ಬೆಂಗಳೂರು: ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರೊಂದಿಗೆ ಸಂವಾದ ಮತ್ತು ಸಂವಹನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದ ‘ಸ್ಟೂಡೆಂಟ್ ಲಿಟ್ ಫೆಸ್ಟ್, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ನೆರವಾಯಿತು.
‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಫ್ರೀ ಸ್ಪೇಸ್ ಫೋರಂ ನಗರದಲ್ಲಿ ಹಮ್ಮಿಕೊಂಡ ಎರಡು ದಿನಗಳ ‘ಸ್ಟೂಡೆಂಟ್ ಲಿಟ್ ಫೆಸ್ಟ್–2024’ ಶುಕ್ರವಾರ ಸಂಪನ್ನವಾಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರಂಗ ನಿರ್ದೇಶಕ ಎಸ್.ಎನ್. ಸೇತುರಾಮ್, ‘ಸಮಾಜದಲ್ಲಿನ ಉತ್ತಮ ವಿಚಾರ, ನಡೆ–ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸ್ಥಿರ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕು. ಸಾಹಿತ್ಯ, ಕಲೆಯಂತಹ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ‘ನಾವು ಪ್ರತಿನಿತ್ಯ ಹಲಾವರು ಸನ್ನಿವೇಶಗಳಲ್ಲಿ ಪಾತ್ರಧಾರಿಗಳಾಗಿರುತ್ತೇವೆ. ಹಾಗೆಯೇ, ಪ್ರತಿಯೊಂದು ವಸ್ತು ಮತ್ತು ಜೀವಗಳ ಮೇಲೆ ಕಥೆಯನ್ನು ರಚಿಸಲು ಸಾಧ್ಯ. ಆದ್ದರಿಂದ ನಾವು ಕಥೆಯನ್ನು ರಚಿಸುವ ಕಲೆಗಾರರಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಕಲಾವಿದ ಪ್ರವೀಣ ಗೋಡ್ಖಿಂಡಿ, ‘ನಮ್ಮ ಅನಿಸಿಕೆ ಮತ್ತು ಆಲೋಚನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುವುದನ್ನು ರೂಢಿಸಿಕೊಳ್ಳಬೇಕು. ಎಷ್ಟೇ ನವಿನತೆಗೆ ಒಗ್ಗಿಕೊಂಡರೂ ನಮ್ಮ ಪರಂಪರೆ ಹಾಗೂ ನಮ್ಮ ಅಸ್ಮಿತೆಯನ್ನು ಬಿಟ್ಟುಕೊಡಬಾರದು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ತಿಕ್ ಅವರು ರಚಿಸಿದ ‘ಅವತರಣ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಬೆಳಿಗ್ಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ವಿದ್ವಾಂಸ ಶತಾವಧಾನಿ ಆರ್. ಗಣೇಶ ಅವರು ‘ಸಾಹಿತ್ಯದಲ್ಲಿ ರಸಾನಂದ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ‘ಧರ್ಮಗ್ರಂಥಗಳಲ್ಲಿ ಸಮಂಜಸ’ ಎಂಬ ವಿಷಯದ ಕುರಿತು ದುಷ್ಯಂತ್ ಶ್ರೀಧರ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.