ಬೆಂಗಳೂರು: ‘ವರ್ಗಾವಣೆ ಕೋರಿ ನೇರವಾಗಿ ಪೊಲೀಸ್ ಕಮಿಷನರ್ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಮುಂದೆ ವರ್ಗಾವಣೆಗಾಗಿ ಬರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಎಚ್ಚರಿಕೆ ನೀಡಿದರು.
ನಗರದ ಆಡುಗೋಡಿಯ ಸಿಎಆರ್ ಕವಾಯತು ಮೈದಾನದಲ್ಲಿ ಶುಕ್ರವಾರ ತಿಂಗಳ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಸಂದರ್ಶಕರಿಗಿಂತ ಪತ್ರ ಹಿಡಿದು ವರ್ಗಾವಣೆ ಕೋರಿ ಕಚೇರಿಗೆ ಬರುವ ಸಿಬ್ಬಂದಿಯೇ ಹೆಚ್ಚಾಗಿದ್ದಾರೆ. ಇದರಿಂದ ಕಚೇರಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಡ್ತಿ ಹಾಗೂ ವರ್ಗಾವಣೆಯನ್ನು ಆದ್ಯತೆ ಮೇರೆಗೆ ಕೌನ್ಸೆಲಿಂಗ್ ಮೂಲಕ ಪೂರ್ಣಗೊಳಿಸಲಾಗಿದೆ. ಆದರೂ, ಕೆಲವರು ಪತ್ರ ಹಿಡಿದು ನಿತ್ಯ ಕಚೇರಿಯತ್ತ ಬರುತ್ತಿದ್ದಾರೆ’ ಎಂದರು.
‘ಡಿಸಿಪಿ ಕಚೇರಿಗೆ ತಲುಪಿಸಿ’: ‘ಕೌಟುಂಬಿಕ ಸಮಸ್ಯೆಯಿದ್ದು, ವರ್ಗಾವಣೆ ಬೇಕಾದವರು ತಮ್ಮ ವ್ಯಾಪ್ತಿಯ ಡಿಸಿಪಿ ಕಚೇರಿ ಅಥವಾ ಹೆಚ್ಚುವರಿ ಪೊಲೀಸ್ ಕಮಿಷನರ್ ಕಚೇರಿಗೆ ಕೋರಿಕೆ ಪತ್ರ ತಲುಪಿಸಿ. ಆ ಪತ್ರವನ್ನು ಪರಿಶೀಲಿಸಿ ಸೂಕ್ತವೆಂದು ಕಂಡುಬಂದರೆ ವರ್ಗಾವಣೆ ಮಾಡಲಾಗುವುದು. ಅಲೆದಾಟ ನಡೆಸದೇ ಕೆಲಸಕ್ಕೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.
ಸ್ವತ್ತು ಪತ್ತೆ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕು. ಅಲ್ಲದೇ ಠಾಣೆಗೆ ದೂರು ಹಿಡಿದು ಬರುವ ಸಾರ್ವಜನಿಕರ ಜೊತೆಗೆ ಪೊಲೀಸ್ ಸಿಬ್ಬಂದಿ ಸೌಜನ್ಯದಿಂದ ವರ್ತನೆ ಮಾಡುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿಯಬೇಕು. ಉತ್ತಮವಾಗಿ ಕೆಲಸ ಮಾಡಿದ ಸಿಬ್ಬಂದಿ ಹಾಗೂ ಅಧಿಕಾರಿಯನ್ನು ಪ್ರಶಂಸಿಸುವ ಕೆಲಸ ಮುಂದುವರಿಯಲಿದೆ. ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ಹೊಯ್ಸಳ ತಂಡ ಪ್ರಶಂಸಾ ಪತ್ರವನ್ನು ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಎಂ.ಮಧು, ಮಹದೇವಪುರ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಗಣೇಶ ಕಾಟೇನಹಳ್ಳಿ, ರಾಜಗೋಪಾಲನಗರ ಪೊಲೀಸ್ ಠಾಣೆಯ ಎಎಸ್‌ಐ ಉಮಾಶಂಕರ ಹಾಗೂ ಮಹಾದೇವಪುರ ಪೊಲೀಸ್ ಠಾಣೆಯ ಎಎಸ್‌ಐ ಪರಶುರಾಮ ಅವರಿಗೆ ವಿತರಣೆ ಮಾಡಲಾಯಿತು.
112 ಸಹಾಯವಾಣಿಗೆ ಕರೆ ಮಾಡಿದಾಗ ಸಾರ್ವಜನಿಕರ ಜೊತೆಗೆ ಉತ್ತಮ ಸಂವಹನ ನಡೆಸಿದ ಸಿಬ್ಬಂದಿ ಪಿ.ದೀಪಾ, ಎಚ್.ರಾಜೇಶ್ವರಿ, ಲಿನ್ಸಿ ದಿಯಾನಾ ಅವರಿಗೂ ಪ್ರಶಂಸಾ ಪತ್ರವನ್ನು ಬಿ.ದಯಾನಂದ ವಿತರಣೆ ಮಾಡಿದರು.
ಉದ್ಯಮಿ ವಿಜಯ್ ತಾತಾ ಅವರು ನೀಡಿದ ದೂರು ಆಧರಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಯಲಿದೆಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.