ಬೆಂಗಳೂರು: ‘ವಹ್ನಿಕುಲ ಕ್ಷತ್ರೀಯ ಸಮಾಜದ ವಿದ್ಯಾರ್ಥಿಗಳು ತಮ್ಮ ಮೂಲವನ್ನು ಮರೆಯಬಾರದು. ಮೂಲ ಮರೆತರೆ ಯಶಸ್ಸು ಸಾಧ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಸಲಹೆ ಮಾಡಿದರು.
ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರೀಯ) ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಸಮಾಜಕ್ಕೆ ನಿಮ್ಮದೇ ಆದ ಇತಿಹಾಸವಿದೆ. ನೀವು ಅದನ್ನು ಬಿಟ್ಟುಕೊಡಬೇಡಿ’ ಎಂದು ಹೇಳಿದರು
ಸಮಾಜದ ಮುಖಂಡರಿಂದ ಮನವಿ ಸ್ವೀಕರಿಸಿದ ಅವರು, ‘ಉಪಚುನಾವಣೆ ಮುಗಿದ ಬಳಿಕ ಸಮಾಜದ ಮುಖಂಡರನ್ನು ಕರೆಸಿ ಬೇಡಿಕೆಗಳ ಕುರಿತು ಚರ್ಚಿಸುತ್ತೇನೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.
‘ಬೆಂಗಳೂರಿನ ಕರಗ ಬಹಳ ದೊಡ್ಡ ಉತ್ಸವ. ಇದು ನಿಮಗೆ ಪರಂಪರೆಯಾಗಿ ಬಂದಿರುವ ಸಂಸ್ಕೃತಿ ಹಾಗೂ ಪದ್ಧತಿ. ಬೆಂಗಳೂರಿನ ಕರಗ ಉತ್ಸವ ದೇಶದ ಆಕರ್ಷಣೆ. ನೀವು ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದೀರಿ’ ಎಂದು ಶ್ಲಾಘಿಸಿದರು.
‘ತಿಗಳ ಸಮಾಜ, ನಂಬಿಕೆ ಹಾಗೂ ದುಡಿಮೆಗೆ ಹೆಸರಾಗಿದೆ. ಈ ಸಮಾಜದವರಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ನಿಮ್ಮ ಆಂತರಿಕ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಜತೆಗೂಡಿ ಚರ್ಚಿಸಿ, ಕೆಲಸ ಮಾಡುವುದರಿಂದ ಯಶಸ್ಸು ಸಾಧ್ಯವಾಗುತ್ತದೆ. ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು’ ಎಂದು ಹೇಳಿದರು.
ದೇವನಹಳ್ಳಿ ತಾಲ್ಲೂಕು ಬುಳ್ಳಳ್ಳಿ ಗ್ರಾಮದ ದ್ರೌಪದಿ ಆದಿ ಪರಾಶಕ್ತಿ ಮಹಾಸಂಸ್ಥಾನ ಪೀಠದ ಬಾಲಯೋಗಿಸಾಯಿ ಮಂಜುನಾಥ ಸ್ವಾಮೀಜಿ, ಹೊಸಕೋಟೆ ತಾಲ್ಲೂಕು ನಂದಗುಡಿ– ಶಿವನಾಪುರದ ವಹ್ನಿ ಕುಲಕ್ಷತ್ರೀಯರ ಗುರುಪೀಠದ ಪ್ರಣವಾನಂದಪುರಿ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್, ಸಂಘದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಉಪಾಧ್ಯಕ್ಷ ಕುಪ್ಪುಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.