಸ್‌ಟಿಪಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, 2021ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಳ್ಳಂದೂರು ಕೆರೆ ಬಳಿ, ಕೆ.ಸಿ ಕಣಿವೆ ಬಳಿ ಒಟ್ಟು ನಿತ್ಯ 15 ಕೋಟಿ ಲೀಟರ್ ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯದ ಎಸ್‌ಟಿಪಿ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಉಪಮೇಯರ್ ರಾಮಮೋಹನ ರಾಜು, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್, ವಿಶೇಷ ಆಯುಕ್ತ (ಆಸ್ತಿ) ಜಿ.ಮಂಜುನಾಥ್,ಬಿಡಿಎ ಆಯುಕ್ತ ಜಿ.ಸಿ ಪ್ರಕಾಶ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.