ADVERTISEMENT

‘ಅಮೆಜಾನ್‌’ನಲ್ಲಿ ಚಾಕು ಖರೀದಿಸಿದ್ದ ರಕ್ಷಿತ್!

₹1,200 ಕೊಟ್ಟು ಆರು ತಿಂಗಳ ಹಿಂದೆಯೇ ಖರೀದಿ l ಆರೋಪಿ ವಿದ್ಯಾರ್ಥಿಯ ಮನೆ ಮಹಜರು ಇಂದು

ಎಂ.ಸಿ.ಮಂಜುನಾಥ
Published 31 ಜನವರಿ 2019, 20:35 IST
Last Updated 31 ಜನವರಿ 2019, 20:35 IST
ದಯಾಸಾಗರ್‌ ಹಾಗೂ ರಕ್ಷಿತ್‌
ದಯಾಸಾಗರ್‌ ಹಾಗೂ ರಕ್ಷಿತ್‌   

ಬೆಂಗಳೂರು: ಹುಡುಗಿ ವಿಚಾರಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಯಾಸಾಗರ್‌ನನ್ನು ಬುಧವಾರ ಬೆಳಿಗ್ಗೆ ಕಾಲೇಜು ಶೌಚಾಲಯದಲ್ಲೇ ಕೊಲೆ ಮಾಡಿದ ಆರೋಪಿ ರಕ್ಷಿತ್ (18), ಆನ್‌ಲೈನ್ ವಹಿವಾಟು ತಾಣವಾದ ‘ಅಮೆಜಾನ್‌’ನಲ್ಲಿ ಆರು ತಿಂಗಳ ಹಿಂದೆಯೇ ಚಾಕು ಖರೀದಿಸಿದ್ದ!

‍ಬಾಗಲಗುಂಟೆ ಪೊಲೀಸರ ತನಿಖೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ. ‘ಕಾಲೇಜು ಹಾಗೂ ಮನೆ ಬಳಿ ಇರುವ ಕೆಲ ಪುಂಡರ ಸಹವಾಸ ಮಾಡಿದ್ದ ರಕ್ಷಿತ್, ತಾನೂ ರೌಡಿಯಂತೆ ವರ್ತಿಸುತ್ತಿದ್ದ. ಹುಡುಗರನ್ನು ಬೆದರಿಸಲು ₹ 1,200 ಪಾವತಿಸಿ ಚಾಕು ಹಾಗೂ ಅದನ್ನು ಸುರಕ್ಷಿತವಾಗಿಡಲು ಪೌಚ್ (ಚೀಲ) ಕೊಂಡುಕೊಂಡಿದ್ದ. ಹಿಂದೆ ಯಾವುದಾದರೂ ಅಪರಾಧ ಕೃತ್ಯಕ್ಕೆ ಅದನ್ನು ಬಳಸಿದ್ದನೇ ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿಯನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆದಿದ್ದಾರೆ. ‘ನನ್ನ ಕೋಣೆಯಲ್ಲಿ ಪುಸ್ತಕಗಳ ರ‍್ಯಾಕ್ ಇದೆ. ಪೋಷಕರಿಗೆ ಗೊತ್ತಾಗದಂತೆ ಚಾಕುವನ್ನು ಅದರ ಹಿಂಭಾಗದಲ್ಲಿ ಅಡಗಿಸಿಟ್ಟಿದ್ದೆ. ದಯಾಸಾಗರ್ ನನಗೆ ಹೊಡೆಯುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಬುಧವಾರ ಬೆಳಿಗ್ಗೆ ಅದನ್ನು ಕಾಲೇಜಿಗೆ ತೆಗೆದುಕೊಂಡು ಹೋಗಿದ್ದೆ’ ಎಂದು ಆತ ಹೇಳಿರುವುದಾಗಿ ಪೊಲೀಸರು ತಿಳಿಸಿದರು.

ADVERTISEMENT

ಪ್ರೇಯಿಸಿಗೇ ಕಿರಿಕಿರಿ ಮಾಡಿದ: ‘ನಾನು ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದೆ. ಈ ವಿಚಾರ ತಿಳಿದ ದಯಾಸಾಗರ್, ನಮ್ಮಿಬ್ಬರನ್ನು ದೂರ ಮಾಡಲು ಹಲವು ರೀತಿಯಲ್ಲಿ ಸಂಚು ನಡೆಸಿದ್ದ. ‘ಅವನು ‌ಹುಡುಗಿಯರ ಜೀವನದ ಜತೆ ಆಟವಾಡುತ್ತಾನೆ. ಪ್ರೀತಿಸುವ ನಾಟಕವಾಡಿ ಮೋಸ ಮಾಡುತ್ತಾನೆ. ಅವನನ್ನು ನಂಬಬೇಡ’ ಎಂದು ನನ್ನ ನಡತೆ ಬಗ್ಗೆಯೇ ಕೆಟ್ಟದಾಗಿ ಆಕೆಗೆ ಸಂದೇಶಗಳನ್ನು ಕಳುಹಿಸಿದ್ದ’ ಎಂದು ರಕ್ಷಿತ್ ಹೇಳಿಕೆ ನೀಡಿದ್ದಾನೆ.

‘ಆ ಮೆಸೇಜ್‌ಗಳಿಗೆ ವಿದ್ಯಾರ್ಥಿನಿ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ, ಆಕೆಯ ಬಗ್ಗೆಯೂ ಅಶ್ಲೀಲ ಸಂದೇಶವೊಂದನ್ನು ಕಳುಹಿಸಿದ್ದ. ಆಗ ಅಳುತ್ತ ನನ್ನ ಬಳಿ ಬಂದು ಸಂದೇಶ ತೋರಿಸಿದ್ದಳು. ಆ ಪದಗಳನ್ನು ನೋಡಿ ನನ್ನ ರಕ್ತ ಕುದಿಯಿತು. ಆತನಿಗೆ ಒಂದು ಗತಿ ಕಾಣಿಸಬೇಕೆಂಬ ಯೋಚನೆ ಬಂತು.’

‘ಸೋಮವಾರ ಮಧ್ಯಾಹ್ನ ಇದೇ ವಿಚಾರವಾಗಿ ಕಾಲೇಜಿನ ಬಳಿ ನಮ್ಮಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಆಗ ಸ್ನೇಹಿತನ ಜತೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದ ಆತ, ‘ಇನ್ನು ಮುಂದೆ ಪ್ರತಿದಿನ ಆಕೆಗೆ ಮೆಸೇಜ್ ಕಳಿಸ್ತೀನಿ. ಅದೇನ್ ಮಾಡ್ತೀಯಾ ನಾನು ನೋಡೇ ಬಿಡ್ತೀನಿ’ ಎಂದು ಸವಾಲು ಹಾಕಿದ್ದ. ಎಲ್ಲರೆದುರು ಹಾಗೆ ಹೇಳಿದ್ದರಿಂದ ಅವಮಾನವಾಗಿತ್ತು. ಆಗಲೇ ಇನ್ನು ಮುಂದೆ ಸದಾ ಚಾಕು ಇಟ್ಟುಕೊಂಡು ತಿರುಗಾಡಬೇಕೆಂಬ ನಿರ್ಧಾರಕ್ಕೆ ಬಂದೆ’ ಎಂದೂ ವಿವರಿಸಿದ್ದಾನೆ.

‘ಎಚ್ಚರಿಸಲು ಕರೆದಿದ್ದೆಯಷ್ಟೇ’
‘ಕೊಲೆ ಮಾಡುವ ಸಲುವಾಗಿ ದಯಾಸಾಗರ್‌ನನ್ನು ಶೌಚಾಲಯಕ್ಕೆ ಕರೆದಿರಲಿಲ್ಲ. ಎಚ್ಚರಿಕೆ ನೀಡಿ ಕಳುಹಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ, ಕೊಠಡಿಗೆ ಬರುತ್ತಿದ್ದಂತೆ ಏಕಾಏಕಿ ಮೇಲೆರಗಿ ಆತನೇ ಮೊದಲು ಮುಖಕ್ಕೆ ಗುದ್ದಿದ. ಇದರಿಂದ ತುಟಿ ಹರಿದು ಹೋಯಿತು. ಆಗ ಸಿಟ್ಟಿನಲ್ಲಿ ಜೇಬಿನಿಂದ ಚಾಕು ತೆಗೆದು ಚುಚ್ಚಿಬಿಟ್ಟೆ. ಆನಂತರ ದಿಕ್ಕು ತೋಚದಂತಾಗಿ ಅಲ್ಲೇ ಕುಳಿತಬಿಟ್ಟಿದ್ದೆ’ ಎಂದು ರಕ್ಷಿತ್ ಹೇಳಿಕೆ ಕೊಟ್ಟಿದ್ದಾನೆ.

ಎಫ್‌ಎಸ್‌ಎಲ್‌ಗೆ ಮೊಬೈಲ್‌ಗಳು
‘ರಕ್ಷಿತ್ ಹಾಗೂ ದಯಾಸಾಗರ್‌ ಇಬ್ಬರೂ ವಾಟ್ಸ್‌ಆ್ಯಪ್ ಸಂದೇಶಗಳನ್ನು ಅಳಿಸಿ ಹಾಕಿದ್ದಾರೆ. ಅವುಗಳನ್ನು ವಾಪಸ್ ‌ಪಡೆಯುವ ಸಲುವಾಗಿ ಮೊಬೈಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ. ಶುಕ್ರವಾರ ವಿದ್ಯಾರ್ಥಿನಿಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು. ಕೋಣೆಯಲ್ಲಿ ಚಾಕು ಇಟ್ಟಿದ್ದಾಗಿ ಹೇಳಿರುವುದರಿಂದ ರಕ್ಷಿತ್‌ನನ್ನು ಮನೆಗೆ ಕರೆದೊಯ್ದು ಮಹಜರು ಮಾಡಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.